• Mon. May 13th, 2024

PLACE YOUR AD HERE AT LOWEST PRICE

ಕೋಲಾರ: ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಹೇಸಿಗೆ ತೆಗೆಸಿರುವ ಅಮಾನವೀಯ ಘಟನೆ ಕೋಲಾರದ ಮಾಲೂರು ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯೊಂದರಲ್ಲಿ ಜರುಗಿದೆ.

ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ. ಗುಂಡಿಗೆ ಇಳಿಸಿದ ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

‘ಅದು ಮಲದ ಗುಂಡಿ ಅಲ್ಲ; ಸ್ವಚ್ಛತಾ ಅಂದೋಲನ ಅಂಗವಾಗಿ ಚೇಂಬರ್‌ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ‘ಅದು ಮಲದ ಗುಂಡಿ’ ಎಂದು ಅಲ್ಲಿನ ಶಿಕ್ಷಕರೊಬ್ಬರು ಖಚಿತಪಡಿಸಿ ದ್ದಾರೆ. ‘ಅದು ಮಲದ ಗುಂಡಿ ಅಲ್ಲದಿದ್ದರೂ ಚೇಂಬರ್‌ನೊಳಗಾದರೂ ನಮ್ಮ ಮಕ್ಕಳನ್ನು ಏಕೆ ಇಳಿಸಬೇಕು’ ಎಂದು ಪೋಷಕರು ಪ್ರಶ್ನಿಸಿದ್ದಾರೆ.

ಪ್ರಾಂಶುಪಾಲರು ಹಾಗೂ ಶಿಕ್ಷಕರೊಬ್ಬರ ಸಮ್ಮುಖದಲ್ಲೇ ಏಳರಿಂದ ಒಂಬತ್ತನೇ ತರಗತಿಯ ಐದಾರು ಮಕ್ಕಳನ್ನು ಮಲದ ಗುಂಡಿ ಸ್ವಚ್ಛಗೊಳಿಸಲು ಇಳಿಸಲಾಗಿದೆ. ಈ ಘಟನೆ ಮೂರ‍್ನಾಲ್ಕು ದಿನಗಳ ಹಿಂದೆ ನಡೆದಿರುವುದು ಖಚಿತವಾಗಿದೆ.

ವಿವಿಧ ಗ್ರಾಮಗಳಿಂದ ಬಂದಿರುವ 6ರಿಂದ 10ನೇ ತರಗತಿಯ 250 ಮಕ್ಕಳು ಈ ವಸತಿ ಶಾಲೆಯಲ್ಲಿ ಇದ್ದಾರೆ. ಪ್ರಾಂಶುಪಾಲರು, ಶಿಕ್ಷಕರು, ವಾರ್ಡನ್‌ಗೆ ಅಲ್ಲಿಯೇ ವಸತಿ ವ್ಯವಸ್ಥೆ ಇದೆ. ‘ಮಲದ ಪಿಟ್‌ನೊಳಗೆ ಇಳಿಸಿ ಕಸ ತೆಗೆಸಿದರು. ನಾವು ಬಕೆಟ್‌ನಲ್ಲಿ ಕಸ ತುಂಬಿ ಕೊಟ್ಟೆವು. ಕೆಲವರು ಮೇಲಿಂದ ನೀರು ಹಾಕಿದರು. ಐದಾರು ಮಕ್ಕಳು ಇದ್ದೆವು. ವಿಪರೀತ ಹಿಂಸೆ ಕೊಡುತ್ತಾರೆ. ಇಲ್ಲಿ ಇರುವುದೇ ಬೇಡ ಅನಿಸುತ್ತಿದೆ’ ಎಂದು ಮಕ್ಕಳು ವಿಡಿಯೊದಲ್ಲಿ ನೋವು ತೋಡಿಕೊಂಡಿದ್ದಾರೆ.

ಮಕ್ಕಳು ಗುಂಡಿಯೊಳಗಿರುವ ಫೋಟೊಗಳನ್ನು ಶಾಲೆಯ ಶಿಕ್ಷಕರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಯಾರಿಗೂ ಗೊತ್ತಾಗದಂತೆ ಮಕ್ಕಳನ್ನು ಮಾತನಾಡಿಸಿ ವಿಡಿಯೊ ಮಾಡಿದ್ದಾರೆ.  ಈ ವಿಷಯ ತಿಳಿಯುತ್ತಲೇ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಆರ್‌.ಶ್ರೀನಿವಾಸ್‌ ಅವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪ್ರಾಂಶುಪಾಲರು ಹಾಗೂ ವಾರ್ಡನ್‌ ಸೇರಿದಂತೆ ಯಾರೂ ವಸತಿ ನಿಲಯದಲ್ಲಿ ಇರುವುದಿಲ್ಲ. ಹಿಂಸೆ ತಾಳಲಾರದೆ ಕೆಲ ಮಕ್ಕಳು ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿದ್ದಾರೆ’ ಎಂದು ಕೆಲ ಶಿಕ್ಷಕರು ಹಾಗೂ ಪೋಷಕರು ಪತ್ರಿಕೆಗೆ ತಿಳಿಸಿದರು. ಚಳುವಳಿಗಳ ತವರೂರು ಕೋಲಾರ ಜಿಲ್ಲೆಯಲ್ಲಿ ದಲಿತ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ, ಅಬಾಲಿಶನ್ ಆಫ್ ಮ್ಯಾನುವಲ್ ಸ್ಕ್ಯಾವೇಂಜಿಂಗ್ ಆಕ್ಟ್ 1993 ರ ಉಲ್ಲಂಘನೆ ಆಗಿದ್ದರೂ ಈ ಬಗ್ಗೆ ಇನ್ನೂ ಪ್ರಕರಣ ದಾಖಲು ಮಾಡಿಲ್ಲ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ರಾತ್ರಿ ಲೈಟ್‌ ಆಫ್‌ ಮಾಡಿ ಬ್ಯಾಗ್‌ ಸಮೇತ ಹಾಸ್ಟೆಲ್‌ ಹೊರಗಡೆ ಮಂಡಿಯೂರಿ ಕೂರಿಸಿ ಶಿಕ್ಷೆ ಕೊಡುತ್ತಾರೆ. ಸುಸ್ತಾಗುತ್ತಿದೆ ಎಂದರೂ ಕೇಳಲ್ಲ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಮಕ್ಕಳಿಗೆ ತರಗತಿಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳಿಗೆ ಹಿಂಸೆ ನೀಡುವುದು ಹಾಗೂ ದಲಿತ ವಿದ್ಯಾರ್ಥಿಗಳ ಕೈಯಲ್ಲಿ ಮಲದ ಗುಂಡಿ ಶುಚಿಗೊಳಿಸುವುದು ಅಮಾನವೀಯವಾಗಿದೆ. ಸರ್ಕಾರದ ಅಧೀನದಲ್ಲಿ ನಡೆಯುವ ಮೊರಾರ್ಜಿ ದೇಸಾಯಿಯಂತಹ ವಸತಿ ನಿಲಯಗಳಲ್ಲೇ ಈ ರೀತಿ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಈ ಹಿಂದೆಯೂ ಬಂಗಾರಪೇಟೆ ತಾಲ್ಲೂಕಿನ ದೊಡ್ಡಪನ್ನಾಂಡಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಹಿಂಸೆ ನೀಡುತ್ತಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಇದೀಗ ಮಾಲೂರಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಇದೇ ಪರಿಸ್ಥಿತಿ ಇತರೆ ವಸತಿ ಶಾಲೆಗಳಲ್ಲಿ ಇರುವ ಸಾಧ್ಯತೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮೂಲಕ ಬಹಿರಂಗವಾಗಬೇಕಿದೆ. ಸದರಿ ಘಟನೆಗೆ ಸಂಬoಧಿಸಿದoತೆ ತಪ್ಪಿತತ್ಸರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕು. ಈ ವಿಷಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಂಭೀರವಾಗಿ ಪರಿಗಣಿಸಿ ಮುಂದಿನ ಹೋರಾಟಗಳನ್ನು ರೂಪಿಸುತ್ತದೆ.

  • ಸೂಲಿಕುಂಟೆ ರಮೇಶ್, ರಾಜ್ಯ ಸಂಘಟನಾ ಸಂಚಾಲಕರು, ಕ.ದ.ಸಂಸ.

ಮಾಹಿತಿ ಬಂದ ಕೂಡಲೇ ವಸತಿ ನಿಲಯಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಮಕ್ಕಳನ್ನು ಈ ಕೆಲಸಕ್ಕೆ ಬಳಸಿಕೊಂಡಿರುವುದು ತಪ್ಪು. ಈ ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ವರದಿ ನೀಡಿದ್ದೇನೆ. ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಹಾಗೂ
ಮಕ್ಕಳಿಗೂ ಜಾಗೃತಿ ಮೂಡಿಸಿದ್ದೇವೆ’

  • ನಾಗರತ್ನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ.

ಮಲದ ಗುಂಡಿಗೆ ಮಕ್ಕಳ ಇಳಿಸಿ ಸ್ವಚ್ಛತೆಕಟ್ಟಿಕೊಂಡಿದ್ದ ಕಸ ಕಡ್ಡಿ ತೆಗೆಯಲು ಚೇಂಬರ್‌ಗೆ ಮಕ್ಕಳನ್ನು ಇಳಿಸಿದ್ದಾರೆ. ಈ ಕೆಲಸ ವನ್ನೂ ಮಾಡಿಸದಂತೆ ಪ್ರಾಂಶುಪಾಲರು, ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ. ಮಕ್ಕಳನ್ನು ಛೇಂಬರ್ ಒಳಗೆ ಇಳಿಸಿದವರು ಮತ್ತು ಮಕ್ಕಳಿಗೆ ರಾತ್ರಿ ವೇಳೆ ಹಿಂಸೆಯನ್ನು ನೀಡಿದ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳಿಗೆ ಶಿಸ್ತು ಕ್ರಮ ಕೈಗೊಳ್ಳಲು ಪತ್ರ ಬರೆದಿದ್ದೇನೆ

  • ಆರ್‌.ಶ್ರೀನಿವಾಸ್‌, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೋಲಾರ.

ಮೂವರು ಅಮಾನತ್ತು :
ಪ್ರಾಂಶುಪಾಲರಾದ ಭಾರತಮ್ಮ.ಪಿ, ನಿಲಯಪಾಲಕರಾದ ಮಂಜುನಾಥ್, ಚಿತ್ರಕಲಾ ಶಿಕ್ಷಕ ಮುನಿಯಪ್ಪ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮಗಳು ( ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ೧೯೫೭ರ ನಿಯಮ-೧೦(೧)ಡಿ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಿನಿಮಯಗಳು-೨೦೧೧ ಶೆಡ್ಯೂಲ್-೩ ರಂತೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ನವೀನ್ ಕುಮಾರ್ ರಾಜು ಎಸ್. ತಮ್ಮ ಪ್ರದತ್ತವಾದ ಅಧಿಕಾರದನ್ವಯ ಸದರಿ ಸಿಬ್ಬಂದಿಗಳ ಮೇಲೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!