PLACE YOUR AD HERE AT LOWEST PRICE
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪತ್ನಿ ಗೀತಾ ಪರ ಪ್ರಚಾರ ನಡೆಸುತ್ತಿರುವ ಸ್ಯಾಂಡಲ್‌ವುಡ್‌ನ ನಟ ಶಿವರಾಜ್ ಕುಮಾರ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅವರು ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರುವಂತೆ ಒತ್ತಾಯಿಸಿದೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಅವರ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಜನರ ಬಳಿ ಹೋಗಿ ಬಿರುಸಿನಿಂದ ಮತಬೇಟೆ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾವು ಅವರ ವಿರುದ್ಧ ದೂರು ನೀಡಿದೆ.
ಮನವಿಯಲ್ಲಿ, ನಟ ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿಯ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದರಿಂದ ಅವರು ನಟಿಸಿರುವ ಸಿನಿಮಾ, ಜಾಹೀರಾತುಗಳನ್ನು ಸದ್ಯದ ಮಟ್ಟಿಗೆ ನಿಷೇಧ ಮಾಡಬೇಕು. ಯಾವುದನ್ನೂ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದೆ.
ಪತ್ನಿ ಗೀತಾಗೆ ಬೆಂಬಲ ನೀಡಿರುವ ಶಿವರಾಜ್ ಕುಮಾರ್ ಚುನಾವಣಾ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಕಾಂಗ್ರೆಸ್ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರೊಂದಿಗೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಜನಪ್ರಿಯತೆ ಹಾಗೂ ಚಲನಚಿತ್ರಗಳಿಂದ ಮತದಾರರ ಮೇಲೆ ಪ್ರಭಾವ ಬೀರಲಿದೆ.
ದೂರದರ್ಶನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಜ್ ಕುಮಾರ್ ನಟನೆಯ ಚಿತ್ರ ಪ್ರಸಾರಕ್ಕೆ ತಡೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಎಲ್ಲದಕ್ಕೂ ನಿರ್ಬಂಧ ವಿಧಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.