• Thu. Sep 19th, 2024

PLACE YOUR AD HERE AT LOWEST PRICE

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಭೀಕರ ಭೂಕುಸಿತ, ಜಲಪ್ರಳಯ ಸಂಭವಿಸಿ ನೂರಾರು ಜನರು ಪ್ರಾಣ ಕಳೆದುಕೊಂಡಿರುವ ನಡುವೆ ‘ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ಇಎಸ್‌ಎ) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ವಿರುದ್ಧ ಎಚ್ಚರಿಕೆ ನೀಡಿದ್ದ 13 ವರ್ಷಗಳ ಹಿಂದಿನ ವರದಿಯೊಂದು ಮುನ್ನೆಲೆಗೆ ಬಂದಿದೆ.

ಮಾಧವ್ ಗಾಡ್ಗೀಳ್ ನೇತೃತ್ವದ ‘ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ'(WGEEP) ಯು ಆಗಸ್ಟ್ 2011ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ವಯನಾಡ್‌ ಭೂಕುಸಿತ ದುರಂತ ಸಂಭವಿಸಿರುವ ಮೆಪ್ಪಾಡಿಯಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು.

ಜುಲೈ 30ರಂದು ಭೀಕರ ಭೂಕುಸಿತ ಸಂಭವಿಸಿ ನರಕ ಸದೃಶ್ಯವಾಗಿ ಮಾರ್ಪಟ್ಟಿರುವ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಝ ಗ್ರಾಮಗಳು ವಯನಾಡ್‌ ಜಿಲ್ಲೆಯ ವೈತಿರಿ ತಾಲೂಕಿನಲ್ಲಿರುವ ಮೆಪ್ಪಾಡಿ ವ್ಯಾಪ್ತಿಯಲ್ಲಿ ಬರುತ್ತವೆ. ಈ ಮೆಪ್ಪಾಡಿ ಗಾಡ್ಗೀಳ್ ಸಮಿತಿ ಗುರುತಿಸಿದ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ಇಎಸ್ಎಲ್) ಒಂದಾಗಿದೆ.

ಪರಿಸರ ವಿರೋಧಿ ಚಟುವಟಿಕೆಗಳನ್ನು ತಡೆಯಲು ಮಾಧವ್ ಗಾಡ್ಗೀಳ್ ಸಮಿತಿ ಸಲ್ಲಿಸಿದ್ದ ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಮತ್ತು ಕೇರಳ ರಾಜ್ಯ ಸರ್ಕಾರಗಳು ಉತ್ಸಾಹ ತೋರಿಲ್ಲ. ಬದಲಿಗೆ ಅದನ್ನು ದುರ್ಬಲಗೊಳಿಸುವ ಕ್ರಮಗಳಿಗೆ ಮುಂದಾಯಿತು.

ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟಗಳಾದ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಲು ಪ್ರಸ್ತಾಪಿಸಿತ್ತು.

ಪರಿಸರ ಸೂಕ್ಷ್ಮ ಪ್ರದೇಶ-1(ESZ-I)ಮತ್ತು 2 (ESZ-II)ಎಂದು ವರ್ಗೀಕರಿಸಿ, ಈ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳನ್ನು ವಿಧಿಸಲು ಸಮಿತಿಯು ಶಿಫಾರಸು ಮಾಡಿತ್ತು.

“ನಾವು ಪರಿಸರ ಸೂಕ್ಷ್ಮ ಪ್ರದೇಶ -Iರಲ್ಲಿ ಕಲ್ಲುಗಣಿಗಾರಿಕೆ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು ಎಂದು ಪ್ರಸ್ತಾಪಿಸಿದ್ದೆವು. ಹಾಗೆಯೇ, ಕಲ್ಲುಗಣಿಗಾರಿಕೆಗೆ ಅನುಮತಿ ಇರುವ ಪ್ರದೇಶಗಳಲ್ಲಿ, ಕ್ವಾರಿಗಳು ಜನವಸತಿಯಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಎಂದು ಸೂಚಿಸಿದ್ದೆವು. ಆದರೆ, ಸರ್ಕಾರ ಕ್ವಾರಿಗಳು ಮತ್ತು ಜನವಸತಿ ಪ್ರದೇಶದ ನಡುವಿನ ಅಂತರವನ್ನು ಕಡಿತಗೊಳಿಸಿ 50 ಮೀಟರ್‌ ಮಾಡಿತು” ಎಂದು ಎಂದು WGEEP ಸದಸ್ಯರಾಗಿದ್ದ ಪರಿಸರವಾದಿ ವಿಎಸ್ ವಿಜಯನ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ನಂತರ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿತ್ತು. ಮತ್ತೊಂದು ವರದಿ ನೀಡಲು ಕಸ್ತೂರಿರಂಗನ್ ನೇತೃತ್ವದ ಹೊಸ ಸಮಿತಿಯನ್ನು ನೇಮಿಸಿತ್ತು. ಗಾಡ್ಗೀಳ್ ಸಮಿತಿಯು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಸೂಚಿಸಲು ಶಿಫಾರಸು ಮಾಡಿತ್ತು. ಆದರೆ, ಕಸ್ತೂರಿರಂಗನ್ ಸಮಿತಿಯು ಇಎಸ್ಎಗಳ ವ್ಯಾಪ್ತಿಯನ್ನು ಪಶ್ಚಿಮ ಘಟ್ಟಗಳ ಶೇ. 37ಕ್ಕೆಇಳಿಸಿತು.

ಕೇರಳದಲ್ಲಿ ಮಾಜಿ ಸಿಎಂ ದಿವಂಗತ ಉಮ್ಮನ್ ಚಾಂಡಿ ನೇತೃತ್ವದ ರಾಜ್ಯ ಸರ್ಕಾರವು WGEEP ವರದಿಯನ್ನು ವಿರೋಧಿಸಿತ್ತು. ಸ್ವತಂತ್ರ ವರದಿ ನೀಡಲು ಉಮ್ಮನ್ ವಿ ಉಮ್ಮನ್ ನೇತೃತ್ವದ ರಾಜ್ಯಮಟ್ಟದ ಮತ್ತೊಂದು ಸಮಿತಿಗೆ ಜವಾಬ್ದಾರಿ ನೀಡಿತ್ತು. ಆ ಸಮಯದಲ್ಲಿ, ಗಾಡ್ಗೀಳ್ ವರದಿಯ ಅನುಷ್ಠಾನಕ್ಕೆ ಒಲವು ತೋರಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿಟಿ ಥಾಮಸ್ ಕೂಡ ಒಬ್ಬರು.

“ವಾಸ್ತವವಾಗಿ, ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟಗಳ ಪರಿಸರ ಪ್ರಾಮುಖ್ಯತೆಯನ್ನು ಗುರುತಿಸಿತ್ತು. ಆದರೆ, ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳು ಅದನ್ನು ವಿರೋಧಿಸಿದ್ದವು. ಪರಿಸರ ದುರ್ಬಲ ಪ್ರದೇಶವನ್ನು ಕೇವಲ ಸರ್ಕಾರಿ ಆದೇಶದಿಂದ ದುರ್ಬಲವಲ್ಲ ಎಂದು ಕರೆಯಲು ಹೇಗೆ ಸಾಧ್ಯ? ಈಗಿನ ಕೇರಳದ ಎಡರಂಗ ಸರ್ಕಾರ ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಅನಧಿಕೃತ ನಿರ್ಮಾಣಗಳನ್ನು ಕ್ರಮಬದ್ಧಗೊಳಿಸಿದ ನಂತರ, ಅಕ್ರಮ ಕಲ್ಲುಗಣಿಗಾರಿಕೆಯನ್ನು ಕೂಡ ಸಕ್ರಮಗೊಳಿಸುವ ಪ್ರಯತ್ನ ಮಾಡಿರುವುದು ವಿಷಾದಕರ” ಎಂದು ಪಿಟಿ ಥಾಮಸ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೇರಳದ ಪರಿಸರ ಸೂಕ್ಷ್ಮ ಪ್ರದೇಶಗಳು (ESZ-I,II)

ಗಾಡ್ಗೀಳ್ ನೇತೃತ್ವದ ಸಮಿತಿಯ ವರದಿಯ ಪ್ರಕಾರ, ವಯನಾಡ್‌ ಜಿಲ್ಲೆಯ ವೈತಿರಿ, ಮಾನಂತವಾಡಿ ಮತ್ತು ಸುಲ್ತಾನ್ ಬತ್ತೇರಿಗಳು ಪರಿಸರ ಸೂಕ್ಷ್ಮ ಪ್ರದೇಶ- Iರಲ್ಲಿ ಬರುತ್ತವೆ.

ಅದೇ ರೀತಿ ಮಲಪ್ಪುರಂನ ಪೆರಿಂದಲ್ಮನ್ನಾ ಮತ್ತು ತಿರೂರ್ ತಾಲೂಕುಗಳು ಪರಿಸರ ಸೂಕ್ಷ್ಮ ಪ್ರದೇಶ- IIರಲ್ಲಿ ಬರುವ ತಾಲೂಕುಗಳಲ್ಲಿ ಸೇರಿವೆ.

WGEEP ಸಮಿತಿ ಗುರುತಿಸಿದ ಕೇರಳದ ಪರಿಸರ ಸೂಕ್ಷ್ಮ ಸ್ಥಳಗಳು :

ಮಂಡಕೋಲ್, ಪಣತ್ತಡಿ, ಪೈದಲ್ಮಲ, ಬ್ರಹ್ಮಗಿರಿ- ತಿರುನೆಲ್ಲಿ, ವಯನಾಡ್, ಬಾಣಾಸುರ ಸಾಗರ್ – ಕುಟ್ಯಾಡಿ, ನಿಲಂಬೂರ್ – ಮೇಪ್ಪಾಡಿ, ಸೈಲೆಂಟ್ ವ್ಯಾಲಿ – ನ್ಯೂ ಅಮರಂಬಲಂ, ಸಿರುವಣಿ, ನೆಲ್ಲಿಯಂಪದಿ, ಪೀಚಿ – ವಝನಿ, ಅದಿರಪಲ್ಲಿ – ವಝಚಲ್, ಪೂಯಂಕುಟ್ಟಿ – ಮುನ್ನಾರ್, ಏಲಕ್ಕಿ ಬೆಟ್ಟಗಳು, ಪೆರಿಯಾರ್, ಕುಲತುಪುಝ, ಅಗಸ್ತ್ಯ ಮಾಲಾ, ಸಂರಕ್ಷಿತ ಪ್ರದೇಶಗಳ ಸುತ್ತಮುತ್ತಲಿನ ಪರಿಸರ ಸೂಕ್ಷ್ಮ ಪ್ರದೇಶಗಳು.

Leave a Reply

Your email address will not be published. Required fields are marked *

You missed

error: Content is protected !!