• Mon. Apr 29th, 2024

PLACE YOUR AD HERE AT LOWEST PRICE

ಆತ ನನ್ನ ಮಗನಾಗಿರಬಹುದು. ಆದರೆ, ಆತ ಅಪರಾಧಿ. ಆತನನ್ನು ಗಲ್ಲಿಗೇರಿಸಿ ಎಂದು ಉಜ್ಜಯಿನಿಯಲ್ಲಿ ಬಾಲಕಿಯ ಅತ್ಯಾಚಾರ ಆರೋಪಿಯ ತಂದೆ ಹೇಳಿದ್ದಾರೆ. ಅಲ್ಲದೆ, ತನ್ನ ಮಗನ ಪರವಾಗಿ ನ್ಯಾಯಾಲಯದಲ್ಲಿ ಯಾರೂ ವಾದಿಸಬಾರದು ಎಂದು ಸ್ಥಳೀಯ ವಕೀಲರ ಸಂಘಕ್ಕೆ ಮನವಿ ಮಾಡಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಅತ್ಯಾಚಾರ ಎಸಗಿದ ಅಮಾನವೀಯ ಕೃತ್ಯ ನಡೆದಿತ್ತು. ಸಂತ್ರಸ್ತ ಬಾಲಕಿ ಅರೆಬೆತ್ತಲೆಯಾಗಿ ಬೀದಿ-ಬೀದಿಯಲ್ಲಿ ನೆರವು ಕೇಳುತ್ತಿದ್ದಳು. ಆ ಘಟನೆಯು ದೇಶದ ಮನಕಲಕಿತ್ತು.

ಆಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಭರತ್ ಸೋನಿ ಎಂಬಾತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಭರತ್ ಸೋನಿಯೇ ಅಪರಾಧಿ ಎಂದಿರುವ ಆತನ ತಂದೆ, ‘ತನ್ನ ಮಗನಿಗೆ ಮರಣದಂಡನೆ ವಿಧಿಸಬೇಕು’ ಎಂದಿದ್ದಾರೆ.

“ಇದು ನಾಚಿಕೆಗೇಡಿನ ಕೃತ್ಯ. ನಾನು ಆತನನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿಲ್ಲ. ನಾನು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ. ಆದ್ದರಿಂದ ಅವನನ್ನು ಗಲ್ಲಿಗೇರಿಸಬೇಕು” ಎಂದು ಆರೋಪಿ ಭರತ್ ಸೋನಿ ತಂದೆ ಹೇಳಿದ್ದಾರೆ.

ಉಜ್ಜಯಿನಿ ಬಾರ್ ಕೌನ್ಸಿಲ್ ಅಧ್ಯಕ್ಷ ಅಶೋಕ್ ಯಾದವ್ ಮಾತನಾಡಿ, “ಈ ಘಟನೆಯಿಂದ ದೇವಸ್ಥಾನ ನಗರಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಆರೋಪಿ ಪರವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳದಂತೆ ನಮ್ಮ ಸದಸ್ಯರಿಗೆ ಮನವಿ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ತನಿಖೆಗಾಗಿ ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಭರತ್ ಸೋನಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿಯನ್ನು ಇಂದೋರ್‌ನ ಸರ್ಕಾರಿ ಮಹಾರಾಜ ತುಕೋಜಿರಾವ್ ಹೋಳ್ಕರ್ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಕೆಯನ್ನು ಸಮಾಲೋಚಕರೊಬ್ಬರು ಕೌನ್ಸಲಿಂಗ್ ಮಾಡಿದ್ದು, ಆಕೆ ಸತ್ನಾ ಜಿಲ್ಲೆ ಮೂಲದವಳು ಎಂದು ಗೊತ್ತಾಗಿದೆ. ಆದರೆ, ಆಕೆ ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ತಿಳಿಸಿಲ್ಲ ಎಂದು ವರದಿಯಾಗಿದೆ.

ಸತ್ನಾದಲ್ಲಿ ಅದೇ ವಯಸ್ಸಿನ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಆದರೆ, ಸಂತ್ರಸ್ತೆ ಅದೇ ಹುಡುಗಿಯೇ ಎಂದು ದೃಢಪಡಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಏತನ್ಮಧ್ಯೆ, ಪ್ರತಿಪಕ್ಷ ಕಾಂಗ್ರೆಸ್ ಪ್ರಕರಣ ಸಂಬಂಧ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಮೌನ’ವನ್ನು ಪ್ರಶ್ನಿಸಿದೆ. “ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಆರೋಪಿಸಿದ್ದಾರೆ.

“ಮಧ್ಯಪ್ರದೇಶದಲ್ಲಿ ಮಹಿಳೆಯರು ದಲಿತ, ಬುಡಕಟ್ಟು ಸಮುದಾಯದಲ್ಲಿ ಹುಟ್ಟುವುದೇ ಪಾಪವಾಗಿದೆ. ಅಪ್ರಾಪ್ತರ ಮೇಲಿನ ಅತ್ಯಾಚಾರದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಅವರ (ಚೌಹಾಣ್) ಆಡಳಿತದ 18 ವರ್ಷಗಳಲ್ಲಿ 58,000 ಅತ್ಯಾಚಾರ ಪ್ರಕರಣಗಳು ಮತ್ತು 68,000 ಅಪಹರಣ ಪ್ರಕರಣಗಳು ವರದಿಯಾಗಿವೆ. ಆದರೆ ದೇಶದ ಪ್ರಧಾನಿ, ಗೃಹ ಸಚಿವರು ಮತ್ತು ಬಿಜೆಪಿಯ ಎಲ್ಲಾ ನಾಯಕರು ಸುಮ್ಮನೆ ಕುಳಿತಿದ್ದಾರೆ,” ಎಂದು ಸುಪ್ರಿಯಾ ಕಿಡಿಕಾರಿದ್ದಾರೆ.

ಘಟನೆಯ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಮೌನವಾಗಿರುವುದನ್ನು ಸುಪ್ರಿಯಾ ಪ್ರಶ್ನಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!