• Tue. May 21st, 2024

PLACE YOUR AD HERE AT LOWEST PRICE

ರಾಜ್ಯದಾದ್ಯಂತ ಐಪಿ ಸೆಟ್‌ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್‌ ಒದಗಿಸಲು 600 ಮೆಗಾವ್ಯಾಟ್‌/ಗಂಟೆ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್‌ ಯುನಿಟ್‌ಗಳ ಅಗತ್ಯವಿದೆ. ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ ಏಳು ಗಂಟೆ ವಿದ್ಯುತ್‌ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂಧನ ಇಲಾಖೆ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಯಿತು.

2022 ನೇ ಇಸವಿಗೆ ಹೋಲಿಸಿದರೆ 2023 ರಲ್ಲಿ ವಿದ್ಯುತ್‌ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಿದೆ. ಅಕ್ಟೋಬರ್‌ ತಿಂಗಳಲ್ಲಿ 15,978 ಮೆಗಾವ್ಯಾಟ್‌ ಬೇಡಿಕೆ ದಾಖಲಾಗಿದೆ. ವಿದ್ಯುತ್‌ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ  ಶೇ. 45 ರಷ್ಟು ಹೆಚ್ಚಿದೆ. ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ. 9 ರಿಂದ 14 ರಷ್ಟು ಹೆಚ್ಚಳವಾಗಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿದರು.

ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್‌ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್‌ 19 ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ. ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್‌ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್‌ ಪಡೆಯಲಾಗುತ್ತಿದೆ ಎಂದು ಜಾರ್ಜ್‌ ತಿಳಿಸಿದರು.

ಸೆಕ್ಷನ್‌ 11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್‌ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್‌ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್‌ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್‌ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ವಿವಿಧ ವಿದ್ಯುತ್‌ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಧಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದೆ. ಇದಕ್ಕಾಗಿ ಸುಮಾರು 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಅನುದಾನದ ಉಳಿತಾಯ, ಮರುಹಂಚಿಕೆಯ ಮೂಲಕ ಈ ವೆಚ್ಚ ಭರಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್‌ ಹೇಳಿದರು.

ಮುಂದಿನ ವರ್ಷದಲ್ಲಿ ಐಪಿ ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯನ್ನು ಸೌರವಿದ್ಯುತ್‌ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್‌ ನೀಡಲು ಇದರಿಂದ ಅನುಕೂಲವಾಗಲಿದೆ ಎಂದು ಇಂಧನ ಸಚಿವರು ತಿಳಿಸಿದರು.

ವಿವಿಧ ವಿದ್ಯುತ್ ಕಂಪನಿಗಳ 389.66 ಕೋಟಿ ರೂ.ಗಳು ಬಾಕಿ ಮನ್ನಾ.

ಭಾಗ್ಯಜ್ಯೋತಿ, ಕುಟೀರ ಜ್ಯೋತಿಗೆ 18 ಯೂನಿಟ್‍ಗಳ ಮಿತಿಯಿತ್ತು. ಅದನ್ನು 40 ಯೂನಿಟ್‍ಗಳಿಗೆ ನಮ್ಮ ಸರ್ಕಾರವೇ ಹಿಂದೆ ಹೆಚ್ಚಳ ಮಾಡಿತ್ತು. ಈ ಗೃಹಜ್ಯೋತಿ ಬಂದ ನಂತರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿಗಳನ್ನು ಗೃಹಜ್ಯೋತಿ ಯೋಜನೆಯಡಿ ಸೇರಿಸಿ, 58 ಯೂನಿಟ್‍ವರಗೆ ಉಚಿತವಾಗಿ ವಿದ್ಯುತ್ ನೀಡಲು ತೀರ್ಮಾನಿಸಿದೆ.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳಡಿ 389.66 ಕೋಟಿ ರೂ.ಗಳು ಬಾಕಿ ಉಳಿದಿದ್ದವು. ಬಾಕಿ ಇರುವುದರಿಂದ ಗೃಹಜ್ಯೋತಿಯಡಿ ಉಚಿತ ಕೊಡುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಬಾಕಿ ಮೊತ್ತವನ್ನು ಒಂದು ಬಾರಿಗೆ ಮನ್ನಾ ಮಾಡಲಾಗುತ್ತಿದೆ. ಇನ್ನು ಮುಂದೆ ಬಾಕಿ ಕೊಡಬೇಕಾದ ಅಗತ್ಯವಿಲ್ಲ. ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಜೂನಿಯರ್ ಕಾಲೇಜುಗಳಿಗೆ ನವೆಂಬರ್ 1 ರಂದು ಘೋಷಿಸಿದಂತೆ ವಿದ್ಯುತ್ ಹಾಗೂ ನೀರಿನ ವೆಚ್ಚವನ್ನು ಸರ್ಕಾರವ ಭರಿಸಲಿದೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮುಂದಿನ ಮುಂಗಾರಿನವರೆಗೆ ಮಳೆ ಬರುವುದಿಲ್ಲ ಎಂದು ಲೆಕ್ಕ ಹಾಕಿಯೇ ಈ ತೀರ್ಮಾನ ಮಾಡಲಾಗಿದೆ. ಜುಲೈ ಅಂತ್ಯದವರೆಗೆ ಲೆಕ್ಕ ಹಾಕಲಾಗಿದೆ ಎಂದು ಸಿಎಂ ತಿಳಿಸಿದರು.

ಶೇ 70 ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿ ವಿದ್ಯುತ್ ಖರೀದಿಯ ಮೊತ್ತ ಎಷ್ಟು ವಿದ್ಯುತ್ ಖರೀದಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಶೇ 70 ರಷ್ಟು ಥರ್ಮಲ್ ವಿದ್ಯುತ್ ಉತ್ಪಾದನೆಯಾಗುತ್ತಿದೆ 1000 ಯೂನಿಟ್‍ವರೆಗೆ ವಿದ್ಯುತ್‍ನ್ನು ಹೊರಗಿನಿಂದ ಖರೀದಿಯಾಗುತ್ತಿದೆ ಎಂದರು. ಸ್ಥಳೀಯ ಹಾಗೂ ಆಮದು ಮಾಡಿದ ಕಲ್ಲಿದ್ದಿಲನ್ನು ಮಿಶ್ರ ಮಾಡಿ ಬಳಸುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಉತ್ತರಪ್ರದೇಶ ಹಾಗೂ ಪಂಚಾಬ್ ನಡುವೆ ನಮ್ಮದು ವಿನಿಮಯ ಪದ್ದತಿ ಇದೆ. ಈಗ ಪಡೆದು, ಜೂನ್‍ನಿಂದ ನಾವು ಅವರಿಗೆ ಹಿಂದಿರುಗಿಸುತ್ತೇವೆ. ಯಾವುದೇ ಖಾಸಗಿಯವರಿಂದ ವಿದ್ಯುತ್ ಖರೀದಿಸಿಲ್ಲ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರಗಳನ್ನು ಚಿಟ್ ಫಂಡ್ ಹೂಡಿಕೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಇಂತಹ ಯಾವುದೇ ಯೋಜನೆಗಳು ಸರ್ಕಾರದ ಮುಂದಿಲ್ಲ. ಮಹಿಳೆಯರಿಗೆ ಡಿಬಿಟಿ ಮೂಲಕ ಎರಡು ಸಾವಿರ ರೂ.ಗಳು ನೀಡಲಾಗುತ್ತಿದ್ದು, ಇದನ್ನು ಮುಂದುವರೆಸಲಾಗುವುದು ಎಂದು ಸಿದ್ದರಾಮಯ್ಯ ಎಂದರು.

ಗಣಿ ಇಲಾಖೆಯ ಅಧಿಕಾರಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ಕೊಲೆಯಾದ ಅಧಿಕಾರಿಗಳ ವಾಹನಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಎಂ ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹ್ಮದ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್‌ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!