• Mon. Sep 16th, 2024

PLACE YOUR AD HERE AT LOWEST PRICE

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಹಿಂಸಾಚಾರ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಮಾರ್ಗಸೂಚಿಗಳನ್ನು ರೂಪಿಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ನೇತೃತ್ವದ ಏಕ ಸದಸ್ಯ ಸಮಿತಿಯನ್ನು ತಮಿಳುನಾಡು ಸರ್ಕಾರ ರಚಿಸಿತ್ತು. ಈ ಸಮಿತಿ ಕಳೆದ ಜೂನ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ವರದಿಗೆ ಸಂಬಂಧಿಸಿದ ಗಮನಾರ್ಹ ಅಂಶವೊಂದು ಹೊರಬಿದ್ದಿದ್ದು, ಸಮಿತಿಯು ಸ್ವೀಕರಿಸಿದ 2,741 ಪ್ರತಿಕ್ರಿಯೆಗಳಲ್ಲಿ 1,400 ಪ್ರತಿಕ್ರಿಯೆಗಳು ಒಂದೇ ರೀತಿಯದ್ದಾಗಿತ್ತು. ಅವುಗಳು ಜಾತಿ ಆಧಾರಿತ ಮೀಸಲಾತಿಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ತಿರುನಲ್ವೇಲಿಯ ಕಾಲೇಜೊಂದರಿಂದ ಬಂದಿರುವ ಈ ಪ್ರತಿಕ್ರಿಯೆಗಳಿಂದ ನ್ಯಾಯಮೂರ್ತಿ ಚಂದ್ರು ಸಮಿತಿಯು ದಿಗ್ಭ್ರಮೆಗೊಂಡಿದೆ. ಇದು “ತಮಿಳುನಾಡಿನ ಸಾಮಾಜಿಕ ನ್ಯಾಯದ ಇತಿಹಾಸದ ಅಜ್ಞಾನ ಮತ್ತು ಸಂಪೂರ್ಣ ತಿಳುವಳಿಕೆಯ ಕೊರತೆ” ಎಂದು ವಿಷಾದಿಸಿದೆ. ಹಲವಾರು ಇತರ ಪ್ರತಿಕ್ರಿಯೆಗಳು ಸಹ ನಿರಾಶಾದಾಯಕವಾಗಿದ್ದವು. ಅವುಗಳನ್ನು ಚಾಟ್‌ ಜಿಪಿಟಿ – ಎಐ ಬೋಟ್‌ನ ಸಹಾಯದಿಂದ ಬರೆಯಲಾಗಿದೆ ಎಂದು ವರದಿ ತಿಳಿಸಿದೆ.

2023ರ ಆಗಸ್ಟ್‌ನಲ್ಲಿ ತಮಿಳುನಾಡಿನ ನಂಗುನೇರಿಯಲ್ಲಿಆರು ಮಂದಿ ಅಪ್ರಾಪ್ತರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ಇಬ್ಬರು ದಲಿತ ಮಕ್ಕಳ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ ನಂತರ ಸಮಿತಿ ರಚಿಸಲಾಗಿತ್ತು.

ಚಿನ್ನದೊರೈ ಎಂಬ ದಲಿತ ಬಾಲಕ ಕಲಿಕೆಯಲ್ಲಿ ಮುಂದಿದ್ದಾನೆ ಎಂದು ಆತನ ಮೇಲೆ ಹಲ್ಲೆ ನಡೆಸಲಾಗಿತ್ತು. ದಾಳಿಯ ವೇಳೆ ಚಿನ್ನದೊರೈ ಸಹಾಯಕ್ಕೆ ಹೋದ ಸಹೋದರನಿಗೆ ಗಾಯಗಳಾಗಿತ್ತು.

ಚಂದ್ರು ಸಮಿತಿ ತನ್ನ 600 ಪುಟಗಳ ವರದಿಯನ್ನು ಜೂನ್ 18, 2024 ರಂದು ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಿದೆ. ತಮ್ಮ ವರದಿಯಲ್ಲಿ, ನ್ಯಾಯಮೂರ್ತಿ ಚಂದ್ರು ಅವರು ಆಗಸ್ಟ್ 9, 2023 ರಂದು ದಲಿತ ಮಕ್ಕಳ ಮೇಲಿನ ದಾಳಿಯ ದಿನವನ್ನು “ತಮಿಳುನಾಡು ಶಾಲಾ ಶಿಕ್ಷಣದ ಇತಿಹಾಸದಲ್ಲಿ ಕರಾಳ ದಿನ” ಎಂದು ಖಂಡಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯವನ್ನು ಪರಿಹರಿಸಲು ಕ್ರಮಗಳನ್ನು ಶಿಫಾರಸು ಮಾಡುವ ಜವಾಬ್ದಾರಿ ಹೊತ್ತಿದ್ದ ಚಂದ್ರು ಅವರು, ಜಾತಿ ಭಿನ್ನತೆಗಳು ವ್ಯಾಪಕವಾಗಿವೆ ಎಂದು ಕಂಡುಕೊಂಡಿದ್ದಾರೆ. ಇದು “ಶೈಕ್ಷಣಿಕ ವ್ಯವಸ್ಥೆಯ ಮಿತಿಗಳನ್ನು ಮೀರಿ ಸಮಾಜವನ್ನು ತೀವ್ರವಾಗಿ ವ್ಯಾಪಿಸುತ್ತಿದೆ. ಹಾಗಾಗಿ, ಶಾಲೆಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಿದರೆ ಸಾಲುವುದಿಲ್ಲ. ಶಾಶ್ವತ ಪರಿಹಾರ ಬೇಕು ಮತ್ತು ಜಾತಿರಹಿತ ಸಮಾಜವನ್ನು ಸಾಧಿಸಲು ಸಮಗ್ರ ವಿಧಾನ ಬೇಕು ಎಂದು ವರದಿಯಲ್ಲಿ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಚಂದ್ರು ಸಮಿತಿಗೆ 2,741 ಪ್ರತಿಕ್ರಿಯೆಗಳು ಸರ್ಕಾರಿ ಇಲಾಖೆಗಳು, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು, ಎನ್‌ಜಿಒಗಳು ಮತ್ತು ಇತರ ವ್ಯಕ್ತಿಗಳಿಂದ ಬಂದಿವೆ. ಇದರಲ್ಲಿ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು ಸೇರಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಘಟನೆಗಳು ಮತ್ತು ದೊಡ್ಡ ರಾಜಕೀಯ ಪಕ್ಷಗಳ ಹೊರತಾಗಿ ತಿರುನೆಲ್ವೇಲಿಯ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಗಮನಾರ್ಹ ಮತ್ತು ಗಂಭೀರವಾದ ಪ್ರತಿಕ್ರಿಯೆಗಳು ಬಂದಿವೆ ಎಂದು ವರದಿ ಹೇಳಿದೆ.

ಈ ಕಾಲೇಜಿನಿಂದ ಬಂದಿರುವ 1,300ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಮೀಸಲಾತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳಿಂದ ಇಂತಹ ಅಭಿಯಾನ ನಡೆಸಿದ್ದಕ್ಕಾಗಿ ವರದಿಯು ಪ್ರಾಂಶುಪಾಲರನ್ನು ಟೀಕಿಸಿದೆ. ಏಕೆಂದರೆ, 1,340 ಪ್ರತಿಕ್ರಿಯೆಗಳನ್ನು ಒಂದೇ ರೀತಿಯ ಪೋಸ್ಟ್ ಕಾರ್ಡ್‌ಗಳಲ್ಲಿ ಕಳುಹಿಸಲಾಗಿತ್ತು. ಅವುಗಳು ಮೀಸಲಾತಿಯನ್ನು ಅಂತ್ಯಗೊಳಿಸಿ ಎಂಬ ಒಂದೇ ರೀತಿಯ ಸಂದೇಶಗಳನ್ನು ಒಳಗೊಂಡಿತ್ತು. ಗಮನಾರ್ಹವಾಗಿ, ಪೋಸ್ಟ್‌ ಕಾರ್ಡ್‌ಗಳಲ್ಲಿ”ಜಾತಿ ಆಧಾರಿತ ಯಾವುದೇ ಶೈಕ್ಷಣಿಕ, ಉದ್ಯೋಗ/ಸವಲತ್ತುಗಳನ್ನು ಯಾರಿಗೂ ನೀಡಬಾರದು. ಆರ್ಥಿಕ ಪ್ರೋತ್ಸಾಹ ನೀಡಬಹುದು” ಎಂಬ ಒಂದೇ ರೀತಿಯ ಸಾಲುಗಳಿದ್ದವು ಎಂದು ನ್ಯೂಸ್ ಮಿನಿಟ್ ತಿಳಿಸಿದೆ.

ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಿಪಡಿಸಲು ಪ್ರೋತ್ಸಾಹಿಸುವುದು ಉತ್ತೇಜನಕಾರಿಯಾದರೂ, ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಲು ಒತ್ತಾಯಿಸುವುದು ಸರಿಯಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಕೋರಿ ನಾವು ಕಳುಹಿಸಿರುವ ನೋಟಿಸ್‌ಗೆ ವೈಯಕ್ತಿವಾಗಿ ಪ್ರತಿಕ್ರಿಯಿಸಲು ಕಾಲೇಜಿನ ಪ್ರಾಂಶುಪಾಲರು ವಿಫಲರಾಗಿದ್ದಾರೆ. ಪ್ರಾಂಶುಪಾಲರು ತಮ್ಮದೇ ಅಭಿಪ್ರಾಯ ಹೊಂದಿರಬಹುದು. ಆದರೆ, ಅದನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸರಿಯಲ್ಲ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಅಭಿಪ್ರಾಯ ತಿಳಿಸಬೇಕಿತ್ತು. ಮೀಸಲಾತಿ ರದ್ದತಿಯ ಕೂಗು ನ್ಯಾಯಸಮ್ಮತವಲ್ಲ ಎಂದು ಕಂಡುಬಂದಿದೆ. ಹಾಗಾಗಿ, ಆ ಸಲಹೆಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರು ವರದಿಯಲ್ಲಿ ಹೇಳಿದ್ದಾರೆ ಎಂದು ನ್ಯೂಸ್‌ ಮಿನಿಟ್ ವಿವರಿಸಿದೆ.

Leave a Reply

Your email address will not be published. Required fields are marked *

You missed

error: Content is protected !!