• Sun. May 5th, 2024

PLACE YOUR AD HERE AT LOWEST PRICE

ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಬರಿದಾಗಲಿದೆ ಮತ್ತು ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಗ್ಯಾರಂಟಿ ಯೋಜನೆಗಳ ಬಗೆಗೆ ಕಾಳಜಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, “ನರೇಂದ್ರ ಮೋದಿಯವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೇ, ಪ್ರಧಾನಿಯವರ ಅಭಿಪ್ರಾಯವೇ? ಇಲ್ಲವೆ ಪಕ್ಷದ ಅಭಿಪ್ರಾಯವೇ? ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಿ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ” ಎಂದು ಆಗ್ರಹಿಸಿದ್ದಾರೆ.

“ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ” ಎಂದು ಸವಾಲು ಹಾಕಿದ್ದಾರೆ.

“ಇಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಕರ್ನಾಟಕದ ಬಿಜೆಪಿ ನಾಯಕರು ಒಂದೇ ಸಮನೆ ನಮ್ಮ ಬೆನ್ನು ಹತ್ತಿದ್ದಾರೆ. ಬಡವರಿಗೆ ನೀಡುವ ಹೆಚ್ಚುವರಿ ಅಕ್ಕಿಯಲ್ಲಿ ಒಂದು ಕಾಳು ಕಡಿಮೆ ಮಾಡಿದರೂ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಡಿಯೂರಪ್ಪನವರು ಗುಡುಗುತ್ತಲೇ ಇದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು”‌ ಎಂದು ಪ್ರಶ್ನಿಸಿದ್ದಾರೆ.

“ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ನಂದಿನ ಹಾಲು ಉಚಿತವಾಗಿ ನೀಡುತ್ತೇವೆ ಎಂದು ಇತ್ತೀಚಿನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಕರ್ನಾಟಕದ ಬಿಜೆಪಿ ಭರವಸೆ ನೀಡಿತ್ತು. ಇದು ಫ್ರೀಬಿ, ರೇವ್ಡಿ ಯೋಜನೆಗಳಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ.

“ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಖಾತೆಗೆ ಮಾಸಿಕ 1000 ರೂಪಾಯಿ ಜಮೆ ಮಾಡುವ ಲಾಡ್ಲಿ-ಬೆಹನಾ ಯೋಜನೆಯ ಘೋಷಣೆ ಮಾಡಿದ್ದಾರೆ. ಇದನ್ನು 3000 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ?” ಎಂದು ವಾಗ್ದಾಳಿ ನಡೆಸಿದ್ದಾರೆ.

“ಕೇಂದ್ರ ಸರ್ಕಾರದ್ದೇ ಯೋಜನೆಯಾಗಿರುವ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಐದು ಕಿಲೋ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿದರೆ ಅದರಿಂದ ರಾಜ್ಯದ ಖಜಾನೆ ಬರಿದಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಐದು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುವ ಪಿಎಂ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಯಾವ ಗುಂಪಿಗೆ ಸೇರಿಸುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

“ಉಚಿತ ಸ್ವರೂಪದ ಎಂಟು ಯೋಜನೆಗಳನ್ನು ಕೇಂದ್ರ ಸರ್ಕಾರ ಅಂದಾಜು 1.25 ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. ಉಚಿತ ಯೋಜನೆಗಳನ್ನು ವಿರೋಧಿಸುತ್ತಿರುವ ನೀವು ಈ ಯೋಜನೆಗಳನ್ನು ಹೇಗೆ ಸಮರ್ಥಿಸುತ್ತೀರಿ? ಡಬಲ್ ಎಂಜಿನ್ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತು ಹೋಗಿರುವ ಕರ್ನಾಟಕದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನಾದೇಶವನ್ನು ನೀಡಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನುಡಿದಂತೆ ನಡೆಯುವ ಬದ್ಧತೆ ಹೊಂದಿರುವ ನಾವು ಕೊಟ್ಟ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

“ಬೆಲೆ ಏರಿಕೆ ಮತ್ತು ನಿರುದ್ಯೋಗಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಕೈಖಾಲಿ ಮಾಡಿಕೊಂಡಿರುವ ಜನಸಾಮಾನ್ಯರನ್ನು ಆರ್ಥಿಕ ಹೊರೆಯಿಂದ ಪಾರು ಮಾಡಲು, ಸಾಲದ ಶೂಲದಿಂದ ಕೆಳಗಿಳಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇಡೀ ದೇಶಕ್ಕೆ ಕರ್ನಾಟಕ ಮಾದರಿಯ ಆಡಳಿತದ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!