• Sun. May 5th, 2024

PLACE YOUR AD HERE AT LOWEST PRICE

By:ಬಸವರಾಜು ಮೇಗಲಕೇರಿ.

ಒಂದು ವರ್ಷ ನಿರಂತರವಾಗಿ ನಡೆದ, 700ಕ್ಕೂ ಹೆಚ್ಚು ರೈತರ ಬಲಿದಾನ ಪಡೆದ, ಸ್ವಾತಂತ್ರ್ಯಾನಂತರದ ಬೃಹತ್ರೈತ ಹೋರಾಟ ಕೇಸರಿ ಹರವೂ ಅವರಕಿಸಾನ್ ಸತ್ಯಾಗ್ರಹಚಿತ್ರದಲ್ಲಿ ಸೆರೆಯಾಗಿದೆ. ಸಾಕ್ಷ್ಯಾಚಿತ್ರದ ಇಂಗ್ಲಿಷ್ ಆವೃತ್ತಿ ಆಗಸ್ಟ್ 3ರಿಂದ Watch My Film ನಲ್ಲಿ https://www.watchmyfilm.com/movie/kisan-satyagraha ಜಗತ್ತನಾದ್ಯಂತ ಬಿಡುಗಡೆಯಾಗುತ್ತಿದೆದಯವಿಟ್ಟು ನೋಡಿ, ಹಂಚಿಕೊಳ್ಳಿ, ಮೂಲಕ ಇನ್ನಷ್ಟು ಸ್ವತಂತ್ರ ಸಮಕಾಲೀನ ಚಿತ್ರಗಳನ್ನು ನಿರ್ಮಿಸಲು ನೆರವಾಗಿ.

ಕೇಸರಿ ಹರವೂ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಸೃಜನಶೀಲ ಚಿತ್ರನಿರ್ದೇಶಕ. ಅದಕ್ಕಿಂತಲೂ ಮುಖ್ಯವಾಗಿ ಪರಿಸರಪ್ರೇಮಿ. ಅಪ್ಪಟ ಮನುಷ್ಯಪ್ರೇಮಿ. ರೈತರು, ಕಾರ್ಮಿಕರು, ಮಹಿಳೆಯರ ಪರ ನಿಂತವರು. ವರ್ಷಕಾಲ ನಡೆದ ಬಾಗೂರು-ನವಿಲೆ ರೈತ ಹೋರಾಟದ ಭಾಗವಾಗಿ, ಅವರೊಂದಿಗೇ ಬದುಕಿದವರು. ಗುಂಡ್ಯಾ ಜಲವಿದ್ಯುತ್‌ ಯೋಜನೆ ಕುರಿತು ಸಾಕ್ಷ್ಯಾ ಚಿತ್ರ ನಿರ್ಮಿಸಿ, ಜನರ ಮುಂದಿರಿಸಿ, ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದವರು.

ಪಶ್ಚಿಮಘಟ್ಟವನ್ನು ಉಳಿಸಿದವರು. ಅಘನಾಶಿನಿಯ ಮಕ್ಕಳನ್ನು ನಾಡಿಗೆ ಪರಿಚಯಿಸಿದವರು. ರೈತನಾನಾಯಕ ಪುಟ್ಟಣ್ಣಯ್ಯನವರನ್ನು ಹಾಗೂ ಕರ್ನಾಟಕದ ರೈತ ಹೋರಾಟವನ್ನು ಬೇರೆಯದೇ ರೀತಿ ಬಗೆದು ತೋರಿದವರು. ಹಾಗೆಯೇ ಅನ್ಯಾಯದ ವಿರುದ್ಧ ತಮ್ಮ ಇತಿಮಿತಿಯಲ್ಲಿಯೇ ಧ್ವನಿ ಎತ್ತಿ, ತಮ್ಮದೇ ಆದ ಅಭಿವ್ಯಕ್ತಿಯಲ್ಲಿ ಅನಾವರಣಗೊಳಿಸಿ ಜನರಲ್ಲಿ ಜಾಗೃತಿ ಉಂಟು ಮಾಡಿದವರು. ತನ್ನ ಪೊರೆದ ಸಮಾಜಕ್ಕೆ ತಾನೇನಾದರೂ ಕೊಡಬೇಕು ಎಂಬ ತುಡಿತವುಳ್ಳವರು. ಸರಳ-ಆದರ್ಶ ಬದುಕನ್ನು ಅಪ್ಪಿಕೊಂಡವರು.

ಇಷ್ಟೆಲ್ಲ ಇತಿಹಾಸವಿರುವ ಹರವೂ ದೂರದ ದೆಹಲಿ ಗಡಿಯಲ್ಲಿ ರೈತರು ಧರಣಿ ಕೂತರೆ, ಸುಮ್ಮನೆ ಕೂರುವುದುಂಟೆ? ದೆಹಲಿಗೂ ಹೋದರು. ರೈತ ಹೋರಾಟದಲ್ಲಿ ಭಾಗಿಯಾದರು. ಅವರ ಕಷ್ಟ-ಕಾರ್ಪಣ್ಯಗಳನ್ನು ಅರಿತು ಅರಗಿಸಿಕೊಂಡರು. ಆ ಹೋರಾಟವನ್ನು ʻಕಿಸಾನ್‌ ಸತ್ಯಾಗ್ರಹʼ ಎಂಬ ಸಾಕ್ಷ್ಯಾಚಿತ್ರದ ಮೂಲಕ ಸೆರೆ ಹಿಡಿದು, ಇಡೀ ಜಗತ್ತಿನ ಮುಂದೆ ಇಟ್ಟರು. ಐತಿಹಾಸಿಕ ದಾಖಲೆಗೆ ಕಾರಣಕರ್ತರಾದರು.

ಜೂನ್‌ 2020ರಲ್ಲಿ ದೇಶ ಕೋವಿಡ್ ಕಷ್ಟಕ್ಕೆ ಸಿಕ್ಕು ದಿಕ್ಕೆಟ್ಟು ಕೂತಿದ್ದಾಗ, ಜನಪ್ರತಿನಿಧಿಗಳು ಮಾಸ್ಕ್ ಏರಿಸಿಕೊಂಡು ಮಾತನಾಡದಂತಹ ಸ್ಥಿತಿಯಲ್ಲಿದ್ದಾಗ, ಕೇಂದ್ರದ ಎನ್‌ಡಿಎ ಸರಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಟ್ಟು ತರಾತುರಿಯಲ್ಲಿ ಪಾಸು ಮಾಡಿಕೊಂಡಿತ್ತು. ಮುಂದುವರೆದು ಸೆಪ್ಟೆಂಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ದೇಶದ ರೈತರ ಬದುಕಿಗೆ ಬಿಸಿನೀರು ಸುರಿದಿತ್ತು. ಈ ಕರಾಳ ಕಾಯ್ದೆಗಳಿಂದ ಕೃಷಿ ಕ್ಷೇತ್ರಕ್ಕೆ ಕತ್ತಲಾವರಿಸಿ, ರೈತ ಸಮೂಹ ಒಕ್ಕಲೆದ್ದುಹೋಗುವುದು ನಿಶ್ಚಿತ ಎಂದರಿತ ಪಂಜಾಬ್ ರೈತರು ಮೊದಲಿಗೆ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕಿಳಿದರು.

ಹಸಿರು ಕ್ರಾಂತಿಯ ಕಾಲದಲ್ಲಿ ಪಂಜಾಬ್ ಮತ್ತು ಹರ್ಯಾಣ ರೈತರಿಗೆ ಸರಕಾರವೇ ಶಕ್ತಿ ತುಂಬಿತ್ತು, ದೇಶದ ಅನ್ನದಾತರು ನೀವು ಎಂದು ಹಾಡಿ ಹೊಗಳಿತ್ತು. ಆದರೆ ಇಂದು ಅದೇ ಸರಕಾರ ಅದೇ ರೈತರನ್ನು ನಿರ್ಲಕ್ಷಿಸಿ, ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ಮೂರು ಕಾಯ್ದೆಗಳನ್ನು ತಂದು ರೈತರ ಭವಿಷ್ಯವನ್ನು ಬರಿದು ಮಾಡಿತ್ತು. ಈ ಕಾಯ್ದೆಗಳಿಂದ ಕೃಷಿ ನಂಬಿದ ನಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂಬುದನ್ನು ಅರಿತ ಪಂಜಾಬ್ ರೈತರು, ಅಕ್ಟೋಬರ್ 25, 2020ರಂದು ʻಪಂಜಾಬ್ ಬಂದ್ʼಗೆ ಕರೆ ಕೊಟ್ಟರು. ಒಡೆದು ಚೂರಾಗಿ ಹೋಗಿದ್ದ ರೈತ ಸಂಘಟನೆಗಳು ಒಂದಾದವು.

ಪಕ್ಷಭೇದ ಮರೆತು ರಾಜಕೀಯ ಪಕ್ಷಗಳು ಬೆಂಬಲಿಸಿದವು. ಕ್ರೀಡಾಪಟುಗಳು, ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು, ಅನಿವಾಸಿ ಭಾರತೀಯರು, ಸಾಮಾನ್ಯರು ರೈತರ ಪರ ನಿಂತರು. ಧಾರ್ಮಿಕ ಗುರುಗಳು ಕೈಜೋಡಿಸಿದರು. ʻಪಂಜಾಬ್‌ ಬಂದ್‌ʼ ಯಶಸ್ವಿಯಾಯಿತು. ಇದು ಕೃಷಿಯ ಅಸ್ತಿತ್ವವನ್ನೇ ಅಲ್ಲಾಡಿಸಲು ಹವಣಿಸಿದ ಕೇಂದ್ರ ಸರಕಾರಕ್ಕೆ ಎದುರಾದ ದೇಶದ ಮೊದಲ ಪ್ರತಿರೋಧ. ರೈತ ಹೋರಾಟಕ್ಕೆ ಸಿಕ್ಕ ನಿಜವಾದ ಜಯ.‌ ಸಂಘಟನೆಯಲ್ಲಿ ಶಕ್ತಿಯಿದೆ, ಒಟ್ಟಾದರೆ ಒಳಿತಿದೆ, ಭವಿಷ್ಯದ ಬದುಕಿದೆ ಎಂಬುದನ್ನು ತೆರೆದು ತೋರಿದ ಹೋರಾಟ.

ಈ ಹೋರಾಟ ರೈತರಲ್ಲಿ ಧೈರ್ಯವನ್ನು, ಉತ್ಸಾಹವನ್ನು ತಂದುಕೊಟ್ಟಿತು. ದೆಹಲಿ ಚಲೋಗೆ ಪ್ರೇರಣೆ ನೀಡಿತು. ರೈತರ ಟ್ರಾಕ್ಟರ್‌ಗಳು ರಸ್ತೆಗಿಳಿದವು. ಅತ್ತ ಕಡೆಯಿಂದ ಹರ್ಯಾಣ ರೈತರು ದೆಹಲಿಯತ್ತ ಹೆಜ್ಜೆ ಹಾಕಿದರು. ಆದರೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ಹೆದ್ದಾರಿಗೆ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್‌ ಹಾಕಿಸಿ, ರಸ್ತೆಗೆ ಗುಂಡಿ ತೋಡಿಸಿ, ರೈತರತ್ತ ರಬ್ಬರ್‌ ಬುಲೆಟ್‌ ಹಾರಿಸಿ, ಜಲಫಿರಂಗಿ ಮಾಡಿಸಿ ದಿಕ್ಕೆಡಿಸಲು ನೋಡಿದರು.

ಇದು ರೈತರು ಒಗ್ಗೂಡಲು, ಸರಕಾರದ ವಿರುದ್ಧ ಒಂದಾಗಿ ಹೋರಾಡಲು ಅನುಕೂಲ ಮಾಡಿಕೊಟ್ಟಿತು. ಪ್ರಭುತ್ವದ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ರೈತರು ನವೆಂಬರ್‌ 27ರ ಮುಂಜಾನೆ ದೆಹಲಿಯ ಸಿಂಘು, ಟಿಕ್ರಿ ಗಡಿಯಲ್ಲಿ ಜಮಾವಣೆಗೊಳ್ಳುವಂತಾಯಿತು. ಇವರನ್ನು ನೋಡಿ ಅತ್ತ ಕಡೆಯಿಂದ ಉತ್ತರ ಪ್ರದೇಶ, ಉತ್ತರಾಖಂಡದ ರೈತರೂ ಘಾಜಿಪುರ್‌, ಪಲ್ವಲ್ ಗಡಿಗೆ ಬಂದು ನೆಲೆಯಾದರು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನ ರೈತರೂ ಜೊತೆಗೂಡಿದರು. ಎಲ್ಲರೂ ಸೇರಿ ಲಕ್ಷಾಂತರವಾದರು.

ಇದು ಅಪರೂಪದ ಒಗ್ಗಟ್ಟಿನ ಸಂಘರ್ಷ, ಇಂತಹ ಐತಿಹಾಸಿಕ ಹೋರಾಟವನ್ನು ಎದುರು ನೋಡುತ್ತಿದ್ದ ಕೇಸರಿ ಹರವೂ ಜಾಗೃತರಾದರು. ದೂರದ ದೆಹಲಿಗೆ ಹೊರಟು ನಿಂತರು. ಆದರೆ ಕೈಯಲ್ಲಿ ಕಾಸಿಲ್ಲ. ಸ್ನೇಹಿತರು ಒಂದಷ್ಟು ಹಣ ಹೊಂದಿಸಿ ಕೊಟ್ಟರು. ಜೊತೆಗೆ ಪ್ರವೀಣ್ ಕುಮಾರ್‌ ಕರೆದುಕೊಂಡು ಹೊರಟರು. ಅವರ ತಂಡವೆಂದರೆ- ಇಬ್ಬರೆ. ಕ್ಯಾಮರಾಮನ್ ಪ್ರವೀಣ್ ಕುಮಾರ್‌, ಮಿಕ್ಕ ಕೆಲಸವೆಲ್ಲ ಕೇಸರಿಯವರದು.

ಡಿಸೆಂಬರ್‌ 2020ರ ಮೊದಲ ವಾರ ರೈತರ ಸತ್ಯಾಗ್ರಹವನ್ನು ಚಿತ್ರೀಕರಿಸಲು ಶುರು ಮಾಡಿದರು. ರಾತ್ರಿ ಹಗಲೆನ್ನದೆ ಚಿತ್ರೀಕರಿಸಿದರು. ಹತ್ತಾರು ಹಳ್ಳಿಗಳನ್ನು ಸುತ್ತಾಡಿದರು. ನೂರಾರು ಜನರನ್ನು ಕಂಡು ಮಾತನಾಡಿಸಿದರು. ಕೇಸರಿಯವರ ಉತ್ಸಾಹ, ಹುಮ್ಮಸ್ಸಿಗೆ ದೆಹಲಿ ಕನ್ನಡಿಗರು, ಬುದ್ಧಿಜೀವಿಗಳು, ರಾಜಕಾರಣಿಗಳು, ಪತ್ರಕರ್ತರು ಸಹಕರಿಸಿದರು.

ಆದರೆ, ಕೇಂದ್ರದ ಮೋದಿ ಸರಕಾರ, ಮನೆ ಮಠ ಬಿಟ್ಟು ಬಂದು ದೆಹಲಿ ಚಳಿಯಲ್ಲಿ ಧರಣಿ ಕುಳಿತ ಅನ್ನಧಾತರನ್ನು ಅರ್ಬನ್‌ ನಕ್ಸಲರು, ಖಲಿಸ್ತಾನಿ ಉಗ್ರರು, ಬಾಡಿಗೆ ಪ್ರತಿಭಟನಾಕಾರರು, ಅವರಾರೂ ರೈತರೇ ಅಲ್ಲ ಎಂಬ ಅಪಪ್ರಚಾರದಲ್ಲಿ ನಿರತವಾಯಿತು. ಸೋಷಿಯಲ್‌ ಮೀಡಿಯಾದಲ್ಲಿ ಕ್ಷಣಕ್ಕೊಂದು ಕತೆ ಕಟ್ಟಿ ಹಂಚತೊಡಗಿತು. ದುರದೃಷ್ಟಕರ ಸಂಗತಿ ಎಂದರೆ, ಅನ್ನ ಉಣ್ಣುವ ಕೆಲ ಪತ್ರಕರ್ತರು ಕೂಡ, ಪ್ರಭುತ್ವದ ಪರವಾಗಿ ನಿಂತು ರೈತರ ವಿರುದ್ಧ ದೇಶದ ಜನರನ್ನು ಎತ್ತಿಕಟ್ಟತೊಡಗಿದರು. ದೂಷಣೆ, ಆರೋಪ, ಅಪಮಾನ, ಮಳೆ, ಚಳಿಯ ಜೊತೆಗೆ ಕೊರೋನದ ಭಯಾತಂಕಗಳನ್ನೂ ಬದಿಗಿಟ್ಟ ರೈತರು ಬದಿಗಿಟ್ಟ ಜನವರಿ 26ರ, ದೆಹಲಿ ಕೆಂಪುಕೋಟೆ ಮುತ್ತಿಗೆಯತ್ತ ಗಮನವನ್ನು ಕೇಂದ್ರೀಕರಿಸಿದರು.

ಈ ಕುರಿತು ಮಾತನಾಡಿದ ಕೇಸರಿ ಹರವೂ, ‘ಚಿತ್ರೀಕರಣದುದ್ದಕ್ಕೂ ನನಗೆ ಬಹಳ ಮುಖ್ಯವಾಗಿ ಕಂಡದ್ದು, ದೇಶದ ವೈವಿಧ್ಯತೆ, ಸೌಹಾರ್ದತೆ, ಸಮಾನತೆ. ಎರಡುಮೂರು ಟ್ರಾಕ್ಟರ್‌ಗಳನ್ನು ಒಟ್ಟಿಗೆ ಜೋಡಿಸಿ, ಅದರಡಿ ಹಾಸಿಗೆ ಹಾಕಿ ತಾತ್ಕಾಲಿಕ ಮನೆ ಮಾಡಿಕೊಂಡು ಬದುಕಿದ ರೀತಿ, ನನಗೆ ನನ್ನೂರಿನ ದನಗಳ ಜಾತ್ರೆಯನ್ನು ನೆನಪಿಗೆ ತಂದಿತು. ಜಾತಿ ಮತ ಭೇದವಿಲ್ಲದೆ ಒಟ್ಟಿಗೆ ಕೂತು ಉಣ್ಣುವ, ಕಷ್ಟ ಹಂಚಿಕೊಳ್ಳುವ ಅವರ ಭಾಷೆ, ಭಾವುಣಿಕೆ ನನಗೆ ಭಾರತವನ್ನು ಪರಿಚಯಿಸಿತು. ಗಾಂಧಿ ನೆನಪಾದರು. ನನಗೆ ಇನ್ನೂ ವಿಶೇಷವಾಗಿ ಕಂಡಿದ್ದು, ಪಂಜಾಬಿನ ಮಹಿಳೆಯರ ದಿಟ್ಟತನ. ಆದರೆ ಉತ್ತರಕಾಂಡದ ಹೆಂಗಸರು ಮನೆ ಬಿಟ್ಟೇ ಹೊರಬರುವುದಿಲ್ಲ. ಇಂತಹ ಹೋರಾಟದಲ್ಲಿ ಮಹಿಳೆಯರಿದ್ದಾರೆಂದರೆ, ಅದನ್ನು ನೋಡುವ ದೃಷ್ಟಿಕೋನವೇ ಬೇರೆಯಾಗುತ್ತದೆ. ಈ ರೈತ ಹೋರಾಟದಲ್ಲಿ ಅದಿತ್ತು.

‘ಟಿಕ್ರಿ, ಸಿಂಘು, ಘಾಜಿಯಾಬಾದ್‌ ಮತ್ತು ಪಲ್ವಲ್ ಗಡಿಯಲ್ಲಿ ಬೀಡುಬಿಟ್ಟ ರೈತರಲ್ಲಿ ಶ್ರೀಮಂತರು, ಬಡವರು, ಕೂಲಿ ಕಾರ್ಮಿಕರು ಎಲ್ಲರೂ ಇದ್ದರು. ಇವರ ಜೊತೆಗೆ ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ಪತ್ರಕರ್ತರು, ರಾಜಕೀಯ ನಾಯಕರೂ ಇದ್ದರು. ಅಲ್ಲಿ ಎಲ್ಲರೂ ಸಮಾನರು. ಕೆಲವರು ಅಡುಗೆ ತಯಾರಿಸಿದರೆ, ಇನ್ನು ಕೆಲವರು ತರಕಾರಿ ಹೆಚ್ಚುತ್ತಿದ್ದರು, ಕಸ ಗುಡಿಸುತ್ತಿದ್ದರು, ಶೂ ಪಾಲಿಶ್‌, ಇಸ್ತ್ರಿ ಮಾಡಿಕೊಡುತಿದ್ದರು. ಅಲ್ಲಿ ಅತ್ಯಾಧುನಿಕ ವಾಷಿಂಗ್‌ ಮೆಷಿನ್‌, ಫ್ರಿಡ್ಜ್‌, ಟಿವಿಗಳಿದ್ದವು. ದಿನದ 24 ಗಂಟೆಯೂ ಇಂಟರ್‌ನೆಟ್‌ ಸೌಲಭ್ಯವಿತ್ತು. ಶಸ್ತ್ರ ಚಿಕಿತ್ಸೆಯೊಂದು ಬಿಟ್ಟು ಮಿಕ್ಕೆಲ್ಲ ವೈದ್ಯಕೀಯ ಸೇವೆ ಸಿಗುತ್ತಿತ್ತು. ಅದೆಲ್ಲಕ್ಕಿಂತ ಸಿಖ್‌ ಧರ್ಮಗುರುಗಳು, ʻರೈತಾಪಿ ಮಕ್ಕಳೆಲ್ಲ ಬೀದಿಗೆ ಬಂದಿದಾರೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕುʼ ಎಂದು ಲಂಗರು(ದಾಸೋಹ) ಸೇವೆಯಲ್ಲಿ ನಿರತರಾಗಿದ್ದರು. ಇದೆಲ್ಲವೂ ನಮ್ಮ ʻಕಿಸಾನ್‌ ಸತ್ಯಾಗ್ರಹʼದಲ್ಲಿ ದಾಖಲಾಗಿದೆ.

ʻನನ್ನ ಪರಿಸರ ಪ್ರೀತಿ, ಭೂಮಿಗಂಟಿ ಬದುಕುವ ಜನರ ಜೊತೆಗಿನ ನಂಟು ನನ್ನನ್ನು ರೈತ ಹೋರಾಟವನ್ನು ಹತ್ತಿರದಿಂದ ಕಂಡು, ಜಗತ್ತಿನ ಮುಂದಿರಿಸಲು ಪ್ರೇರೇಪಿಸಿತು. ಅದಕ್ಕಾಗಿ ‘ಕಿಸಾನ್ ಸತ್ಯಾಗ್ರಹ’ ಎಂಬ ಸಾಕ್ಷ್ಯಾಚಿತ್ರ ಮಾಡಿದೆ. ಅದು ಬರೀ ತೋರಿಕೆಗಲ್ಲ, ಲಾಭಕ್ಕಲ್ಲ, ಪ್ರಚಾರಕ್ಕಲ್ಲ. ನಾನು ಮಾಡಬೇಕಾದ್ದು, ಮಾಡಿದೆ’ ಎಂದರು.

700ಕ್ಕೂ ಹೆಚ್ಚು ರೈತರ ಬಲಿದಾನ, ಒಂದು ವರ್ಷ ನಿರಂತರವಾಗಿ ನಡೆದ ರೈತ ಹೋರಾಟಕ್ಕೆ ಮಣಿದ ಮೋದಿ ನೇತೃತ್ವದ ಕೇಂದ್ರ ಸರಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿದೆ. ಇದು ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಬೆಲೆ ಇದೆ, ಸಂವಿಧಾನದ ಆಶಯದಂತೆ ನಡೆದ ಸತ್ಯಾಗ್ರಹಕ್ಕೆ ನ್ಯಾಯ ಸಿಗುತ್ತದೆ ಎಂಬುದನ್ನು ಸಾಬೀತು ಮಾಡಿದೆ. ದೇಶ ಕಂಡ ಸ್ವಾತಂತ್ರ್ಯಾನಂತರದ ಈ ಬೃಹತ್‌ ರೈತ ಹೋರಾಟ ಚರಿತ್ರೆಯಲ್ಲಿ ದಾಖಲಾಗಲಿದೆ.

ಅಂತಹ ಹೋರಾಟವನ್ನು ಕಣ್ತುಂಬಿಕೊಳ್ಳಲು, “ಕಿಸಾನ್ ಸತ್ಯಾಗ್ರಹ” ಚಿತ್ರದ ಇಂಗ್ಲಿಷ್ ಆವೃತ್ತಿ ಆಗಸ್ಟ್ 3, 2023ರಿಂದ Watch My Film ನಲ್ಲಿ https://www.watchmyfilm.com/movie/kisan-satyagraha ಜಗತ್ತನಾದ್ಯಂತ ಬಿಡುಗಡೆಯಾಗುತ್ತಿದೆ.

ದಯವಿಟ್ಟು ನೋಡಿ, ಹಂಚಿಕೊಳ್ಳಿ, ಆ ಮೂಲಕ ಇನ್ನಷ್ಟು ಸ್ವತಂತ್ರ ಸಮಕಾಲೀನ ಚಿತ್ರಗಳನ್ನು ನಿರ್ಮಿಸಲು ನೆರವಾಗಿ.

ಬಸವರಾಜು ಮೇಗಲಕೇರಿ.

ಲೇಖಕ, ಪತ್ರಕರ್ತ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!