• Thu. Sep 19th, 2024

PLACE YOUR AD HERE AT LOWEST PRICE

ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ‘ಅಸಹಕಾರ ಚಳುವಳಿ’ಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಮತ್ತು ಆಡಳಿತರೂಢ ಅವಾಮಿ ಲೀಗ್ ಪಕ್ಷದ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ 98 ಮಂದಿ ಮೃತಪಟ್ಟಿದ್ದಾರೆ.

ಪ್ರಧಾನಿ ಶೇಖ್ ಹಸೀನಾ ಸರ್ಕಾರದ ವಿರುದ್ದ ನಡೆಸುತ್ತಿರುವ ಪ್ರತಿಭಟನೆಗೆ ಸರ್ಕಾರದ ಪರ ಇರುವ ಅವಾಮಿ ಲೀಗ್, ಛಾತ್ರಾ ಲೀಗ್ ಮತ್ತು ಜುಬೋ ಲೀಗ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಢಾಕಾ ಸೇರಿದಂತೆ ದೇಶದ 13 ಜಿಲ್ಲೆಗಳಲ್ಲಿ ಘರ್ಷಣೆ ಉಂಟಾಗಿದೆ. ಮೃತರಲ್ಲಿ ಸುಮಾರು 15ರಷ್ಟು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಸಂಜೆಯ ವೇಳೆಗೆ ದೇಶದಾದ್ಯಂತ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಮತ್ತು 4ಜಿ ಮೊಬೈಲ್ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮಾತುಕತೆಗೆ ಬರುವಂತೆ ಪ್ರಧಾನಿ ಹಸೀನಾ ನೀಡಿರುವ ಆಹ್ವಾವನ್ನು ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ. ಇದುವರೆಗೆ ದೇಶದಾದ್ಯಂತ ಸುಮಾರು 11 ಸಾವಿರ ಜನರನ್ನು ಬಂಧಿಸಲಾಗಿದೆ. ಶಾಲಾ-ಕಾಲೇಜು, ಕೋರ್ಟ್‌, ಕಚೇರಿಗಳನ್ನು ಮುಚ್ಚಲಾಗಿದೆ.

ಅವಾಮಿ ಲೀಗ್ ಕಚೇರಿಗಳು, ಸರ್ಕಾರಿ ವಾಹನಗಳು ಮತ್ತು ಕಚೇರಿಗಳು ಸೇರಿದಂತೆ ಅನೇಕ ಆಸ್ತಿ-ಪಾಸ್ತಿಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಪ್ರತಿಭಟನೆಗೆ ಕಾರಣವೇನು?

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ 1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ ಯೋಧರ ಕುಟುಂಬಸ್ಥರಿಗೆ ಸರ್ಕಾರಿ ನೇಮಕಾತಿಗಳಲ್ಲಿ ಶೇ. 30 ಮೀಸಲಾತಿಯಿದೆ. ಈ ಮೀಸಲಾತಿ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ. ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ಅವಾಮಿ ಲೀಗ್ ಪಕ್ಷದ ಮುಖ್ಯಸ್ಥೆ ಹಾಗೂ ಪ್ರಧಾನಿ ಶೇಖ್ ಹಸೀನಾರ ಬೆಂಬಲಿಗರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಿ, ಈ ಮೀಸಲಾತಿ ವ್ಯವಸ್ಥೆ ಕೊನೆಗೊಳಿಸಿ ಮೆರಿಟ್ ಆಧಾರಿತ ನೇಮಕಾತಿ ಜಾರಿಗೊಳಿಸಬೇಕು ಎಂಬುವುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ತಿಂಗಳ ಹಿಂದೆ ಪ್ರಾರಂಭಗೊಂಡ ಪ್ರತಿಭಟನೆ ಕೆಲ ದಿನಗಳ ಕಾಲ ನಿಲ್ಲಿಸಲಾಗಿತ್ತು. ಭಾನುವಾರದಿಂದ ಮತ್ತೆ ಪ್ರತಿಭಟನೆ ಪ್ರಾರಂಭಗೊಂಡಿದ್ದು, ಹಿಂಸಾಚಾರಕ್ಕೆ ತಿರುಗಿದೆ.

Leave a Reply

Your email address will not be published. Required fields are marked *

You missed

error: Content is protected !!