• Sun. Sep 8th, 2024

PLACE YOUR AD HERE AT LOWEST PRICE

ಮಂಗಳೂರು ನಗರ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ಈ ಮಳೆಯ ನಡುವೆಯೇ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಿದ್ದು, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಎರಡು ದರೋಡೆ ಪ್ರಕರಣಗಳು ವರದಿಯಾಗಿದೆ.

ಈ ಎರಡು ಪ್ರಕರಣಗಳ ಪೈಕಿ ಒಂದು ಮನೆ ದರೋಡೆಯಾದರೆ, ಇನ್ನೊಂದು ಸಗಟು ಜಿನಸು ಮಾರಾಟ ಮಳಿಗೆಗೆ ನುಗ್ಗಿ ಹಣ ದರೋಡೆಗೈದಿರುವ ಬಗ್ಗೆ ವರದಿಯಾಗಿದೆ. ಈ ಎರಡೂ ಪ್ರಕರಣಗಳಲ್ಲಿ ಉತ್ತರ ಭಾರತ ಮೂಲದ ಚಡ್ಡಿ ಗ್ಯಾಂಗ್‌ನ ಕೃತ್ಯ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಕಳೆದ ಜುಲೈ 7ರಂದು ಈ ಚಡ್ಡಿ ಗ್ಯಾಂಗ್ ಮನೆಯೊಂದಕ್ಕೆ ನುಗ್ಗಿ, ಕಿಟಿಕಿಯ ಕಬ್ಬಿಣದ ಸಲಾಕೆ ತುಂಡರಿಸಿ, ಕಳ್ಳತನಗೈದಿತ್ತು. ಈ ಘಟನೆ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ದರೋಡೆಗೈದ ಬಳಿಕ ಕಾರು ಸಹಿತ ಪರಾರಿ

ಮಂಗಳವಾರ ಮುಂಜಾನೆ 3.30ರ ಅವಧಿಯಲ್ಲಿ 4 ಮಂದಿ ದರೋಡೆಕೋರರ ತಂಡ ಉರ್ವ ಕೊಟ್ಟಾರದ ಬಳಿ ವೃದ್ಧ ದಂಪತಿ ವಾಸವಿರುವ ಮನೆಯೊಂದಕ್ಕೆ ಪ್ರವೇಶಿಸಿ, ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ದರೋಡೆಯ ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಆರೋಪಿಗಳು ಪರಾರಿಯಾದ ಕಾರು ಮುಲ್ಕಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಮನೆಯಲ್ಲಿದ್ದ ವೃದ್ಧ ದಂಪತಿಯ ಮಕ್ಕಳು ವಿದೇಶದಲ್ಲಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ದರೋಡೆಯ ವೇಳೆ ವೃದ್ಧ ದಂಪತಿಗೆ ಹಲ್ಲೆಗೈದಿದ್ದು, ಅವರಿಗೆ ಗಾಯವುಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮೂಲ್ಕಿಯಲ್ಲಿ ಪತ್ತೆಯಾದ ಕಾರು

ಉಡುಪಿ ಜಿಲ್ಲೆ ಪ್ರವೇಶಿಸುವ ಮುನ್ನ ಸಿಗುವ ಹೆಜಮಾಡಿ ಟೋಲ್ ಗೇಟ್‌ಗೂ ಮುನ್ನವೇ ಕಾರನ್ನು ಮೂಲ್ಕಿ ಪ್ರದೇಶದಲ್ಲಿ ನಿಲ್ಲಿಸಿ, ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ಮೂಲ್ಕಿಯ ಆಧಿದನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ವೃದ್ಧ ದಂಪತಿಯ ದರೋಡೆಗೈದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.

ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ಪೊಲೀಸರ ತನಿಖೆಯ ಬಳಿಕವಷ್ಟೇ ತಿಳಿದುಬರಲಿದೆ. ಸದ್ಯಕ್ಕೆ ದೊರೆತಿರುವ ಮಾಹಿತಿಯ ಪ್ರಕಾರ, ಇದು ದರೋಡೆಕೋರರ ಮೊಬೈಲ್ ಆಗಿರುವ ಸಾಧ್ಯತೆ ಇದ್ದು, ಪರಾರಿಯಾಗುವ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ದರೋಡೆಗೊಳಗಾದ ಕೊಟ್ಟಾರದ ಮನೆಗೆ ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿ ಕ್ಯಾಮೆರಾ ಪರಿಶೀಲನೆ:

ಘಟನೆ ನಡೆದ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸುತ್ತಿದ್ದಾರೆ.

ಪಂಪ್‌ವೆಲ್: ಬಿ ಎಚ್ ಸ್ಟೋರ್‌ಗೆ ನುಗ್ಗಿದ ಕಳ್ಳರು

ಉರ್ವಸ್ಟೋರ್ ಮಾತ್ರವಲ್ಲದೇ, ನಗರದ ಪಂಪ್‌ವೆಲ್ ಕಪಿತಾನಿಯೋ ಶಾಲೆಯ ಬಳಿ ಇರುವ ಹಮ್ಮಬ್ಬ ಎಂಬುವವರ ಬಿಎಚ್ ಸ್ಟೋರ್‌ಗೆ ನಿನ್ನೆ ರಾತ್ರಿ ನುಗ್ಗಿದ ಇಬ್ಬರು ಕಳ್ಳರು ನಗದು ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಅರಿತ ಬಳಿಕ ಕಂಕನಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮಹಜರು ನಡೆಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!