• Sun. Sep 8th, 2024

PLACE YOUR AD HERE AT LOWEST PRICE

ಚಿತ್ರರಂಗ ನಿಧಾನವಾಗಿ ಬದಲಾಗುತ್ತಿದೆ. ಈಗ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು ಎನ್ನುವ ಅವಶ್ಯಕತೆಯಿಲ್ಲ. ತೆರೆಗೆ ಬಂದ 20 ದಿನಕ್ಕೆಲ್ಲಾ ಓಟಿಟಿಗೆ ಸಿನಿಮಾ ಬರ್ತಿದೆ. ಡಿಟಿಹೆಚ್‌ನಲ್ಲಿ ಹಣ ಪಾವತಿಸಿ ಸಿನಿಮಾ ನೋಡುವ ಅವಕಾಶವೂ ಇದೆ. ಇದೆಲ್ಲದರ ನಡುವೆ ಯೂಟ್ಯೂಬ್‌ಗೆ ನೇರವಾಗಿ ಸಿನಿಮಾ ಅಪ್‌ಲೋಡ್ ಮಾಡಿ ಎಂದು ನಿರ್ದೇಶಕ ಪವನ್ ಕುಮಾರ್ ಸಲಹೆ ನೀಡಿದ್ದಾರೆ.

ತಂತ್ರಜ್ಞಾನ ಬೆಳೆದಂತೆ ಸಿನಿಮಾ ಮೇಕಿಂಗ್ ಸ್ಟೈಲ್ ಬದಲಾಗಿದೆ. ಅಷ್ಟೇ ಅಲ್ಲ ಸಿನಿಮಾ ಪ್ರದರ್ಶನಕ್ಕೆ ಬೇರೆ ಬೇರೆ ವೇದಿಕೆ ಲಭ್ಯವಿದೆ. ಕೇವಲ ಮೊಬೈಲ್ ಫೋನ್‌ನಲ್ಲೇ ಸಿನಿಮಾ ಚಿತ್ರೀಕರಣ ಮಾಡುವವರು ಇದ್ದಾರೆ. ಸಿನಿಮಾ ಅನ್ನೋದು ಹೆಚ್ಚು ಹಣ ಕೇಳುವ ಮಾಧ್ಯಮ. ಹಣ ಹಾಕಿ ಸಿನಿಮಾ ಮಾಡಿದರೆ ಮಾತ್ರ ಅದನ್ನು ಪ್ರದರ್ಶನ ಮಾಡಿ ಹಣ ವಾಪಸ್ ಪಡೆಯಲು ಸಾಧ್ಯ. ಹಾಗಂತ ಎಲ್ಲರೂ ದೊಡ್ಡ ಸಿನಿಮಾಗಳನ್ನು ಮಾಡುತ್ತಾ ಕೂರಲು ಸಾಧ್ಯವಿಲ್ಲ.

ಸಣ್ಣ ಸಿನಿಮಾಗಳನ್ನು ಜನ ಚಿತ್ರಮಂದಿರಕ್ಕೆ ಬಂದು ನೋಡಲ್ಲ. ಒಂದೊಮ್ಮೆ ಸಿನಿಮಾ ಚೆನ್ನಾಗಿದೆ ಎನ್ನುವ ಟಾಕ್ ಬಂದರೂ ಓಟಿಟಿಗೆ ಬರುತ್ತೆ ಬಿಡು ಎನ್ನುವಂತಾಗಿದೆ. ಬಹುಕೋಟಿ ವೆಚ್ಚದ ಸ್ಟಾರ್ ನಟರ ಸಿನಿಮಾಗಳನ್ನು ಮಾತ್ರ ಪ್ರೇಕ್ಷಕರು ದೊಡ್ಡ ಪರದೆ ಮೇಲೆ ನೋಡಲು ಬಯಸುತ್ತಿದ್ದಾರೆ. ಆದರೆ ಕಂಟೆಂಡ್ ಓರಿಯಂಟೆಡ್ ಸಿನಿಮಾ ಮಾಡುವವರ ಕಥೆಯೇನು? ನಮ್ಮ ಕಥೆಯನ್ನು ಸಿನಿಮಾ ಮಾಡಬೇಕು, ಜನ ಅದನ್ನು ನೋಡಬೇಕು ಎಂದುಕೊಳ್ಳುವವರ ಪಾಡೇನು? ಹಾಗಂತ ಹಣವಿಲ್ಲದೇ ಸಿನಿಮಾ ಮಾಡೋಕ್ಕಾಗಲ್ಲ. ಹಾಕಿದ ಹಣ ಬಾರದಿದ್ದರೂ ಕಷ್ಟ.

ದೇ ವಿಚಾರದ ಬಗ್ಗೆ ನಿರ್ದೇಶಕ ಲೂಸಿಯಾ ಪವನ್ ಕುಮಾರ್ ಮಾತನಾಡಿದ್ದಾರೆ. ಕಂಟೆಂಟ್ ಓರಿಯಂಟೆಡ್ ಸಿನಿಮಾಗಳಿಗೂ ಒಂದು ಪ್ರೇಕ್ಷಕ ವರ್ಗ ಇದೆ. ಅವರಿಗೆ ನಿಮ್ಮ ಸಿನಿಮಾಗಳು ಇಷ್ಟವಾಗುತ್ತದೆ. ಅದನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿ. ಸಿನಿಮಾ ಇಷ್ಟವಾದರೆ ನೀವು ಬಯಸಿದಷ್ಟು ಹಣ ಪಾವತಿಸಿ ಎಂದು ಕ್ಯೂಆರ್‌ ಕೋಡ್ ಕೊಡಿ. ಮುಂದೆ ಇಂತಾದೊಂದು ಟ್ರೆಂಡ್ ಶುರುವಾಗುತ್ತದೆ. ‘ಹೊಂದಿಸಿ ಬರೆಯಿರಿ’ ಚಿತ್ರತಂಡ ಇದೇ ಪ್ರಯತ್ನ ಮಾಡಿದೆ. ನಾನು ಚಿತ್ರತಂಡಕ್ಕೆ ಸಲಹೆ ನೀಡಿದ್ದೆ ಎಂದು ಪವನ್ ಹೇಳಿದ್ದಾರೆ.

ಸಣ್ಣ ಸಿನಿಮಾಗಳ ಬಜೆಟ್, ಪ್ರಚಾರಕ್ಕೆ ಹೆಚ್ಚು ಹಣ ಬೇಕು. ಆ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದು ಸವಾಲಿನ ಕೆಲಸ. ಇನ್ನು ಓಟಿಟಿ ಖಾಸಗಿ ಸಂಸ್ಥೆ. ನಮ್ಮ ಸಿನಿಮಾ ತಗೊಳ್ಳಿ ಎಂದು ಅವರಿಗೆ ದುಂಬಾಲು ಬೀಳುವುದು ಕಷ್ಟ. ಇತ್ತೀಚೆಗೆ ಕನ್ನಡ ಕೆಲ ಸಿನಿಮಾಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಒಪ್ಪುತ್ತಿಲ್ಲ. ಹಾಗಾಗಿ ಯೂಟ್ಯೂಬ್ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ಕೆಲವರಾದರೂ ಸಿನಿಮಾ ಮೆಚ್ಚಿ ಹಣ ಕಳುಹಿಸುತ್ತಾರೆ. 100 ರೂಪಾಯಿ ಕಳುಹಿಸಬಹುದು. ಕೊನೆ ಪಕ್ಷ 50, 20 ರೂಪಾಯಿ ಕಳುಹಿಸಿದರು ಅದು ದೊಡ್ಡದು ಅಲ್ಲವೇ ಎಂದಿದ್ದಾರೆ.

ನನ್ನ ‘ಧೂಮಂ’ ಸಿನಿಮಾ ಸಕ್ಸಸ್ ಆಗಲಿಲ್ಲ. ಸಾಕಷ್ಟು ನಷ್ಟವಾಯಿತು. ಆದರೆ ಹೊಂಬಾಳೆ ಫಿಲ್ಮ್ಸ್ ರೀತಿಯ ಸಂಸ್ಥೆ ನನ್ನ ಬೆಂಬಲಕ್ಕೆ ಇತ್ತು. ಎಲ್ಲರಿಗೂ ಇಂತಹ ಬೆಂಬಲ ಸಿಗಲ್ಲ. ಹೊಸ ಫಿಲ್ಮ್ ಮೇಕರ್ಸ್ ಅದರಲ್ಲೂ ಕಂಟೆಂಟ್ ಓರಿಯಂಟೆಡ್ ಸಿನಿಮಾ ಮಾಡುವವರು ಹೀಗೆ ಮಾಡಿ ಎಂದು ಪವನ್ ಕುಮಾರ್ ಹೇಳಿದ್ದಾರೆ. ನಮ್ಮ ‘ಧೂಮಂ’ ಸಿನಿಮಾ ಯೂಟ್ಯೂಬ್‌ಗೆ ಬಂದಿದೆ. ಆದರೆ ಹೊಂಬಾಳೆ ಸಂಸ್ಥೆ ಯಾವುದೇ ಕ್ಯೂಆರ್ ಕೋಡ್ ಕೊಟ್ಟು ಹಣ ಕಳುಹಿಸಿ ಎಂದು ಹೇಳಿಲ್ಲ. ಅದು ದೊಡ್ಡ ಸಂಸ್ಥೆ. ಆದರೆ ಹಣ ಬಜೆಟ್‌ನಲ್ಲಿ ಸಿನಿಮಾ ಮಾಡುವವರು ಈ ಪ್ರಯತ್ನ ಮಾಡಿ ಎಂದಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಸಲಹೆ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದು ವರ್ಕೌಟ್‌ ಆಗಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಪವನ್ ಕುಮಾರ್ ಹೇಳಿದಂತೆ ಮುಂದೆ ಸಿನಿಮಾ ನೇರವಾಗಿ ಯೂಟ್ಯೂಬ್‌ ಬರ್ತಾವಾ? ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You missed

error: Content is protected !!