• Fri. Apr 26th, 2024

ಕೋಲಾರ ಜಿಲ್ಲೆಯ ಆರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ: ಅಭ್ಯರ್ಥಿಗಳಲ್ಲಿ ಗರಿಗೆದರಿದ ಉತ್ಸಾಹ, ಬೆಂಬಲಿಗರ ಹರ್ಷ

ByNAMMA SUDDI

Dec 19, 2022

PLACE YOUR AD HERE AT LOWEST PRICE

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ 2023ರ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಘೋಷಣೆಯಾಗಿರುವುದು ಜೆಡಿಎಸ್‌ನಲ್ಲಿ ಸಂತಸ ತಂದಿದೆ.

ಹಲವಾರು ದಿನಗಳಿಂದಲೂ ಮುಂದೂಡುತ್ತಲೇ ಬಂದಿದ್ದ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯು ಬಿಡುಗಡೆಯಾದ ನಂತರ ಕೋಲಾರ ಜಿಲ್ಲೆಯ ಆರು ತಾಲೂಕುಗಳ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿಯ ಘೋಷಣೆಯನ್ನು ಖಚಿತಪಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ಉಳಿದ ಎಲ್ಲಾ ರಾಜಕೀಯ ಪಕ್ಷಗಳಿಗಿಂತಲೂ ಮುಂಚಿತವಾಗಿಯೇ ಅಲ್ಪಸಂಖ್ಯಾತರ ಸಮಾವೇಶ, ಜಲಧಾರೆ, ಪಂಚರತ್ನ ಯಾತ್ರೆಗಳ ಮೂಲಕ ಕೋಲಾರ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಜೆಡಿಎಸ್ ಈ ಬಾರಿ ಹೆಚ್ಚಿನ ಸಂಖ್ಯೆಯ ಶಾಸಕರನ್ನು ಗೆಲ್ಲಿಸಿಕೊಳ್ಳುವ ಉತ್ಸಾಹದಲ್ಲಿದೆ.

ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಮೂರು ಸಾಮಾನ್ಯ ಕ್ಷೇತ್ರಗಳಾಗಿದ್ದು, ಮೂರರಲ್ಲಿಯೂ ಜೆಡಿಎಸ್ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ. ಬಂಗಾರಪೇಟೆ ಮತ್ತು ಕೆಜಿಎಫ್ ನಲ್ಲಿ ಭೋವಿ ಸಮುದಾಯದ ಮತ್ತು ಮುಳಬಾಗಿಲಿನಲ್ಲಿ ದಲಿತ ಬಲಗೈ ಸಮುದಾಯ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದೆ.

ಕೋಲಾರ ಅಭ್ಯರ್ಥಿ

ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷರು, ಭಾರತ ಸೇವಾದಳ ಗೌರವಾಧ್ಯಕ್ಷರಾಗಿರುವ ಆಗಿರುವ ಪ್ರತಿಷ್ಠಿತ ಸಿಎಂಆರ್‌ ಟೊಮೇಟೊ ಮಂಡಿ ಮಾಲೀಕ ಸಿಎಂಆರ್ ಶ್ರೀನಾಥ್ ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ. ಅವರು ಕೊರೊನಾ ಅವಧಿಯಲ್ಲಿ ವೈವಿಧ್ಯಮಯ ಸೇವಾಕಾರ್ಯಕ್ರಮಗಳ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಆದರೂ ಶ್ರೀನಾಥ್‌ರಿಗೆ ಜೆಡಿಎಸ್ ಕೋಲಾರ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಟಿಕೆಟ್‌ಗೆ ಪ್ರಯತ್ನಿಸಿ ಪೈಪೋಟಿ ನೀಡಿದ್ದರು. ಆದರೆ, ಜೆಡಿಎಸ್ ಅಂತಿಮವಾಗಿ ಸಿಎಂಆರ್ ಶ್ರೀನಾಥ್‌ರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.

ಮುಳಬಾಗಿಲು

ಮೂಲತಃ ಶ್ರೀನಿವಾಸಪುರ ತಾಲೂಕಿನ ಉದ್ಯಮಿ ಸಮೃದ್ಧಿ ಮಂಜುನಾಥ್ 2018 ರ ಚುನಾವಣೆಯಲ್ಲಿಯೂ ಮುಳಬಾಗಿಲು ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಅಲ್ಪಮತಗಳ ಅಂತರದಿಂದ ಸೋಲುವ ಮೂಲಕ ಮತದಾರರ ಅನುಕಂಪ ಗಿಟ್ಟಿಸಿಕೊಂಡಿದ್ದಾರೆ. ಸೋತಾಗಿನಿಂದಲೂ ಕ್ಷೇತ್ರದಲ್ಲಿಯೇ ಉಳಿದು ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಖಂಡರು ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ. ವಿವಿಧ ಬಣಗಳ ನಡುವೆಯೂ ತಮ್ಮದೇ ಗುಂಪನ್ನು ಬಲಪಡಿಸಿಕೊಂಡು ಸಮರ್ಥವಾಗಿ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ.

ಶ್ರೀನಿವಾಸಪುರ

ಕೋಲಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿರುವ ಜಿ.ಕೆ.ವೆಂಕಟಶಿವಾರೆಡ್ಡಿ ನಿರೀಕ್ಷಿಸಿದಂತೆ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಶ್ರೀನಿವಾಸಪುರ ಸಂಪ್ರದಾಯ ಮುರಿದು ಸೋಲನ್ನು ಅನುಭವಿಸಿದ ರೆಡ್ಡಿ ಈ ಬಾರಿ ಸ್ವಾಮಿ ರಮೇಶ್‌ಕುಮಾರ್‌ರನ್ನು ಮಣಿಸಿ ಗೆಲುವು ಸಂಪಾದಿಸುವ ಆತುರದಲ್ಲಿದ್ದಾರೆ. ರಮೇಶ್‌ಕುಮಾರ್ ವಿರೋಧಿ ಅಲೆಯನ್ನು ಸದ್ಬಳಿಸಿಕೊಂಡು ಮುನ್ನಡೆಯುವ ಪ್ರಯತ್ನದಲ್ಲಿರುವ ವೆಂಕಟಶಿವಾರೆಡ್ಡಿ ಜೆಡಿಎಸ್‌ನ ಹಿರಿಯ ಸದಸ್ಯರೂ ಆಗಿದ್ದಾರೆ. ಈ ಬಾರಿ ಮತ್ತೇ ಗೆಲ್ಲುವ ಮೂಲಕ ರಾಜಕೀಯ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಮಾಲೂರು

ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಅಭ್ಯರ್ಥಿಯಾಗಿ ಜೆ.ಇ.ರಾಮೇಗೌಡ ಘೋಷಿತರಾಗಿದ್ದಾರೆ. 2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಲೂರು ಕ್ಷೇತ್ರದಿಂದಲೇ ಸ್ಪರ್ಧಿಸಿ ಪರಾಭವಗೊಂಡಿದ್ದರು. ಮಾಲೂರು ಜೆಡಿಎಸ್ ಮಾಜಿ ಶಾಸಕ ಬಿಜೆಪಿಗೆ ಹೋಗಿರುವುದರಿಂದ ಜೆಡಿಎಸ್ ರಾಮೇಗೌಡರನ್ನು ಆಯ್ಕೆ ಮಾಡಿಕೊಂಡಿದೆ. ಹಿಂದೊಮ್ಮೆ ಮಾಲೂರಿನಲ್ಲಿ ಬಲಿಷ್ಠವಾಗಿದ್ದ ಜೆಡಿಎಸ್‌ನ ಗತವೈಭವವನ್ನು ತಮ್ಮ ಗೆಲುವಿನ ಮೂಲಕ ಹಿಂತಿರುಗಿಸಿಕೊಡಲು ರಾಮೇಗೌಡ ಸಿದ್ಧತೆ ನಡೆಸುತ್ತಿದ್ದಾರೆ.

ಬಂಗಾರಪೇಟೆ

ಜಿಲ್ಲೆಯ ಮತ್ತೊಂದು ಮೀಸಲು ಕ್ಷೇತ್ರ ಬಂಗಾರಪೇಟೆಯಿಂದ ಕೋಲಾರ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿಯವರ ಪುತ್ರ ಮಲ್ಲೇಶ್‌ಬಾಬು ಅಭ್ಯರ್ಥಿಯಾಗಿ ಘೋಷಿತರಾಗಿದ್ದಾರೆ. ಹಿಂದಿನ ಅವಽಯಲ್ಲಿಯೂ ಜೆಡಿಎಸ್‌ನಿಂದ ಸ್ಪರ್ಧಿಸಿ ಮಲ್ಲೇಶ್‌ಬಾಬು ಸೋಲನುಭವಿಸಿದ್ದರು. ಆದರೂ, ಜೆಡಿಎಸ್ ಪಕ್ಷದ ವರಿಷ್ಠರು ಮತ್ತೇ ಅವರ ಮೇಲೆ ನಂಬಿಕೆ ಇಟ್ಟು ಯುವ ರಾಜಕಾರಣಿಯನ್ನು ಪ್ರೋತ್ಸಾಹಿಸಿದ್ದಾರೆ. ಈ ಬಾರಿ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಮಲ್ಲೇಶ್‌ಬಾಬು ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಡುತ್ತಾ ಮುಖಂಡರನ್ನು ಓಲಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಕೆಜಿಎಫ್

ಕೋಲಾರ ಮೂಲದ ರಮೇಶ್‌ಬಾಬು ಕೆಜಿಎಫ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಹಿಂದೆ ಕೋಲಾರ ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಕೆಜಿಎಫ್- ಜೆಡಿಎಸ್ ನಾಯಕರಾಗಿದ್ದ ಮಾಜಿ ಶಾಸಕ ಭಕ್ತವತ್ಸಲಂರ ನಿಧನ ನಂತರ ಜೆಡಿಎಸ್‌ಗೆ ಕ್ಷೇತ್ರ ಖಾಲಿಯಾಗೇ ಇತ್ತು. ಈ ಜಾಗವನ್ನು ಕೆಲವಾರು ತಿಂಗಳುಗಳಿಂದ ತುಂಬುವ ಪ್ರಯತ್ನದಲ್ಲಿರುವ ರಮೇಶ್‌ಬಾಬು ವರಿಷ್ಠರಲ್ಲಿ ನಂಬಿಕೆ ಹುಟ್ಟಿಸಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದಾರೆ. ಪಂಚರತ್ನ ಯಾತ್ರೆಯನ್ನು ಡಿ.7 ರಂದು ನಡೆಸುವ ಮೂಲಕ ಕುಮಾರಸ್ವಾಮಿಯವರ ವಿಶ್ವಾಸಗಳಿಸಿ ಅಭ್ಯರ್ಥಿಯಾಗಿ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!