• Wed. May 15th, 2024

PLACE YOUR AD HERE AT LOWEST PRICE

ಡಿಸೆಂಬರ್ 4 ಮತ್ತು 5ರಂದು ತಮಿಳುನಾಡಿನ ಉತ್ತರ ಕರಾವಳಿ ಪ್ರದೇಶಕ್ಕೆ ‘ಮೈಚಾಂಗ್ ಚಂಡಮಾರುತ’ ಅಪ್ಪಳಿಸಿದ್ದು, ಭಾರೀ ಮಳೆಗೆ ಚೆನ್ನೈ ನಗರ ಹಾಗೂ ಅಕ್ಕಪಕ್ಕದ ಜಿಲ್ಲೆಗಳು ತತ್ತರಿಸಿವೆ. ನಗರದ ಬಹುತೇಕ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳು ಜಲಾವೃತವಾಗಿದ್ದು, ಪ್ರವಾಹಕ್ಕೆ ಸಿಲುಕಿರುವ ಜನರನ್ನು ಮೀನುಗಾರಿಕಾ ದೋಣಿಗಳು ಮತ್ತು ಕೃಷಿ ಟ್ರ್ಯಾಕ್ಟರ್‌ಗಳ ಮೂಲಕ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಹನ್ನೆರಡು ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರವಾಹದಿಂದ ಗಾಯಗೊಂಡಿರುವ 11 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈ ನಗರದಾದ್ಯಂತ ಎಲ್ಲ ಮಳೆ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಲವಾರು ಜಿಲ್ಲಾ ವಿಪತ್ತು ಪ್ರತಿಕ್ರಿಯೆ ತಂಡಗಳನ್ನು (DDRT) ರಚಿಸಲಾಗಿದೆ.

ನಗರದ ಹೊರವಲಯದಲ್ಲಿರುವ ಮುತ್ಯಾಲಪೇಟೆ ಪ್ರದೇಶದಲ್ಲಿ 54 ಕುಟುಂಬಗಳನ್ನು ರಕ್ಷಿಸಲಾಗಿದ್ದು, ಹೆರಿಗೆಯಾದ ಮಹಿಳೆಯನ್ನು ನಗರದ ಸಾಲಿಗ್ರಾಮದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಗ್ಗು ಪ್ರದೇಶದ 250ಕ್ಕೂ ಹೆಚ್ಚು ಜನರು ಕೊಟ್ಟೂರ್ಪುರಂನ ಶಾಲೆಯ ಆಶ್ರಯ ಪಡೆದಿದ್ದಾರೆ. ಮಳೆ ನೀರಿನಲ್ಲಿ ಸಿಲುಕಿದ್ದ ಬಸ್‌ನಲ್ಲಿದ್ದ 22 ಪ್ರಯಾಣಿಕರನ್ನು ಪಲ್ಲಾವರಂನ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಮಂಗಳವಾರ ಬೆಳಿಗ್ಗೆಯಿಂದ, ಚೆನ್ನೈನ ಹೆಚ್ಚಿನ ಭಾಗಗಳಲ್ಲಿ ಮಳೆ ಬಿಡುವು ಕೊಟ್ಟಿತ್ತು. ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ರಕ್ಷಣಾ ಕಾರ್ಯಚರಣೆ ಮತ್ತು ಪರಿಹಾರ ಕಾರ್ಯವನ್ನು ಚುರುಕುಗೊಳಿಸಿದರು.

ಚೆನ್ನೈ ಕಾರ್ಪೊರೇಷನ್ ಪ್ರಧಾನ ಕಛೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲು ಹಾಗೂ ಪರಿಹಾರ ಕಾರ್ಯಗಳಿಗಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

‘ಚೆನ್ನೈ ಸೇರಿದಂತೆ ಒಂಬತ್ತು ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ಸಾಕಷ್ಟು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ ಅಂದಾಜು 11 ಲಕ್ಷ ಆಹಾರ ಪ್ಯಾಕೆಟ್‌ಗಳು ಮತ್ತು ಒಂದು ಲಕ್ಷ ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಹಂತ ಹಂತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. 2015ರ ಪ್ರವಾಹಕ್ಕೆ ಹೋಲಿಸಿದರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ನಗರದ ಹೊರವಲಯದಲ್ಲಿರುವ ಚೆಂಬರಂಬಾಕ್ಕಂ ಜಲಾಶಯದಿಂದ ಅಡ್ಯಾರ್ ನದಿಗೆ ಮುನ್ಸೂಚನೆ ನೀಡದೆ ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದರಿಂದ 2015ರಲ್ಲಿ ಮಾನವ ನಿರ್ಮಿತ ಪ್ರವಾಹಕ್ಕೆ ಕಾರಣವಾಯಿತು. ಪ್ರಸ್ತುತ ಪರಿಸ್ಥಿತಿ ಹಾಗೂ ಧಾರಾಕಾರ ಮಳೆಯಿಂದ ಉಂಟಾದ ನೈಸರ್ಗಿಕ ಪ್ರವಾಹವನ್ನು ರಾಜ್ಯವು ಸಮರ್ಥವಾಗಿ ನಿರ್ವಹಿಸಿದೆ’ ಎಂದು ಹೇಳಿದರು.

‘ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡ 12 ಜನರಲ್ಲಿ ಫೋರ್ಶೋರ್ ಎಸ್ಟೇಟ್‌ನಲ್ಲಿ 60 ವರ್ಷದ ಮಹಿಳೆ ಮತ್ತು ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ 48 ವರ್ಷದ ವ್ಯಕ್ತಿ ಸೇರಿದ್ದಾರೆ’ ಎಂದು ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್‌ನ ಅಂಬತ್ತೂರು ಡೈರಿಯು ಸಂಪೂರ್ಣ ಮುಳುಗಡೆಯಾದ ಕಾರಣ ಐದು ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಘಟಕದ ಕಾರ್ಯಾಚರಣೆಗೆ ತೊಂದರೆಯಾಗಿದೆ’ ಎಂದು ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಟಿ ಮನೋ ತಂಗರಾಜ್ ಹೇಳಿದ್ದಾರೆ.

ನಗರದಲ್ಲಿ ಪ್ರವಾಹ ತಗ್ಗಿಸುವ ಕಾರ್ಯಗಳಿಗಾಗಿ ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ನೆರೆಯ ಜಿಲ್ಲೆಗಳಿಂದ 5000 ಕಾರ್ಮಿಕರನ್ನು ಕರೆತಂದಿದ್ದಾರೆ. ಈ ಕಾರ್ಮಿಕರು ಕೃಷಿ ಟ್ರ್ಯಾಕ್ಟರ್‌ಗಳು ಮತ್ತು ಮೀನುಗಾರಿಕಾ ದೋಣಿಗಳನ್ನು ಬಳಸಿಕೊಂಡು ಪೆರಿಯಾಮೆಟ್ ಮತ್ತು ಉತ್ತರ ಚೆನ್ನೈನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಹಾಗೂ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಚೆನ್ನೈ ಉಪನಗರ ತಾಂಬರಂ, ಅಶೋಕ್ ನಗರ, ಕಟ್ಟುಪಾಕ್ಕಂ ಮತ್ತು ಪೆರುಂಗುಡಿ ಮುಂತಾದ ಪ್ರದೇಶಗಳಲ್ಲಿ ಹಲವಾರು ಗಂಟೆಗಳ ಕಾಲ ಮಳೆ ನಿಂತಿದ್ದರೂ ವಿದ್ಯುತ್ ಮರುಸ್ಥಾಪನೆಯಾಗಿಲ್ಲ. ಈ ಪ್ರದೇಶ ಪ್ರಮುಖ ರಸ್ತೆಗಳಲ್ಲಿ ನೀರು ಇಳಿಮುಖವಾಗಿದ್ದರೂ ವಿದ್ಯುತ್ ಸಂಪರ್ಕ ಮರು ಸ್ಥಾಪಿಸಿಲ್ಲ ಎಂದು ಅಶೋಕನಗರ ನಿವಾಸಿಗಳು ಸಂಕಷ್ಟ ತೋಡಿಕೊಂಡಿದ್ದಾರೆ.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!