• Mon. Sep 16th, 2024

PLACE YOUR AD HERE AT LOWEST PRICE

ವಯನಾಡ್‌ನಲ್ಲಿ ಸಂಭವಿಸಿರುವ ಭೀಕರ ಭೂಕುಸಿತ, ಜಲಪ್ರಳಯ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಬೆನ್ನಲ್ಲೇ ಮೇಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ‘ವಿಪತ್ತು ಪೀಡಿತ ಪ್ರದೇಶ’ ಎಂದು ಘೋಷಿಸಿ ಕೇರಳ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.

“ನಾವು ಈ ದುರಂತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಅವರು ಕಾನೂನಾತ್ಮಕ ಸಮಸ್ಯೆಗಳಿವೆ ಎಂದು ಹೇಳಿ ನಿರಾಕರಿಸಿದ್ದಾರೆ. ಆದ್ದರಿಂದ ನಾವು ಈ ದುರಂತವನ್ನು ‘ರಾಜ್ಯ ವಿಪತ್ತು’ ಎಂದು ಘೋಷಿಸಲಿದ್ದೇವೆ” ಎಂದು ಕೇರಳದ ಕಂದಾಯ ಸಚಿವ ಕೆ.ರಾಜನ್‌, ಹೇಳಿದ್ದಾಗಿ ಸುದ್ದಿಸಂಸ್ಥೆ Deccan Herald ವರದಿ ಮಾಡಿದೆ.

ವಯನಾಡ್ ಭೂಕುಸಿತ ದುರಂತದ ಪರಿಹಾರ ಕಾರ್ಯಕ್ಕೆ ಹೆಚ್ಚುವರಿ ಹಣ ಬಿಡುಗಡೆ ಮಾಡಬೇಕು ಮತ್ತು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇರಳದ ಆಡಳಿತ ಮತ್ತು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಅದಕ್ಕೆ ಕೇಂದ್ರ ನಿರಾಕರಿಸಿದೆ ಎಂದು ವರದಿಯಾಗಿದೆ. ಈ ನಡುವೆ ಕೇರಳ ಸರ್ಕಾರ ರಾಜ್ಯ ವಿಪತ್ತು ಎಂದು ಘೋಷಿಸಿದೆ. ಈ ಬೆಳವಣಿಗೆ ಮತ್ತೊಂದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಶುಕ್ರವಾರದ ಆದೇಶದಲ್ಲಿ ಭೂಕುಸಿತ ಮತ್ತು ಅದರ ತಕ್ಷಣದ ಪರಿಣಾಮಗಳು ವಯನಾಡಿನ ವೈತಿರಿ ತಾಲೂಕಿನ ಕೊತ್ತಪಾಡಿ, ವೆಳ್ಳರ್ಮಲ ಮತ್ತು ತೃಕ್ಕೈಪೆಟ್ಟ ಗ್ರಾಮಗಳನ್ನು ಒಳಗೊಂಡಿರುವ ಮೆಪ್ಪಾಡಿ ಗ್ರಾಮ ಪಂಚಾಯತ್‌ನಲ್ಲಿ ಜೀವ ಮತ್ತು ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ ಎಂದು ಸರ್ಕಾರ ಹೇಳಿದೆ.

2018ರಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದ ದುರಂತವನ್ನು ಹೊರತುಪಡಿಸಿದರೆ, ಕೇರಳದ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಪ್ರಕೃತಿ ವಿಕೋಪವಾಗಿದೆ. ಅರಬ್ಬೀಸಮುದ್ರದಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಮತ್ತು ಗಣಿಗಾರಿಕೆಯಂಥ ಪರಿಸರಕ್ಕೆ ಹಾನಿ ತರುವ ಚಟುವಟಿಕೆಗಳ ಏರಿಕೆಯಿಂದಾಗಿ, ಹಸಿರು ಮರೆಯಾಗಿರುವುದಿಂದ ಇಂಥ ಭೂಕುಸಿತಗಳ ಸಾಧ್ಯತೆ ಹೆಚ್ಚು ಎಂದು ಹವಾಮಾನ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಜುಲೈ 30ರಂದು ವಯನಾಡ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಜಲಪ್ರಳಯದಲ್ಲಿ ಮೃತರ ಸಂಖ್ಯೆ ಶುಕ್ರವಾರ 300 ದಾಟಿದೆ. ಇನ್ನೂ 200ರಷ್ಟು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.

Leave a Reply

Your email address will not be published. Required fields are marked *

You missed

error: Content is protected !!