• Thu. Sep 19th, 2024

PLACE YOUR AD HERE AT LOWEST PRICE

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ವಿನೇಶ್ ಫೋಗಟ್ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಫೈನಲ್‌ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. 100 ಗ್ರಾಂನಷ್ಟು ತೂಕ ಹೆಚ್ಚಾಗಿದೆ ಎಂಬ ಕಾರಣ ನೀಡಿ ಅವರನ್ನು ಅನರ್ಹಗೊಳಿಸಲಾಗಿದೆ.

ಈ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್, “ಭಾರತದ ವಿರುದ್ದ ದೊಡ್ಡ ಪಿತೂರಿ ನಡೆದಿದೆ” ಎಂದು ಆರೋಪಿಸಿದ್ದಾರೆ.

“ಈ ಅನರ್ಹತೆಯು ಭಾರತೀಯ ಕುಸ್ತಿಪಟುಗಳನ್ನು ದುರ್ಬಲಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿದೆ. ವಿನೇಶ್ ಅವರ ಪ್ರಯತ್ನ  ಶ್ಲಾಘನೀಯ. ಬಹುಶಃ ಕೆಲವರಿಗೆ ಈ ಸಂತೋಷವನ್ನು ಅರಗಿಸಿಕೊಳ್ಳಲಾಗಲಿಲ್ಲ ಎಂದನಿಸುತ್ತದೆ. ಒಂದು ರಾತ್ರಿಯಲ್ಲಿ ಐದರಿಂದ ಆರು ಕೆ.ಜಿತೂಕ ಇಳಿಸಿಕೊಳ್ಳಬಹುದು.

ಹೀಗಿರುವಾಗ 100 ಗ್ರಾಂನ ಸಮಸ್ಯೆ ಏನು? ವಿನೇಶ್ ಗೆದ್ದರೆ ಯಾರಿಗಾದ್ರೂ ಸಮಸ್ಯೆ ಆಗುತ್ತದೆ ಅನಿಸುತ್ತದೆ. ಹಾಗಾಗಿ, ಆಕೆಯನ್ನು ಅನರ್ಹಗೊಳಿಸಿರಬಹುದು. 100 ಗ್ರಾಂ ತೂಕ ಇಳಿಸಿಕೊಳ್ಳಲು ಆಕೆಗೆ ಅವಕಾಶ ನೀಡಬೇಕಿತ್ತು” ಎಂದು ವಿಜೇಂದರ್ ಸಿಂಗ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

“ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುವಾಗಿ ನಾನೆಂದೂ ಇಂತಹ ಘಟನೆಯನ್ನು ಕಂಡಿರಲಿಲ್ಲ ಎಂದು ವಿಜೇಂದರ್ ಸಿಂಗ್ ಹೇಳಿದ್ದು, ವಿನೇಶ್ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯ. ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು ಮೇಲ್ಮನವಿ ಸಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರಿಂದ ಭಾರತಕ್ಕೆ ಮತ್ತೊಂದು ಪದಕ ಖಚಿತಗೊಂಡಿತ್ತು. ಗೆದ್ದರೆ ಚಿನ್ನ, ಸೋತರೆ ಬೆಳ್ಳಿ ಒಟ್ಟಿನಲ್ಲಿ ಪದಕವಂತೂ ಗ್ಯಾರಂಟಿ ಎಂದು ಇಡೀ ದೇಶ ಖುಷಿ ಪಟ್ಟಿತ್ತು. ಈ ನಡುವೆ ವಿನೇಶ್ ಅವರ ಅನರ್ಹತೆಯ ಆಘಾತಕಾರಿ ಸುದ್ದಿ ಬಂದಿದೆ. ಇದರಿಂದ ವಿನೇಶ್ ಬರಿಗೈಯಲ್ಲಿ ಮರಳಬೇಕಾದ ಪರಿಸ್ಥಿತಿ ಎದುರಾಗಿದೆ.

ವಿನೇಶ್ ಅವರ ಅನರ್ಹತೆಯೊಂದಿಗೆ, ಸಾಕ್ಷಿ ಮಲಿಕ್ ಒಬ್ಬರೇ ಕುಸ್ತಿಯಲ್ಲಿ ಭಾರತದ ಏಕೈಕ ಒಲಿಂಪಿಕ್ ಪದಕ ವಿಜೇತರಾಗಿ ಉಳಿಯಲಿದ್ದಾರೆ. ವಿಜೇಂದರ್ ಹೇಳಿಕೆ ಜಾಗತಿಕ ಮಟ್ಟದಲ್ಲಿ ಭಾರತೀಯ ಸ್ಪರ್ಧಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಲ್ಲಿ ಇರುವ ಕಳವಳ ಮತ್ತು ಹತಾಶೆಯನ್ನು ಎತ್ತಿ ತೋರಿಸುತ್ತದೆ ಎಂದು ವರದಿಗಳು ಹೇಳಿವೆ.

Leave a Reply

Your email address will not be published. Required fields are marked *

You missed

error: Content is protected !!