PLACE YOUR AD HERE AT LOWEST PRICE
ಹೆಚ್ಚಿನ ಕೋವಿಡ್ ಸೋಂಕು ಹೊಂದಿರುವ ದೇಶಗಳ ವಿಮಾನಯಾನ ನಿಷೇಧ ಸೇರಿದಂತೆ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ವಿಧಿಸಲು ಭಾರತ ಇನ್ನೂ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶುಕ್ರವಾರ ಹೇಳಿದ್ದಾರೆ.
“ಯಾವುದೇ ರೀತಿಯ ಕಠಿಣ ಕ್ರಮಗಳನ್ನು ವಿಧಿಸುವಂತೆ ದೇಶದ ಪರಿಸ್ಥಿತಿ ಇಲ್ಲ” ಎಂದು ಸ್ಪಷ್ಟಪಡಿಸಿರುವ ಅವರು, “ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಜನರು ಹೆಚ್ಚು ಜಾಗೃತರಾಗಿದ್ದಾರೆ. ತಮ್ಮದೇ ಆದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದಾಗ ಭಯವನ್ನು ಉಂಟುಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದಿದ್ದಾರೆ.
ನೆರೆಯ ಚೀನಾ ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವಾಗ ಕೇಂದ್ರ ಸಚಿವರ ಹೇಳಿಕೆ ಹೊರಬಿದ್ದಿದೆ.
ದೇಶದ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ, ಆಮ್ಲಜನಕ ಪೂರೈಕೆ, ಹಾಸಿಗೆ ಲಭ್ಯತೆ, ವೆಂಟಿಲೇಟರ್‌ಗಳ ಪ್ರಮಾಣ ಮತ್ತು ಔಷಧಿಗಳ ಸಾಮರ್ಥ್ಯಗಳನ್ನು ಪರೀಕ್ಷಿಸಲು ಆರೋಗ್ಯ ಸಚಿವಾಲಯವು ಮಂಗಳವಾರ ಡ್ರಿಲ್ ನಡೆಸಲಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
“ಇದು ಯುದ್ಧದ ತಯಾರಿಯಂತೆ. ಅದಕ್ಕಾಗಿ ನಾವು ಚೆನ್ನಾಗಿ ಸಿದ್ಧರಾಗಿರಬೇಕು” ಎಂದಿದ್ದಾರೆ ಮಾಂಡವಿಯಾ. “ಪೂರ್ವ ಸಿದ್ಧತೆಯನ್ನು ಪರೀಕ್ಷಿಸಲು ಡ್ರಿಲ್ ಹಮ್ಮಿಕೊಂಡಿರುವುದು ಪರಿಣಾಮಕಾರಿ ಮಾರ್ಗವಾಗಿದೆ. ಗಮನಿಸಬೇಕಾದ ಅಂಶವೆಂದರೆ ಭಯಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ರಾಜ್ಯದಲ್ಲಿ ಮೀಸಲಾತಿ ಹೋರಾಟ ಪರ್ವ: ವಿವಿಧ ಸಮುದಾಯಗಳ ಬೇಡಿಕೆಗಳೇನು?
ಇದರ ನಡುವೆ ಕೋವಿಡ್ -19ರ ಅಲೆಯನ್ನು ತಡೆಗಟ್ಟಲು ‘ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್’ ವಿಧಾನದ ಮೇಲೆ ಕೇಂದ್ರೀಕರಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ‘ಎಎನ್‌ಐ’ ವರದಿ ಮಾಡಿದೆ.
ಜೀನೋಮ್ ಸೀಕ್ವೆನ್ಸಿಂಗ್ (ಒಂದು ನಿರ್ದಿಷ್ಟ ಜೀವಿ ಅಥವಾ ಜೀವಕೋಶದ ಪ್ರಕಾರದ ಸಂಪೂರ್ಣ ಆನುವಂಶಿಕ ರಚನೆಯನ್ನು ನಿರ್ಧರಿಸಲು ಬಳಸಲಾಗುವ ಪ್ರಯೋಗಾಲಯ ವಿಧಾನ) ಪರೀಕ್ಷೆಗಾಗಿ ಪಾಸಿಟಿವ್ ಬಂದ ಮಾದರಿಗಳನ್ನು ಕಳುಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕೋರಿದೆ. ಇದರಿಂದಾಗಿ ಹೊಸ ರೂಪಾಂತರ ತಳಿಗಳನ್ನು ಸಮಯಕ್ಕೆ ಸರಿಯಾಗಿ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
“ಮುಂಬರುವ ಹಬ್ಬಗಳಲ್ಲಿ ಮುಂಜಾಗ್ರತೆ ವಹಿಸಬೇಕು. ಕಾರ್ಯಕ್ರಮ ಆಯೋಜಕರು, ವ್ಯಾಪಾರಿ ವರ್ಗ, ಮಾರುಕಟ್ಟೆ ಸಂಘಗಳು- ಜನಸಂದಣಿಯನ್ನು ತಪ್ಪಿಸಲು ಕ್ರಮ ಜರುಗಿಸಬೇಕು. ವಿಶೇಷವಾಗಿ ಒಳಾಂಗಣ ವ್ಯವಸ್ಥೆಯಲ್ಲಿ ಮಾಸ್ಕ್‌ಗಳನ್ನು ಧರಿಸುವುದು ಅತ್ಯಗತ್ಯ” ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ : ದೆಹಲಿ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ