• Mon. Sep 16th, 2024

PLACE YOUR AD HERE AT LOWEST PRICE

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ಐದು ಬಾರಿ ಕರಡು ಅಧಿಸೂಚನೆ ಹೊರಡಿಸಿದ್ದ ಕೇಂದ್ರ, ವಯನಾಡ್‌ ಭೂಕುಸಿತ ದುರಂತ ಸಂಭವಿಸಿದ ಬಳಿಕ 6ನೇ ಅಧಿಸೂಚನೆ ಪ್ರಕಟಿಸಿದೆ. ಜುಲೈ 6, 2022ರಂದು 5ನೇ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯನ್ನು ಗುರುತಿಸುವ ವಿಚಾರದಲ್ಲಿ ಕೇಂದ್ರ ಮತ್ತು ಆರು ರಾಜ್ಯಗಳು ಇದುವರೆಗೆ ಒಮ್ಮತಕ್ಕೆ ಬಂದಿಲ್ಲ.

ಗುಜರಾತ್‌ನ 449 ಚದರ ಕಿ.ಮೀ, ಮಹಾರಾಷ್ಟ್ರದ 17,340, ಗೋವಾದ 1,461, ಕರ್ನಾಟಕದ 20,668 ತಮಿಳುನಾಡಿನ 6,914 ಮತ್ತು ಕೇರಳದ 9,994 ಚದರ ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕರಡು ಪ್ರತಿಗೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಕೇಂದ್ರವು 60 ದಿನಗಳ ಗಡುವನ್ನು ನೀಡಿದೆ.

ಪಶ್ಚಿಮ ಘಟ್ಟಗಳ ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು ಮೊದಲ ಬಾರಿಗೆ ಮಾರ್ಚ್ 2014 ರಲ್ಲಿ ಹೊರಡಿಸಲಾಗಿತ್ತು. ಇದು 2012ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ತಜ್ಞರ ಸಮಿತಿಯ ಸಲಹೆಗಳನ್ನು ಆಧರಿಸಿದೆ.

ಬಾಹ್ಯಾಕಾಶ ವಿಜ್ಞಾನಿ ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಹಿರಿಯ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿಯು ಸಿದ್ಧಪಡಿಸಿದ್ದ ವರದಿಯ ಸಲಹೆಗಳನ್ನು ಪರಿಶೀಲಿಸಿತ್ತು.

ಆರು ರಾಜ್ಯ ಸರ್ಕಾರಗಳ ಸಲಹೆಗಳನ್ನು ಮರು ಪರಿಶೀಲಿಸಲು, ವಿಪತ್ತು ಪೀಡಿತ ಪ್ರಾಚೀನ ಪರಿಸರ ವ್ಯವಸ್ಥೆಯ ಸಂರಕ್ಷಣೆ ಅಂಶಗಳನ್ನು ಮತ್ತು ಪ್ರದೇಶದ ಹಕ್ಕುಗಳು, ಸವಲತ್ತುಗಳು, ಅಗತ್ಯಗಳು ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ 2022ರಲ್ಲಿ ಕೇಂದ್ರವು ಮತ್ತೊಂದು ಸಮಿತಿಯನ್ನು ರಚಿಸಿತ್ತು. ಅದರ ಸಲಹೆಗಳನ್ನು ಕೂಡ ಕರಡು ಪ್ರತಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ವಯನಾಡ್ ಭೂಕುಸಿತ ದುರಂತ ಸಂಭವಿಸಿದ ಬಳಿಕ ಮಾಧವ್ ಗಾಡ್ಗೀಳ್ ನೇತೃತ್ವದ ‘ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ’ (WGEEP)ಯು ಆಗಸ್ಟ್ 2011ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಜಾರಿಗೆ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *

You missed

error: Content is protected !!