• Sun. Sep 8th, 2024

ಮಾಜಿ ಸಿಎಂ ಸೂಚನೆ ಮೇರೆಗೆ ನನಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದ ಟಿಡಿಪಿ ಶಾಸಕ: ಜಗನ್ ಮೋಹನ್ ರೆಡ್ಡಿ, ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್.

PLACE YOUR AD HERE AT LOWEST PRICE

ಟಿಡಿಪಿ ಶಾಸಕ ರಘು ರಾಮ ಕೃಷ್ಣಂ ರಾಜು ಅವರು ನೀಡಿದ ದೂರಿನ ಆಧಾರದ ಮೇಲೆ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ ಕಾಂಗ್ರೆಸ್ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜಗನ್ ಮೋಹನ್ ರೆಡ್ಡಿ ಜೊತೆ ಭಿನ್ನಾಭಿಪ್ರಾಯ ಹೊಂದುವ ಮೊದಲು ರಾಜು ಅವರು ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದಿಂದ ನರಸಪುರಂನ ಸಂಸದರಾಗಿದ್ದರು.

“ಜಗನ್ ಮೋಹನ್ ರೆಡ್ಡಿ ಸಿಎಂ ಆಗಿದ್ದಾಗ ಆಂಧ್ರ ಪ್ರದೇಶದ ಸಿಐಡಿ ಅಧಿಕಾರಿಗಳು ಹೈದರಾಬಾದ್‌ನಿಂದ ಅಕ್ರಮವಾಗಿ ನನ್ನನ್ನು ಬಂಧಿಸಿದ್ದರು. ಟ್ರಾನ್ಸಿಟ್ ಅರೆಸ್ಟ್ ವಾರೆಂಟ್ ಪಡೆಯಲು ಹೈದರಾಬಾದ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸದೆ ನನ್ನನ್ನು ನೇರವಾಗಿ ಆಂಧ್ರಕ್ಕೆ ಕರೆ ತಂದಿದ್ದರು” ಎಂಬ ರಾಜು ಅವರ ದೂರಿನ ಆಧಾರದ ಮೇಲೆ ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 14,2021 ರಂದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಗನ್‌ ಮೋಹನ್ ರೆಡ್ಡಿಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸಬೇಕು ಎಂದು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ರಾಜು ಮನವಿ ಸಲ್ಲಿಸಿದ್ದರು. ಆ ಬಳಿಕ ಅವರನ್ನು ದೇಶದ್ರೋಹದ ಆರೋಪದ ಮೇಲೆ ಆಂಧ್ರ ಪ್ರದೇಶದ ಸಿಐಡಿ  ಬಂಧಿಸಿತ್ತು.

ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), ಮತ್ತು 505 (ಸಾರ್ವಜನಿಕ ದುರ್ವರ್ತನೆ) ಅಡಿಯಲ್ಲಿ ನೋಟಿಸ್ ನೀಡಿದ ನಂತರ ಸಿಐಡಿ ಅಧಿಕಾರಿಗಳು ರಾಜು ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ, ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದರು.

“ತನ್ನನ್ನು ಸಿಐಡಿ ಕಚೇರಿಗೆ ಕರೆದೊಯ್ದ ನಂತರ ಸಿಐಡಿ ಮಾಜಿ ಮುಖ್ಯಸ್ಥ ಪಿ ವಿ ಸುನೀಲ್ ಕುಮಾರ್ ಮತ್ತು ಮಾಜಿ ಗುಪ್ತಚರ ಐಜಿ ಪಿಎಸ್ಆರ್ ಆಂಜನೇಯುಲು ಮತ್ತು ಇತರ ಅಧಿಕಾರಿಗಳು ಹಲ್ಲೆ ನಡೆಸಿದ್ದರು. ಬೆಲ್ಟ್ ಮತ್ತು ಲಾಠಿಯಿಂದ ಥಳಿಸಿದ್ದರು. ಹೃದಯ ಸಂಬಂಧಿ ಖಾಯಿಲೆಯ ಔಷಧ ತೆಗೆದುಕೊಳ್ಳದಂತೆ ತಡೆದಿದ್ದರು” ಎಂದು ರಾಜು ದೂರಿನಲ್ಲಿ ಆರೋಪಿಸಿದ್ದಾರೆ. ನಾಲ್ಕು ತಿಂಗಳ ಹಿಂದೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

“ಅಂದಿನ ಸಿಎಂ ಜಗನ್‌ ಅವರ ಮಾತಿಗೆ ತಕ್ಕಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದರು. ನನ್ನ ಮೊಬೈಲ್ ಪಾಸ್‌ವರ್ಡ್ ಹೇಳುವವರೆಗೆ ಯಾರೋ ಒಬ್ಬರು ನನ್ನ ಎದೆ ಮೇಲೆ ಕುಳಿತಿದ್ದರು. ಜಗನ್ ಅವರನ್ನು ಟೀಕಿಸಲು ಮುಂದಾದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು” ಎಂದು ರಾಜು ಆರೋಪಿಸಿದ್ದಾರೆ.

ರಾಜು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಸಿಐಡಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!