• Tue. May 14th, 2024

PLACE YOUR AD HERE AT LOWEST PRICE

ಕೋಲಾರದಲ್ಲಿ ಕಾಂಗ್ರೇಸ್ ನಾಯಕರ ಬಣ ರಾಜಕೀಯ ತಾರಕಕ್ಕೇರಿದೆ. ಸಚಿವ ಕೆ ಎಚ್​ ಮುನಿಯಪ್ಪ ಮತ್ತು ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಬಣಗಳ ನಡುವಣ ತಿಕ್ಕಾಟ ಹೆಚ್ಚಾಗಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಸಚಿವ ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇತ್ತ ರಮೇಶ್‌ ಕುಮಾರ್‌ ಬಣ ಕೂಡ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದು, ಅವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂ ಕೆಲಸವೇ  ಮಾಡುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.

ಮುನಿಯಪ್ಪ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡುವುದಕ್ಕೆ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್, ಕೋಲಾರದ ಶಾಸಕ ಕೊತ್ತೂರು ಮಂಜುನಾಥ್‌ ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಮಾದಿಗ ಸಮುದಾಯಕ್ಕೆ ಸೇರಿದ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್‌ ಹನುಮಂತಯ್ಯ ಅವರನ್ನು ಕಣಕ್ಕೆ ಇಳಿಸಬೇಕು ಎಂದು ರಮೇಶ್‌ ಕುಮಾರ್ ಬಣದವರು ಒತ್ತಡ ಹೇರಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ಕೇಂದ್ರ ನಾಯಕರಿಗೆ ಭರವಸೆ‌ ಕೂಡ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಕೋಲಾರ ಕ್ಷೇತ್ರದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡಬೇಕು ಎಂದು ಆಹಾರ ಸಚಿವ ಕೆ ಎಚ್‌ ಮುನಿಯಪ್ಪ ಹಿಡಿದ ಪಟ್ಟು ಸಡಿಲಿಸಿಲ್ಲ. ಹೈಕಮಾಂಡ್‌ನ ನಾಯಕರ ಮೇಲೂ ಒತ್ತಡ ತರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮ್ಮತಿಸಿದರೆ ಮಾತ್ರ ಕೋಲಾರ ಕ್ಷೇತ್ರದಿಂದ ಚಿಕ್ಕಪೆದ್ದಣ್ಣ ಕಣಕ್ಕಿಳಿಯುವ ಸಾಧ್ಯತೆ ಇದೆ.

ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಅನ್ನು ಮಣಿಸಲು ಒಂದಾಗಿರುವ ಬಿಜೆಪಿ-ಜೆಡಿಎಸ್‌ ಪಕ್ಷಗಳಿಗೆ ಕೋಲಾರ ಲೋಕಸಭೆ ಕ್ಷೇತ್ರ ಪ್ರತಿಷ್ಠೆಯ ವಿಷಯವಾಗಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮೈತ್ರಿಯಲ್ಲಿ ಗೊಂದಲ ಮುಂದುವರಿದಿದೆ. ಕೋಲಾರ ಜೆಡಿಎಸ್‌ಗೆ ಸಿಕ್ಕಿದೆ ಎನ್ನುವ ಮಾತುಗಳು ಕೇಳಿಬಂದಿದ್ದರೂ ಅದು ಇನ್ನೂ ಅಧಿಕೃತಗೊಂಡಿಲ್ಲ.

ಜೆಡಿಎಸ್‌ ಪಕ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಂದಾದರೂ ಮೀಸಲು ಕ್ಷೇತ್ರವನ್ನು ಪಡೆಯದಿದ್ದರೆ ಜೆಡಿಎಸ್‌ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಪಕ್ಷವೆಂಬ ವಿರೋಧಿಗಳ ಟೀಕೆಗೆ ಗುರಿಯಾಗಬೇಕಾಗುತ್ತದೆಂಬ ಆತಂಕ ಜೆಡಿಎಸ್‌ ವರಿಷ್ಠರಲ್ಲಿದೆ. ಇದೇ ಕಾರಣದಿಂದಾಗಿ ಒಂದಾದರೂ (ಕೋಲಾರ) ಮೀಸಲು ಕ್ಷೇತ್ರ ಪಡೆಯಲೇಬೇಕೆಂಬ ನಿರ್ಧಾರವನ್ನು ದಳಪತಿಗಳು ಮಾಡಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದರಿದ್ದು, ಎಂಟೂ ಕ್ಷೇತ್ರಗಳಲ್ಲಿ ಮುನಿಸ್ವಾಮಿ ಜನರಿಗೆ ಹತ್ತಿರವಾಗಿದ್ದಾರೆ. ಬಿಜೆಪಿ ಪಕ್ಷದ ನಾಯಕರು ನಡೆಸಿದಂತಹ ಸರ್ವೇಯಿಂದಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿಯೊಂದಿಗೆ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಮಾಡಿದರೆ ಗೆಲುವು ಸುಲಭವೆಂಬ ವರದಿ ಬಂದಿದೆ. ಜೆಡಿಎಸ್‌ನಲ್ಲಿ ಕಾಂಗ್ರೆಸ್‌ಗೆ ಪೈಪೋಟಿ ನೀಡುವಂತಹ ಅಭ್ಯರ್ಥಿಗಳಿಲ್ಲವೆಂಬ ವರದಿಗಳ ಹಿನ್ನೆಲೆಯಲ್ಲಿ ಕೋಲಾರ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!