• Mon. Apr 29th, 2024

PLACE YOUR AD HERE AT LOWEST PRICE

ಕೋಲಾರ: ನಗರದ ವಾಲ್ಮೀಕಿ ಸಮುದಾಯ ಭವನದ ಜಾಗ ಒತ್ತುವರಿಯ ಬಗ್ಗೆ ಕಂದಾಯ ಇಲಾಖೆಯೊಂದಿಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ಜಾಗ ಒತ್ತುವರಿಯಾಗಿದ್ದರೆ,  ಜಾಗವನ್ನು ವಶಪಡಿಸಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಅದ್ದೂರಿಯಾಗಿ ಸಮುದಾಯದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ವಾಲ್ಮೀಕಿ ಜಯಂತಿ ಮಾಡಲು ಪರ ಮತ್ತು ವಿರೋಧಗಳು ನಡೆಯುತ್ತಾ ಇದ್ದು, ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆಗೆ ರಾಜಕೀಯ ಮಾಡಬಾರದು ಚುನಾವಣೆಯಲ್ಲಿ ಮಾತ್ರ ರಾಜಕಾರಣ ಇರಬೇಕೆ ಹೊರತು, ಅಭಿವೃದ್ಧಿ ಹಾಗೂ ಒಳ್ಳೆಯ ಕೆಲಸಗಳಿಗೆ ರಾಜಕೀಯ ಯಾವತ್ತೂ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕೋಲಾರ ಜಿಲ್ಲೆಯ ಅವಣಿಯಲ್ಲಿ ವಾಲ್ಮೀಕಿ ಆಶ್ರಮ ಇದ್ದು ಅದನ್ನು ಅಭಿವೃದ್ಧಿ ಪಡಿಸಲು ಪಕ್ಷಾತೀತವಾಗಿ ಜನಪ್ರತಿನಿಧಿಗಳ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ ಯಾವುದೇ ಸಮುದಾಯದ ನಾಯಕರು ಎನಿಸಿಕೊಂಡವರು ಕೇವಲ ಅವರು ಮಾತ್ರವೇ ಉದ್ದಾರವಾಗದೇ  ಸರಕಾರದ ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಮೂಲಕ ಅವರನ್ನು ಕೂಡ ಉದ್ದಾರ ಮಾಡುವ ಮೂಲಕ ನಿಜವಾದ ಜನನಾಯಕರು ಎನಿಸಿಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ ವಾಲ್ಮೀಕಿ ಜಯಂತಿಯಲ್ಲಿ ಸಮಾಜಿಕ ನ್ಯಾಯದಲ್ಲಿ ಎಲ್ಲಾ ಜಾತಿ ಧರ್ಮದವರು ಭಾಗವಹಿಸಿದ್ದಾರೆ ಇದು ಒಂದು ರೀತಿಯ ಸಂಗಮವಾಗಿದೆ ಅದೇ ರೀತಿ ಶಾಲಾ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳ ವಿಚಾರಗಳನ್ನು  ಚರ್ಚೆ ಮಾಡಿಸುವ  ಮೂಲಕ ಅವರ ವಿಚಾರಧಾರೆಗಳನ್ನು ಜನ ಸಮುದಾಯದ ಮಧ್ಯೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ  ಗೋವಿಂದರಾಜು ಮಾತನಾಡಿ  ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಜಾಗದ ಸಮಸ್ಯೆಯ ಬಗ್ಗೆ ಪ್ರಾರಂಭದಲ್ಲೇ ಕಂದಾಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರೆ ಇವತ್ತು ಇಂತಹ ಗೊಂದಲಗಳು ಉಂಟಾಗುತ್ತಾ ಇರಲಿಲ್ಲ ಜಿಲ್ಲಾಡಳಿತ ಗಟ್ಟಿಯಾಗಿ ನಿಂತು ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಬೇಕು ವಾಲ್ಮೀಕಿ ಅವರು ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿ ಆನಂತರ ಇಡೀ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ್ದು ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಇವತ್ತಿನ ವಾಲ್ಮೀಕಿ ಜಯಂತಿ ಜಿಲ್ಲೆಗೆ ಸೀಮಿತವಾಗಿ ಹೇಳುವುದಾದರೆ ಈ ದಿನವನ್ನು ಇತಿಹಾಸದ ಪುಟಗಳಲ್ಲಿ ಸೇರುವ ದಿನ ಕಳೆದ 20 ವರ್ಷಗಳ ಸುದೀರ್ಘ ಬೇಡಿಕೆಯಂತೆ  ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಡಳಿತದ ಅವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಇವತ್ತು ಕಟ್ಟಡ ಪೂರ್ಣಗೊಂಡಿದೆ ವಾಲ್ಮೀಕಿ ಭವನ ಲೋಕಾರ್ಪಣೆಗೊಂಡಿದೆ ಭಕ್ತಿಯಿಂದ ಶಿವನನ್ನು ಒಲಿಸಿಕೊಂಡ, ವಾಲ್ಮೀಕಿ, ಬೇಡರ ಕಣ್ಣಪ್ಪ, ವಿದ್ಯೆ ಕೊಟ್ಟ ಗುರುಗಳಿಗೆ ಹೆಬ್ಬರಳು ಕೊಟ್ಟ ಏಕಲವ್ಯ ಕೂಡ ವಾಲ್ಮೀಕಿ ಸಮುದಾಯದವರು ಎನ್ನುವುದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ವಿಷಯ ಎಂದರು

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆಗೆ ಸೀಮಿತ ಮಾಡದೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ನಮ್ಮ ಜೀವನದಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ವಾಲ್ಮೀಕಿ, ರಾಮಾಯಣದ ಮೂಲಕ ಸಂಸ್ಕಾರದ  ಹಾಗೂ ಆದರ್ಶಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ವಾಲ್ಮೀಕಿಯ ಸಂದೇಶಗಳು ಇಂದಿನ ಕಾಲಘಟ್ಟಕ್ಕೆ ಬಹಳ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೆಲವರು ಭವನ ಉದ್ಘಾಟನೆಗೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ್ದಾರೆ, ಸಮುದಾಯದ ಹಿರಿಯರು ಜನಪ್ರತಿನಿಧಿಗಳ ತಪ್ಪು ಇದ್ದರೆ ಮಾರ್ಗದರ್ಶನ ನೀಡಲಿ, ಆದರೆ ವಾಲ್ಮೀಕಿ ಸಮುದಾಯ ಭವನಕ್ಕೆ ತೊಂದರೆ ಕೊಡಬಾರದು.  ಎಲ್ಲಾ ಜಾತಿ ಧರ್ಮದ ಬಡವರಿಗೆ ಅನುಕೂಲವಾಗುವಂತೆ ಭವನ ಮಾಡಿರೋದು. ಅದು ಬಿಟ್ಟು ಒಳ್ಳೆಯ ಕೆಲಸಗಳಿಗೆ ತೊಂದರೆ ಕೊಡಬಾರದು ಸಮುದಾಯದ ಮಕ್ಕಳಿಗೆ ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಮುಂದೆ ಆದಷ್ಟು ಬೇಗ ಗುದ್ದಲಿ ಪೂಜೆ ನಡೆಸಲಾಗುತ್ತದೆ ಎಂದರು.

ನಗರಸಭೆ ಸದಸ್ಯ ಅಂಬರೀಷ್ ಪ್ರಾಸ್ತಾವಿಕವಾಗಿ ಮಾತನಾಡಿ, ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದಾಗಿನಿಂದ ಇಲ್ಲಿಯ ತನಕ ಭವನ ಪೂರ್ಣ ಆಗುವ ತನಕ ಸಹಕರಿಸಿದ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನೆನೆಯುತ್ತಾ,, ಇಂದಿನ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ವಿಶೇಷ ಧನ್ಯವಾದಗಳು ಎಂದು ತಿಳಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ 11 ಗಂಟೆಗೆ ಕಾಲೇಜು ವಾಲ್ಮೀಕಿ ವೃತ್ತದ ಮಂಟಪದಿಂದ ತಾಲ್ಲೂಕಿನ ವಿವಿಧ ಗ್ರಾಮಪಂಚಾಯಿತಿಗಳಿಂದ ಆಗಮಿಸಿದ್ದ ಸುಮಾರು ೪೦ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವೀರಗಾಸೆ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ ಮತ್ತು ತಮಟೆ ವಾಧನ ತಂಡಗಳು ಭಾಗವಹಿಸಿದ್ದವು. ಸಮುದಾಯ ಪಲ್ಲಕ್ಕಿಗಳ ಜೊತೆಗೆ ಕೆಲವು ಹಿರಿಯ ಸಮುದಾಯ ಮುಖಂಡರ ಗೈರು ಹಾಜರಿ ಎದ್ದು ಕಾಣುತಿತ್ತು.

 ಈ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆ ತೋರಿದ ಸಮುದಾಯದ ವಿದ್ಯಾರ್ಥಿಗಳಿಗೆ ಇಲಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಸಿಇಒ ಪದ್ಮ ಬಸವಂತಪ್ಪ, ಎಸ್ಪಿ ಎಂ.ನಾರಾಯಣ, ಕೆಜಿಎಫ್ ಎಸ್ಪಿ ಕೆ.ಎಂ ಶಾಂತರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್, ತಾಲೂಕು ಅಧಿಕಾರಿ ಚನ್ನಬಸಪ್ಪ, ಸಮುದಾಯದ ಮುಖಂಡರಾದ ಮಾಲೂರು ವೆಂಕಟರಾಮ್, ಕುಡುವನಹಳ್ಳಿ ಆನಂದ್, ಕಾಂಗ್ರೆಸ್ ಮುಖಂಡರಾದ ಚಂಜಿಮಲೆ ರಮೇಶ್, ಸೀಸಂದ್ರ ಗೋಪಾಲಗೌಡ, ಸೇರಿದಂತೆ ವಾಲ್ಮೀಕಿ ಸಮುದಾಯದ ಹಾಗೂ ದಲಿತ ಸಂಘಟನೆಯ ಮುಖಂಡರು ಇದ್ದರು .

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!