• Thu. Sep 19th, 2024

PLACE YOUR AD HERE AT LOWEST PRICE

ವಯನಾಡ್ ಸೇರಿದಂತೆ ವಿವಿದೆಡೆ ಸಂಭವಿಸಿದ ಭೂಕುಸಿತ ದುರಂತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಅರಣ್ಯ ಒತ್ತುವರಿ ತೆರವು ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಇಂದಿನಿಂದ (ಆ.5) ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯ ಆರಂಭಿಸಲಿದೆ. ಇದಕ್ಕಾಗಿ ಕಾರ್ಯಪಡೆ ರಚಿಸಿದೆ.

ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ 2023ರಲ್ಲೇ ಅರಣ್ಯ ಇಲಾಖೆ ಟಿಪ್ಪಣಿ ಹೊರಡಿಸಿತ್ತು. ಆದರೆ, ಕಾರ್ಯಪಡೆ ರಚನೆಯಾಗಿರಲಿಲ್ಲ.

ಈ ವರ್ಷದ ಜುಲೈ ತಿಂಗಳಲ್ಲಿ ಶಿರಾಡಿ, ಚಾರ್ಮಾಡಿ ಘಾಟ್‌ಗಳು, ಶಿರೂರು, ಸಕಲೇಶಪುರ ಸೇರಿದಂತೆ ವಿವಿದೆಡೆ ಭೂಕುಸಿತ ಸಂಭವಿಸಿದೆ. ವಯನಾಡ್‌ನಲ್ಲಿ ಭೀಕರ ದುರಂತವೇ ನಡೆದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಒತ್ತುವರಿ ತೆರವಿಗೆ ಮುಂದಾಗಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದೆ.

2015ರ ನಂತರ ನಡೆದ ಒತ್ತುವರಿ ತೆರವುಗಳ ಪೈಕಿ, ಒತ್ತುವರಿ ಸಾಭೀತಾದ ಪ್ರಕರಣಗಳನ್ನು ತಕ್ಷಣ ತೆರವುಗೊಳಿಸಬೇಕು, ನ್ಯಾಯಾಲಯದಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಬೇಕು ಮತ್ತು ಪ್ರಕರಣಗಳ ತ್ವರಿತ ವಿಲೇವಾರಿಗೆ ವಾರದಲ್ಲಿ ಎರಡು ದಿನ ಮೀಸಲಿಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಡೀ ವಯನಾಡ್ ಪರಿಸರ ಸೂಕ್ಷ್ಮ ಪ್ರದೇಶ

ವಯನಾಡ್ ದುಂತರದ ಬಳಿಕ ಸಂಪೂರ್ಣ ಪಶ್ಚಿಮಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಮಾಧವ ಗಾಡ್ಗೀಳ್ ಸಮಿತಿಯ ವರದಿಯ ಅನುಷ್ಠಾನಕ್ಕೆ ಆಗ್ರಹಗಳು ಕೇಳಿ ಬರುತ್ತಿವೆ. ಈ ನಡುವೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧ್ಯಯನ ವರದಿಯು ಇಡೀ ವಯನಾಡ್ ಜಿಲ್ಲೆಯನ್ನೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವುದಾಗಿ ವರದಿಯಾಗಿದೆ.

ವಯನಾಡ್‌ ದುರಂತದ ಬಳಿಕ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ.

Leave a Reply

Your email address will not be published. Required fields are marked *

You missed

error: Content is protected !!