• Sat. Sep 7th, 2024

PLACE YOUR AD HERE AT LOWEST PRICE

ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರೂ ಏನೂ ಮಾಡಲಾಗದು. ಅವರು ಮನೆಗೆ ಹೋಗುವ ಕಾಲ ಬಂದಿದೆ ಎಂದು ವಿಧಾನ ಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಹೊಸ ಹುದ್ದೆಗೆ ನೇಮಕಗೊಂಡ ಬಳಿಕ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

“ಕಳ್ಳ ಮನೆಗೆ ನುಗ್ಗಿದ ಮೇಲೆ ಎಷ್ಟು ಕದ್ದ ಎಂಬುದು ಪ್ರಶ್ನೆಯಲ್ಲ. ಹಿಂದಿನ ಬಾಗಿಲಿಂದ ಬಂದನೇ? ಮುಂದಿನ ಬಾಗಿಲಿಂದ ನುಗ್ಗಿದನೇ ಎಂಬ ಪ್ರಶ್ನೆಯಿಲ್ಲ. ಕದ್ದಿದ್ದು ನಿಜ. ಲೂಟಿ ಆಗಿರುವುದು ನಿಜ” ಎಂದರು.

“ಖಜಾನೆ ಲೂಟಿ ಮಾಡುವುದು, ಪರಿಶಿಷ್ಟರ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಣವನ್ನು ಖಾಸಗಿ ವ್ಯಕ್ತಿಯ ಖಾತೆಗೆ ವರ್ಗಾಯಿಸಿ, ಹಣ ಪಡೆದು ಬಳಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಗೊತ್ತಿದೆ. ಈಗ ಸಿಕ್ಕಿಬಿದ್ದಿದ್ದಾರೆ. ನಾವು ನೂರು ಹೋರಾಟ ಮಾಡಿದರೆ, ಅವರು ಹುಡುಕಿ ಒಂದಾದರೂ ಹೋರಾಟ ಮಾಡಬೇಕಲ್ಲವೇ? ಅದಕ್ಕಾಗಿಯೇ ಇವತ್ತು ಇ.ಡಿ. ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ” ಎಂದು ಹೇಳಿದರು.

“ಇ.ಡಿ, ಸಿಬಿಐ ತಂದದ್ದು ಕಾಂಗ್ರೆಸ್ ಸರಕಾರ ಅಲ್ಲವೇ? ತಂದ ಮೇಲೆ ನೀವು ಕೆಲಸ ಮಾಡಬೇಡಿ ಎನ್ನುವುದಾದರೆ, ಆ ಮಾತನಾಡಲು ಅವರಿಗೆ ಏನು ಯೋಗ್ಯತೆ ಇದೆ? ಸಿದ್ದರಾಮಯ್ಯನವರು ಮನೆಗೆ ಹೋಗುವ ಕಾಲ ಬಂದಿದೆ. ಅದಕ್ಕಾಗಿ ಅಧಿಕಾರ ಉಳಿಸಿಕೊಳ್ಳಲು ಇಷ್ಟೆಲ್ಲ ನಾಟಕ ಆಡುತ್ತಿದ್ದಾರೆ” ಎಂದು ಹೇಳಿದರು.

“ಬಿಜೆಪಿಯಲ್ಲಿ ಯೋಗ ನಡೆಯುವುದಿಲ್ಲ; ಯೋಗ್ಯತೆಗೆ ಅವಕಾಶ ಕೊಡುತ್ತಾರೆ. ಇಂಥ ಸ್ಥಾನಕ್ಕೆ ಬರಲು ಕಾಂಗ್ರೆಸ್ಸಿನಲ್ಲಿ ಯೋಗ ಮತ್ತು ಕೆಲವೊಂದು ವಿದ್ಯೆಗಳೂ ಬೇಕು. ಪಕ್ಷ ನಿಷ್ಠೆ, ಬದ್ಧತೆಯನ್ನು ಗುರುತಿಸಿ ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ತಳ ಸಮುದಾಯಗಳನ್ನು ಸಂಘಟಿಸಿ ಪಕ್ಷ ಸಂಘಟನೆಗೆ ಶ್ರಮಿಸುವೆ” ಎಂದು ತಿಳಿಸಿದರು.

“ಸರಕಾರ ಮಾಡುವ ತೊಂದರೆ, ನ್ಯೂನತೆಗಳನ್ನು ಸಮಾಜಕ್ಕೆ ತಿಳಿಸುವೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮಾಡಿದ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದೇವೆ. ಈ ಜವಾಬ್ದಾರಿ ಕೊಟ್ಟ ಪಕ್ಷದ ಮುಖಂಡರಿಗೆ, ಇದಕ್ಕೆ ಕಾರಣಕರ್ತರಾದ ಪರಿಶಿಷ್ಟ ಸಮುದಾಯದ ಎಲ್ಲರಿಗೂ ಧನ್ಯವಾದ” ಎಂದು ಹೇಳಿದರು.

Leave a Reply

Your email address will not be published. Required fields are marked *

You missed

error: Content is protected !!