• Sat. Apr 27th, 2024

PLACE YOUR AD HERE AT LOWEST PRICE

ಬೆಂಗಳೂರು:ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಕಿರಾತಕರ ಸಂಖ್ಯೆ ಹೆಚ್ಚುತ್ತಿದೆ. ಕಂಡ ಕಂಡ ಜಾಗಕ್ಕೆ ಬೇಲಿ ಹಾಕುವವರ ಕಣ್ಣು ಸರ್ಕಾರಿ ಜಾಗವನ್ನೂ ಬಿಡುತ್ತಿಲ್ಲ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಅದರಲ್ಲೂ ಅಭಿವೃದ್ಧಿ ವೇಗಕ್ಕೆ ತಕ್ಕಂತೆ ಓಡುತ್ತಿರುವ ರಾಜಧಾನಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಒತ್ತುವರಿ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಖಡಕ್ ಸಂದೇಶ ಕೊಟ್ಟಿದೆ.

ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಒತ್ತುವರಿ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ ಒತ್ತುವರಿ ವಿಚಾರವನ್ನ ಗಂಭೀರವಾಗಿ ಚರ್ಚಿಸಿದ್ದಾರೆ. ಸಭೆಯಲ್ಲಿ ಮಾತಾಡಿದ ಸಚಿವರು ಬೆಂಗಳೂರು ನಗರ-ಗ್ರಾಮೀಣ ಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ಜಮೀನು ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿಲ್ಲ, ವಿಶೇಷ ಅಭಿಯಾನ ಕೈಗೊಂಡು ಸರ್ಕಾರಿ ಜಮೀನನ್ನ ಭೂಮಿ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವ ಕೆಲಸ ಆಗಬೇಕು ಎಂದಿದ್ದಾರೆ. ಇದರ ಜೊತೆಗೆ ಮತ್ತೊಂದು ಖಡಕ್ ಸಂದೇಶ ಕೊಟ್ಟಿದ್ದಾರೆ.

ಒತ್ತುವರಿಗೆ ಬ್ರೇಕ್.. ಬೀಟ್ ವ್ಯವಸ್ಥೆಗೆ ಆದೇಶ!

ಸಭೆಯಲ್ಲಿ ಒತ್ತುವರಿ ಮಾಡಿಕೊಂಡ ಕುಳಗಳಿಗೆ ಶಾಕ್ ಕೊಡಲು ಸಚಿವರು ಸೂಚನೆ ನೀಡಿ ಹಲವು ಕ್ರಮ ಜರುಗಿಸಲು ಸೂಚಿಸಿದ್ದಾರೆ. ಹಾಗೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಉಳಿಸಲು ಮತ್ತೊಂದು ಐಡಿಯಾ ಮಾಡಲಾಗಿದ್ದು, ಆಯಾ ಭಾಗದ ಗ್ರಾಮ ಆಡಳಿತ ಅಧಿಕಾರಿ ಅಂದರೆ ವಿಲೇಜ್ ಅಕೌಂಟೆಂಟ್ ಪ್ರತಿ 3 ತಿಂಗಳಿಗೆ ಒಂದು ಬಾರಿ ಸರ್ಕಾರಿ ಜಮೀನುಗಳಿಗೆ ಭೇಟಿ ನೀಡಿ, ಒತ್ತುವರಿ ಆಗಿಲ್ಲ ಎಂಬುದನ್ನು ಖಚಿತಪಡಿಸಬೇಕು. ಇಂತಹ ‘ಬೀಟ್’ ವ್ಯವಸ್ಥೆಯನ್ನು ಎಲ್ಲ ವಿಭಾಗದಲ್ಲೂ ಅಧಿಕಾರಿಗಳು ಪಾಲಿಸಬೇಕು ಎಂದು ಕಂದಾಯ ಸಚಿವರು ಸೂಚಿಸಿದ್ದಾರೆ.

ಒತ್ತುವರಿ ತೆರವಿಗೆ ಮುಹೂರ್ತ ಫಿಕ್ಸ್.

ಈಗಾಗಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವಾರಿಯಾದ ಸರ್ಕಾರಿ ಭೂಮಿ ಪಟ್ಟಿ ಸಿದ್ದಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಟ್ಟಿ ಸಂಪೂರ್ಣವಾಗಿ ಸಿದ್ದವಾಗುತ್ತಿದ್ದಂತೆ ವಾರಂತ್ಯಗಳಲ್ಲಿ ಒತ್ತುವರಿಯ ತೆರವಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಭೆಯಲ್ಲಿ ಸಚಿವರು ತಿಳಿಸಿದರು. ಈ ಮೂಲಕ ಒತ್ತುವರಿ ಮಾಡಿ, ಆರಾಮವಾಗಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದವರಿಗೆ ಶಾಕ್ ಸಿಕ್ಕಂತಾಗಿದೆ. ಮುಂದೆ ಇದೇ ರೀತಿ ಕಠಿಣ ಕ್ರಮ ಜರುಗಿಸಿ ಕೋಟ್ಯಂತರ ರೂಪಾಯಿ ಬೆಲೆ ಬಾಳವ ಭೂಮಿಯನ್ನ ಮತ್ತೆ ಸರ್ಕಾರದ ವಶಕ್ಕೆ ಪಡೆಯುವ ನಿರೀಕ್ಷೆ ಇದೆ.

ಜನರ ತೊಂದರೆ ಬೇಗ ನಿವಾರಿಸಿ ಜೊತೆಗೆ ಸರ್ವೆ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣವನ್ನ ವಿಲೇವಾರಿ ಮಾಡಲು 100 ಲೈಸೆನ್ಸ್ ಸರ್ವೇಯರ್, 257 ಸರ್ಕಾರಿ ಸರ್ವೇಯರ್ ಹಾಗೂ 27 ಎಡಿಎಲ್‌ಆರ್ ನೇಮಕಾತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಾಕಿ ಪ್ರಕರಣಗಳಿಂದ ಜನಗಳಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಮೂಲಕ ಸರ್ಕಾರ ಒತ್ತುವರಿಯ ವಿರುದ್ಧ ಖಡಕ್ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಲ್ಲೂ ಜಗತ್ತಿಗೆ ಕಾಣಿಸುವಂತೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡ ಕುಳಗಳಿಗೆ ಶಾಕ್ ಸಿಗೋದು ಪಕ್ಕಾ ಆಗಿದೆ. ಇದರ ಜೊತೆಗೆ ಕಂದಾಯ ಇಲಾಖೆಯ ಬಾಕಿ ಕೇಸ್‌ಗಳಿಗೆ ಮುಕ್ತಿ ಸಿಗುವ ಮುನ್ಸೂಚನೆ ಇದೆ.

ಅಧಿಕಾರಿಗಳು ಆಫೀಸ್ ಬಳಕೆಗೆ ಮುಂದಾಗಿ.

ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನ ಮಾಡಲಾಗಿದೆ. ಮುಂದೆ ರಾಜ್ಯದ ಎಲ್ಲಾ ಎಸಿ & ಡಿಸಿ ಕಚೇರಿಯಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕಡತಗಳು ಇ-ಆಫೀಸ್ ನಲ್ಲಿ ನನ್ನ ಲಾಗಿನ್‌ಗೆ ಬಂದರೆ 2 ದಿನಗಳಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತಃ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ-ಆಫೀಸ್ ಮೂಲಕ ಪರಿಹಾರ ನೀಡಬಹುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು. ಹಾಗೇ ಸಭೆಯಲ್ಲಿ ಸರ್ವೆ ಇಲಾಖೆ ಪ್ರಗತಿಯನ್ನೂ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ 7,271 ಪೈಕಿ ಪಹಣಿ ಬಾಕಿ ಇರುವುದನ್ನು ಸಚಿವ ಕೃಷ್ಣ ಬೈರೇಗೌಡ ಪರಿಗಣಿಸಿದರು. ಸುದೀರ್ಘ ಚರ್ಚೆ ನಂತರ 4 ತಿಂಗಳಲ್ಲಿ ಎಲ್ಲಾ ಪೈಕಿ ಪಹಣಿ ಪರಿಹರಿಸಲು ಸೂಚಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!