• Sun. Apr 28th, 2024

PLACE YOUR AD HERE AT LOWEST PRICE

ಇಂದಿನ ಅಧಿಕಾರಶಾಹಿ, ಅಂತಸ್ತು, ವ್ಯವಹಾರಿಕ ಬದುಕಿನ ಜಂಜಾಟದಲ್ಲಿ ನೊಂದವರ ಬಗ್ಗೆ ಕಾಳಜಿ ತೋರುವ ಅಧಿಕಾರಿಗಳು ಸಿಗುವುದೇ ಬೆರಳೆಣಿಕೆಯಷ್ಟು. ಅಂತಹವರಲ್ಲೊಬ್ಬ ಅಧಿಕಾರಿ ಮರುಭೂಮಿಯ ʼಓಯಸಿಸ್ʼ ನಂತೆ ತಮ್ಮ ವೃತ್ತಿ ಬದುಕಿನೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನವೀಯ ಮೌಲ್ಯಗಳ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆಎಎಸ್ ಅಧಿಕಾರಿ ಖಾಜಾ ಖಲೀಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ರಾಜ್ಯದ ಅತೀ ಎತ್ತರದ ವ್ಯಕ್ತಿಯ ವೈದ್ಯಕೀಯ ಖರ್ಚಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಬೀದರ್ ಜಿಲ್ಲೆಯ ಔರಾದ ತಾಲೂಕಿನ ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಚಿಂತಾಕಿ ಗ್ರಾಮದ ಮಾರುತಿ ಹಣಮಂತ ಕೋಳಿ ಅವರು ರಾಜ್ಯದ ಎತ್ತರದ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಅವರ ವಯಸ್ಸು 40ರ ಆಸುಪಾಸು. ಹಣಮಂತ ಅವರು ಬರೋಬ್ಬರಿ 7.5 ಅಡಿ ಎತ್ತರದ ದೇಹ ಹೊಂದಿದ್ದಾರೆ. ಇದೀಗ ಎರಡ್ಮೂರು ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ನಿಶ್ಯಕ್ತಿಯಿಂದಾಗಿ ಕೆಲಸ ಮಾಡುವುದಿರಲಿ, ಓಡಾಡಲು ಆಗದ ಪರಿಸ್ಥಿತಿಯಲ್ಲಿರುವ ಮಾರುತಿ ಅವರಿಗೆ ‘ತನ್ನ ದೇಹವೇ ತನಗೆ ಭಾರವಾಗಿ’ ಮುಂದಿನ ಬದುಕು ಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸಿದೆ.

ಚಿಕ್ಕವರಿರುವಾಗಲೇ ತಂದೆಯನ್ನು ಕಳೆದುಕೊಂಡ ಸಹೋದರರು ತಾಯಿಯ ಪೋಷಣೆಯಲ್ಲಿ ಬೆಳೆದರು. ಮೊದಲೇ ಬಡತನ, ಕೂಲಿ ಮಾಡಿ ಬದುಕು ಸಾಗಿಸುವ ತಾಯಿ, ಕಡು ಬಡತನದಿಂದಾಗಿ ಯಾರಿಗೂ ಶಿಕ್ಷಣ ಕೊಡಿಸಲಿಲ್ಲ. ಇಬ್ಬರು ಸಹೋದರರು ಸಹಜವಾಗಿ ಬೆಳೆದು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಮಾರುತಿ 15 ವರ್ಷ ವಯಸ್ಸಿನವರಿದ್ದಾಗ ಅವರ ದೇಹ ಇದ್ದಕ್ಕಿಂದ್ದಂತೆ ಎತ್ತರಕ್ಕೆ ಬೆಳೆಯಲಾರಂಭಿಸಿತು. ಮೂವತ್ತು ವರ್ಷ ತುಂಬುವ ವೇಳೆಗೆ ಅವರು ತುಂಬಾ ಎತ್ತರಕ್ಕೆ ಬೆಳೆದರು. ಮಾತ್ರವಲ್ಲದೆ, ಮಿತಿ ಮೀರಿ ಬೆಳೆದ ಎತ್ತರ ಬದುಕಿಗೆ ಭಾರವಾಗಿ ಪರಿಣಮಿಸಿ ಚರ್ಮ ರೋಗ ಸೇರಿದಂತೆ ವಿವಿಧ ರೋಗದಿಂದ ಹಾಸಿಗೆ ಹಿಡಿದಿದ್ದಾರೆ. ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಕುಟುಂಬಕ್ಕೆ ಮಾರುತಿ ಕೋಳಿ ಅವರ ಚಿಕಿತ್ಸೆ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಇದರಿಂದ ನೊಂದ ಕುಟುಂಬ ದಾನಿಗಳ ನೆರವು ಕೋರಿತ್ತು. ಅವರ ಬದುಕಿನ ಬಗ್ಗೆ ಈದಿನ.ಕಾಮ್ (nammasuddi.net ಸಹ)ವರದಿ ಮಾಡಿತ್ತು.

ಈದಿನ.ಕಾಮ್‌ ವರದಿಗೆ ಸ್ಪಂದಿಸಿದ ಕೆಎಎಸ್‌ ಅಧಿಕಾರಿ ಖಾಜಾ ಖಲೀಲ್ (ಮೂಲತ ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ(ದೇ) ಗ್ರಾಮದವರು. ಪ್ರಸ್ತುತ ಯಾದಗಿರಿ ಜಿಲ್ಲೆಯ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ) ಕೋಳಿ ಅವರಿಗೆ ಸಹಾಯಾಸ್ತ ಚಾಚಿಸಿದ್ದಾರೆ. ಮಾರುತಿ ಕೋಳಿ ಅವರಿಗೆ ಮಾಸಿಕ ಎರಡು ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ.

ಆಗಸ್ಟ್ 20ರಂದು ಕೆಎಎಸ್ ಅಧಿಕಾರಿ ಖಲೀಲ್ ಅವರು ಯಾದಗಿರಿಯಿಂದ ಬೀದರ್‌ಗೆ ತೆರಳಿ, ಕೋಳಿ ಅವರ ಮನೆಗೆ ಭೇಟಿ ನೀಡಿದ್ದರು. ಮಾರುತಿ ಹಾಗೂ ಕುಟುಂಬದ ಪರಿಸ್ಥಿತಿಯನ್ನು ಕಂಡು ಮರುಗಿದ ಖಲೀಲ್ ‘ನಿಮ್ಮೊಂದಿಗೆ ನಾನಿದ್ದೇನೆ, ಧೈರ್ಯವಾಗಿರಿ, ನನ್ನ ಉಸಿರಿರುವರೆಗೂ ಪ್ರತಿ ತಿಂಗಳು ನಿಮ್ಮ ಅಕೌಂಟ್‌ಗೆ ಕಳುಹಿಸುವೆ. ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ’ ಎಂದು ಆತ್ಮಸ್ಥೈರ್ಯ ತುಂಬಿದರು.

ಜೀವನಪೂರ್ತಿ 2 ಸಾವಿರ ನೀಡಲು ವಾಗ್ದಾನ:

ಕೆಎಎಸ್ ಅಧಿಕಾರಿ ಹಾಗೂ ಅವರ ಸ್ನೇಹಿತರು ವಿಶೇಷ ವ್ಯಕ್ತಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾರುತಿ ಕೋಳಿ ಅವರಿಗೆ ಮೊದಲ ತಿಂಗಳ ಎರಡು ಸಾವಿರ ನೀಡಿದರು. ಕೆಎಎಸ್ ಅಧಿಕಾರಿ ಖಾಜಾ ಖಲೀಲ್ ಅವರು ಮಾತನಾಡಿ, “ಮಾರುತಿ ಕೋಳಿ ಅವರ ಆರೋಗ್ಯ ಪರಿಸ್ಥಿತಿ ಕುರಿತು ಈದಿನ.ಕಾಮ್ ವರದಿ ಪ್ರಕಟಿಸಿತ್ತು. ಅಂದು ನಾನು ಕಚೇರಿಯಲ್ಲಿದ್ದೆ, ತಕ್ಷಣ ಬಾಲಾಜಿ ಕುಂಬಾರ ಅವರಿಗೆ ಕರೆ ಮಾಡಿ ಸಹಾಧನ ನೀಡುವ ಬಗ್ಗೆ ವಾಗ್ದಾನ ಮಾಡಿದ್ದೆ, ನನ್ನ ಕಡೆಯಿಂದ ಇದೊಂದು ಅಳಿಲು ಸೇವೆ ಎಂದು ಪರಿಗಣಿಸುವೆ, ಪ್ರತಿ ತಿಂಗಳು ಹಣ ಮುಟ್ಟಿಸುವೆ, ಈದಿನ.ಕಾಮ್ ಇಂಥ ಸಾಮಾಜಿಕ ಕಳಕಳಿಯ ಬಗ್ಗೆ ಸುದ್ದಿ ಹೆಚ್ಚೆಚ್ಚು ಪ್ರಕಟಿಸಲಿ” ಎಂದು ಆಶಿಸಿದರು.

“ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಬಗ್ಗೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಯೋಚಿಸಿದರೆ ಸಮಾಜ ಬದಲಾವಣೆಯಾಗಲು ಸಾಧ್ಯ” ಎಂದು ಹೇಳಿದರು.

ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಮಾತನಾಡಿ, “ಮಾರುತಿ ಕೋಳಿ ಎಂಬ ಎತ್ತರದ ವಿಶೇಷ ವ್ಯಕ್ತಿಯ ಬಗ್ಗೆ ಈದಿನ.ಕಾಮ್ ವರದಿ ಪ್ರಕಟಿಸಿತು. ಈ ಬಗ್ಗೆ ಸ್ನೇಹಿತರೂ ಆದ ಕೆಎಎಸ್ ಅಧಿಕಾರಿ ಖಲೀಲ್ ಅವರು ಗಮನಕ್ಕೆ ಬಂದ ಕೂಡಲೇ ಸ್ಪಂದಿಸಿ ನೆರವಿಗೆ ಧಾವಿಸಿದ್ದಾರೆ. ಇಂಥ ಅಪರೂಪದ ಅಧಿಕಾರಿಗಳು ಸಿಗುವುದು ಇಂದಿನ ಕಾಲದಲ್ಲಿ ಅಪರೂಪ, ವರದಿ ಪ್ರಕಟಿಸಿದ ಈದಿನ.ಕಾಮ್ ತಂಡ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿರುವ ಖಲೀಲ್ ಅವರ ಕಾರ್ಯಕ್ಕೆ ಸಮಾಜಕ್ಕೆ ಆದರ್ಶ” ಎಂದು ಹೇಳಿದರು.

ಸಮಾಜದಲ್ಲಿ ʼಸತ್ಯ-ನ್ಯಾಯ-ಪ್ರೀತಿʼ ಯೊಂದಿಗೆ ನೈಜ ಪತ್ರಿಕೋದ್ಯಮ ಉಳಿವಿಗಾಗಿ ಸದಾ ವಸ್ತುನಿಷ್ಠ, ಜನಪರ ಲೇಖನ, ಬರಹ, ಸುದ್ದಿಗಳನ್ನು ಪ್ರಕಟಿಸಲು ಈದಿನ.ಕಾಮ್ ಶ್ರಮಿಸುತ್ತಲೇ ಇದೆ. ನಿರ್ಗತಿಕರ, ಶೋಷಿತರ, ತಳ ಸಮುದಾಯಗಳ ನೋವಿಗೆ ದನಿಯಾಗುವ ಈದಿನ.ಕಾಮ್ ಗೆ ಇದೊಂದು ‘ಬಿಗ್ ಇಂಪ್ಯಾಕ್ಟ್’ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕ ರತಿಕಾಂತ ನೇಳಗೆ ಅಶೋಕ ಅಡಕೆ, ರಾಜಕುಮಾರ ಹೇಡೆ, ಸಂಜು ಚವ್ಹಾಣ, ಸಿದ್ದಪ್ಪ ನೇಳಗೆ, ರಾಹುಲ್, ಪ್ರಕಾಶ ಕೋಳಿ ಸೇರಿದಂತೆ ಗ್ರಾಮಸ್ಥರಿದ್ದರು.

ಇದನ್ನು ಓದಿ.

Edit Post “ರಾಜ್ಯದ ಅತಿ ಎತ್ತರದ ವ್ಯಕ್ತಿಗೆ ಬೇಕಿದೆ ಸಹಾಯ ಹಸ್ತ.” ‹ NAMMA SUDDI — WordPress

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!