• Thu. May 9th, 2024

PLACE YOUR AD HERE AT LOWEST PRICE

ದಲಿತ ವಿದ್ಯಾರ್ಥಿ ಕೆ.ರಾಕೇಶ್ ಕೊಲೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದಿಂದ ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ ಸಮಾಧಿಯಿಂದ ಶ್ರೀನಿವಾಸಪುರ ತಾಲ್ಲೂಕು ಕಛೇರಿವರೆಗೆ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ವಿದ್ಯಾರ್ಥಿ ಕೆ.ರಾಕೇಶ್ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದನು. ಇವನು ಯುವತಿಯೋರ್ವಳ ಜೊತೆ ಪ್ರೇಮಾಂಕುರಕ್ಕೆ ಬಿದ್ದಿದ್ದಾನೆ ಎಂದು ಭಾವಿಸಿದ ಯುವತಿಯ ಕಡೆಯವರು ಜುಲೈ ೧೭ರಂದು ಶ್ರೀನಿವಾಸಪುರ ಪಟ್ಟಣದ ಚಾಟ್ಸ್ ಅಂಗಡಿಯಲ್ಲಿ ಸ್ನೇಹಿತರ ಜೊತೆ ಸ್ನ್ಯಾಕ್ಸ್ ತಿನ್ನುತ್ತಿರುವಾಗ ಶ್ರೀನಿವಾಸಪುರ ಟೌನ್ ಜಗಜೀವನಪಾಳ್ಯದ ಸೋಮಶೇಖರ, ನಾಗೇಶ್, ನವೀನ್, ದಾಸಪ್ಪ ಹಾಗೂ ಮತ್ತಿತರರು ರಾಕೇಶ್‌ನನ್ನು ಬಲವಂತವಾಗಿ ಕರೆದೊಯ್ದು ಅಮಾನುಷವಾಗಿ ಮಾರಕಾಸ್ತçಗಳಿಂದ ಪ್ರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಚಲ್ದಿಗಾನಹಳ್ಳಿ ಗ್ರಾಮದ ಕೃಷಿಹೊಂಡದಲ್ಲಿ ರಾಕೇಶನ ಶವವನ್ನು ಬಿಸಾಡಿದ್ದಾರೆಂದು ಆರೋಪಿಸಿ ಇಂದು ಕಾಲ್ನಡಿಗೆ ಜಾಥಾ ನಡೆಸಿದರು.

ಬೆಳಿಗ್ಗೆ ೧೧ ಗಂಟೆಗೇ ಚಲ್ದಿಗಾನಹಳ್ಳಿಯ ರಾಕೇಶ್ ಸಮಾಧಿ ಸಮೀಪ ಜಮಾವಣೆಗೊಂಡ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಕೊಲೆಗಡುಕರನ್ನು ಬಂಧಿಸಲು ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಚಲ್ದಿಗಾನಹಳ್ಳಿಯಿಂದ ಸುಮಾರು ೫ ಕಿ.ಮೀ. ಕಾಲ್ನಡಿಗೆ ಜಾಥಾ ನಡೆಸಿ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ, ಹಿರಿಯ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ರಾಕೇಶ್ ಕೊಲೆಯ ಘಟನೆಯನ್ನು ಅತ್ಯಂತ ಸೂಕ್ಷö್ಮವಾಗಿ ನಿರ್ವಹಿಸಬೇಕಾದ ಜಿಲ್ಲಾಡಳಿತ ಅತ್ಯಂತ ನಿರ್ಲಜ್ಜ, ನಿರ್ಲಕ್ಷ್ಯ ಹಾಗೂ ಅಮಾನವೀಯ ಧೋರಣೆ ತೋರಿದ್ದು, ಸಂವೇದನೇಯೇ ಇಲ್ಲದ ದೋರಣೆಯಾಗಿದೆ ಎಂದು ಕಟು ಶಬ್ದಗಳಿಂದ ಟೀಕಿಸಿದರು.

ಈ ರೀತಿಯ ಕೊಲೆಗಳಾದಾಗ ಸಣ್ಣ ವಯಸ್ಸಿನ ಮಕ್ಕಳಿಗೆ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸುತ್ತದೆ. ಆಗ ಆ ವಯಸ್ಸಿನ ಮಕ್ಕಳಿಗೆ ದೊಡ್ಡ ರೀತಿಯ ತರಬೇತು ನೀಡಬೇಕಾಗುತ್ತದೆ. ಇಲ್ಲವಾದರೆ ಅವರ ವಿದ್ಯೆಗೆ ಬಹಳ ತೊಂದರೆಯಾಗತ್ತದೆ ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಅನೇಕ ರಾಕೇಶರನ್ನು ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಈ ಮಕ್ಕಳ ಕುಟುಂಬಗಳಲ್ಲಿ ಯಾರೂ ಬುದ್ದಿ ಹೇಳಲ್ಲ, ಶಾಲೆಯಲ್ಲೂ ಅಡ್ರೆಸ್ ಮಾಡಲ್ಲ, ಸಮಾಜವೂ ಹೇಳಲ್ಲ, ಸರ್ಕಾರವೂ ಮಾಡಲ್ಲ. ಮತ್ತೆ ಆ ಮಕ್ಕಳ ಸಮಸ್ಯೆಗಳನ್ನು ಬಗೆಹರಿಸುವವರು ಯಾರು ಎಂದು ಪ್ರಶ್ನಿಸಿದರು.

ಯಾವುದೇ ಗ್ರಾಮದಲ್ಲಿ ನಡೆದ ಎರಡು ಗುಂಪುಗಳ ಮದ್ಯೆ ಹಗೆತನ ಹುಟ್ಟಿದರೆ ಅದು ಪರಂಪರೆಯಾಗಿ ಬಿಡುತ್ತದೆ. ಕಂಬಾಲಪಲ್ಲಿ, ನಾಗಲಾಪಲ್ಲಿಯಲ್ಲಿ ಈಗಲೂ ಅದೇ ಪರಿಸ್ಥಿತಿ ಇದೆ. ಇದನ್ನು ನೀಗಿಸಲು ಜಿಲ್ಲಾಡಳಿತವಾಗಲೀ, ಸಂಘ ಸಂಸ್ಥೆಗಳಾಗಲೀ ಉತ್ತರ ಕಂಡುಕೊಳ್ಳಲಿಲ್ಲ, ಈಗ ಅಲ್ಲಿ ಹುಟ್ಟಿದ ಎರಡೂ ಘಟಕಗಳ ಮಕ್ಕಳು ಮುಂದೆ ಹೇಗೆ ಬೆಳೆಯಬೇಕೆಂದು ಯಾರೂ ಸೂಕ್ಷ್ಮವಾಗಿ ಚಿಂತಿಸಲಿಲ್ಲ. ಅದು ಇನ್ನಾದರೂ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಾಕೇಶ್ ಕೊಲೆಯ ಪ್ರಕರಣವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ವಚಿಸಿರುವ ತನಿಖಾ ರೀತಿ ಸಮರ್ಪಕವಾಗಿಲ್ಲ, ರಾಜಕೀಯ ಹಿತಾಸಕ್ತಿಗೆ ಮಣಿದಿರುವುದು ಮನದಟ್ಟಾಗುತ್ತಿದೆ. ಇನ್ನಾದರೂ ಸಮರ್ಪಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡರಾದ ಎನ್.ವೆಂಕಟೇಶ್ ಮಾತನಾಡಿ, ಇದು ದಲಿತ ಚಳುವಳಿಯ ಆರಂಭಿಕ ದಿನಗಳಲ್ಲಿ ತೆಗೆದುಕೊಂಡ ತೀರ್ಮಾನಗಳಂತೆ, ಈ ಸಮಾಜದ ಯಾವುದೇ ಜಾತಿಯವರು ಮತ್ತೊಂದು ಜಾತಿಯವರ ಮೇಲಾಗಲೀ ಅಥವಾ ಯಾವುದೇ ಗುಂಪು ಮತ್ತೊಂದು ಗುಂಪಿನ ಮೇಲೆ ದೌರ್ಜನ್ಯ ಅಥವಾ ಹತ್ಯೆ ನಡೆಸಿದರೆ ದಲಿತ ಚಳುವಳಿ ಬೀದಿಗಿಳಿದು ನೊಂದವರ ಬೆನ್ನಿಗೆ ನಿಲ್ಲಬೇಕೆಂಬ ಆಶಯದಂತೆ ರಾಕೇಶ್ ಕೊಲೆಗೆ ಕಾರಣರಾದವರನ್ನು ಬಂಧಿಸಬೇಕು ಎಂಬ ವಿಷಯದಲ್ಲಿ ಹಾಗೂ ರಾಕೇಶ್ ಕುಟುಂಬದ ಬೆನ್ನಿಗೆ ಚಳುವಳಿ ನಿಂತಿದೆ ಎಂದರು.

ರಾಕೇಶ್ ಕೊಲೆಗೆ ಕಾರಣರಾದವರನ್ನು ಬಂಧಿಸದೆ ಪೊಲೀಸ್ ಇಲಾಖೆ ರಾಜಕೀಯ ಹಿತಾಸಕ್ತಿಗೆ ಮಣಿದರೆ ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.

ಮತ್ತೋರ್ವ ಹಿರಿಯ ದಲಿತ ಮುಖಂಡ ಹಾಸನದ ಶ್ರೀಧರ್ ಕಲವೀರ ಮಾತನಾಡಿ, ಪೊಲೀಸರ ವೈಫಲ್ಯದಿಂದ ಇಂದು ಕೊಲೆಗಡುಕರು ಹೊರಗೆ ಓಡಾಡಿಕೊಂಡಿದ್ದಾರೆ. ಕಾನೂನು ಕೈಗೆತ್ತಿಕೊಂಡವರು ಎಷ್ಟೇ ಬಲಶಾಲಿಗಳಾಗಿದ್ದರೂ ನಾವು ಬಿಡಲ್ಲ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿತರನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಈ ಹೋರಾಟವನ್ನು ವಿಸ್ತರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಕೇಶ್ ತಂದೆ, ತಾಯಿ, ಮತ್ತು ಕುಟುಂಬದ ಸದಸ್ಯರು, ಹಿರಿಯ ಪತ್ರಕರ್ತ ಹಾಗೂ ದಲಿತ ಹೋರಾಟಗಾರ ಇಂದೂಧರ ಹೊನ್ನಾಪುರ, ಬಸವರಾಜ್ ಕೌತಾಳ್, ಆನಂದ್ ಬಂಢಾರಿ, ವಿ.ನಾಗರಾಜ್, ಆವಣಿಕಾಶಿ, ಪಿಚ್ಚಳ್ಳಿ ಶ್ರೀನಿವಾಸ್, ಹೆಚ್.ಮುನಿವೆಂಕಟಪ್ಪ, ಬಂಗವಾದಿ ನಾರಾಯಣಪ್ಪ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸೀತಪ್ಪ, ಹೆಬ್ಬಾಳ ವೆಂಕಟೇಶ್, ಮಾಲೂರು ಆನಂದ್, ಜಾನಪದ ಗಾಯಕ ಮುನಿರೆಡ್ಡಿ, ಹಾರೋಹಳ್ಳಿ ರವಿ, ಸಿ.ವಿ.ನಾಗರಾಜ್, ಹೂವರಸನಹಳ್ಳಿ ರಾಜಪ್ಪ, ಬಿ.ಶ್ರೀರಂಗ, ರಾಮಾಂಜಿನಮ್ಮ, ಚಲ್ದಿಗಾನಹಳ್ಳಿ ಪದ್ಮ, ಶ್ರೀಮತಿ ಮಧು ಚಾಮರಾಜನಗರ, ಕಲಾವಿದ ಜಂಬೆ ಬಾಲು, ಬಂದರ‍್ಲಹಳ್ಳಿ ಮುನಿಯಪ್ಪ, ವರ್ತನಹಳ್ಳಿ ವೆಂಕಟೇಶ್, ಅನಂದ್ ಸಿದ್ದಾರ್ಥ, ಕೆ.ಎಂ.ಸoದೇಶ್, ಸಿ.ಪಿ.ಎಂ. ನವೀನ್, ರೈತಸಂಘದ ವೀರಭದ್ರಸ್ವಾಮಿ, ಪಿಚ್ಚಳ್ಳಿ ಮಂಜುನಾಥ್, ಈನೆಲ ಈಜಲ ವೆಂಕಟಾಚಲಪತಿ, ದೊಡ್ಡಮಲೆ ರವಿ, ವೊದಲಿ ನಾರಾಯಣಸ್ವಾಮಿ, ಸುಮತಿ ಕ್ಯಾಸಂಬಳ್ಳಿ, ನವೀನ್ ಮಹರಾಜ್, ಮಾರುತಿ ಪ್ರಸಾದ್, ಜನಾಧಿಕಾರ ಮಂಜುಳ, ಮುತ್ತುಮಾರಿ, ದಿಶಾ, ದುರ್ಗಾ, ವಾಸು ಮತ್ತು ನೂರಾರು ಹೋರಾಟಗಾರರು ಭಾಗವಹಿಸಿದ್ದರು.

ಹಾಡುಗಾರರ, ಬರಹಗಾರರ ಕೊರಳುಗಳು ಮತ್ತು ಬರವಣಿಗೆಗಳು ಇಲ್ಲದಿದ್ದರೆ, ಚಳುವಳಿಗೆ ಉಸಿರೂ ಇರುವುದಿಲ್ಲ, ರಕ್ತವೂ ಇರುವುದಿಲ್ಲ:

ಹಾಡುಗಾರರ ಕೊರಳುಗಳು ಮತ್ತು ಬರಹಗಾರರ ಬರವಣಿಗೆಗಳು ಇಲ್ಲದಿದ್ದರೆ ಚಳುವಳಿಗೆ ಉಸಿರೂ ಇರುವುದಿಲ್ಲ, ರಕ್ತವೂ ಇರುವುದಿಲ್ಲ. ಹಾಗಾಗಿ ನಮ್ಮೊಳಗಿನ ಕೌರ್ಯ ಹಾಗೂ ವೈರುಧ್ಯಗಳನ್ನು ನಾವು ಕಣ್ಣುಬಿಟ್ಟು ನೋಡಲೇಬೇಕಾಗಿದೆ, ಕಲಾವಿದರನ್ನು ಉಳಿಸಿಕೊಳ್ಳಬೇಕು ಹಾಗೂ ಬೆಳಸಿಕೊಳ್ಳಬೇಕು. ಈವತ್ತಿನ ವರ್ತಮಾನವನ್ನು ಎದುರಿಸುವ ದಿಕ್ಕಿನಲ್ಲಿ ಸನ್ನದರಾಗಿ, ಭವಿಷ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ “ಬೆಸ್ತನ ಬೆಲೆಗೆ ಇತರೆ ಮೀನುಗಳನ್ನು ಸಿಲುಕಿಸುವ ಕೊರದ ಮೀನು ಸ್ವಭಾವದ ರಾಜಕೀಯ ಪ್ರಾತಿನಿಧ್ಯದ” ನಾಯಕರನ್ನು ನಿಗ್ರಹಿಸಬೇಕು. ಭವಿಷ್ಯದ ಮಕ್ಕಳಿಗಾಗಿ ಅವಧಿ ಮೀರಿದ ದಲಿತ ಸಂಘರ್ಷ ಸಮಿತಿಯನ್ನು ಮೀರಿ ಹೊಸದೊಂದನ್ನು ಕಟ್ಟಬೇಕಿದೆ.

– ಕೋಟಿಗಾನಹಳ್ಳಿ ರಾಮಯ್ಯ. ಸಂಸ್ಕೃತಿ ಚಿಂತಕರು ಹಾಗೂ ಹೋರಾಟಗಾರರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!