• Fri. Apr 26th, 2024

ಸಾಮಾನ್ಯ ಸಭೆ ಮಾಹಿತಿ ನೀಡಿಲ್ಲವೆಂದು ನಗರಸಭಾ ಸದಸ್ಯರ ಪ್ರತಿಭಟನೆ ಮಾತಿನ ಚಕಮಕಿ- ಪೋಲಿಸರ ಮಧ್ಯ ಪ್ರವೇಶ- ಸಭೆ ಜ.4ಕ್ಕೆ ಮುಂದೂಡಿಕೆ

PLACE YOUR AD HERE AT LOWEST PRICE

ಸಾಮಾನ್ಯ ಸಭೆಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕೋಲಾರ ನಗರಸಭಾ ಸದಸ್ಯರು ಪ್ರತಿಭಟನೆಗೆ ಮುಂದಾದ ಹಿನ್ನಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಘಟನೆ ಕೋಲಾರ ನಗರಸಭೆಯಲ್ಲಿ ಮಂಗಳವಾರ ನಡೆಯಿತು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆಗೆ ತಮಗೆ ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಪೌರಾಯುಕ್ತೆ ವಿರುದ್ಧ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಇದಕ್ಕೆ ಉತ್ತರ ನೀಡಿ ಸಭೆ ಮುಂದುವರೆಸಿ ಎಂದು ಆಗ್ರಹಿಸಿದರು. ಈ ವೇಳೆ ನಗರಸಭೆ ಅಧಿಕಾರಿ ನಟರಾಜ್, ನಾನು ಫೋನ್ ಮಾಡಿ ಸಭೆಯ ವಿಚಾರ ಮುಟ್ಟಿಸಿರುವುದಾಗಿ ಹೇಳಿದರು.

ಸಭೆಯ ಮಾಹಿತಿ ನೀಡಿಲ್ಲವೆಂದು ಸದಸ್ಯರ ಆಕ್ರೋಶ, ಅಧ್ಯಕ್ಷರು-ಪೌರಾಯುಕ್ತರ ಮುಂದೆ ಪ್ರತಿಭಟನೆ ಕುಳಿತರೂ ಮೌನಕ್ಕೆ ಶರಣಾಗಿದ್ದ ಪೌರಾಯುಕ್ತರು, ನಾಮಿನಿ ಸದಸ್ಯರ ಮಧ್ಯಪ್ರವೇಶ, ಕೈಕೈ ಮಿಲಾಯಿಸಿದ ಸದಸ್ಯರು, ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದ ಕೆಲವು ಸದಸ್ಯರು, ಸಭೆ ಮುಂದಿನ ದಿನಗಳಲ್ಲಿ ನಡೆಸುವುದಾಗಿ ಹೊರಟ ಅಧ್ಯಕ್ಷರು, ಜ.4ಕ್ಕೆ ಸಭೆ ಮುಂದೂಡಿಕೆ ಇವಿಷ್ಟು ಕೋಲಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಪ್ರಮುಖ ಬೆಳವಣಿಗೆಗಳು.
ಸಭೆ ಕುರಿತು ದೂರವಾಣಿ ಕರೆ ಮಾಡಿರುವ ಕುರಿತು ನಗರಸಭೆ ಸಿಬ್ಬಂದಿತಿಳಿಸಿದಾಗ ಮತ್ತಷ್ಟು ಆಕ್ರೋಶಗೊಂಡ ಸದಸ್ಯರು ಯಾರಿಗೆ ನೀವು ಕರೆ ಮಾಡಿದ್ದೀರಿ, ಎಲ್ಲ ಸದಸ್ಯರ ನಂಬರ್‍ಗಳನ್ನು ತೋರಿಸಿ ಎಂದು ಪಟ್ಟು ಹಿಡಿದು, ಕೆಲವರಿಗೆ ಮಾತ್ರ ಕರೆ ಮಾಡಿ ತಾರತಮ್ಯ ಧೋರಣೆ ಅನುಸರಿಸುತ್ತೀರಾ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಸಾರಿ ಎಂದು ಕ್ಷಮೆಯಾಚಿಸಿದರು.

ಸದಸ್ಯರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ನಗರಸಭೆ ಕಾಯಿದೆಗಳ ಪುಸ್ತಕ ಹಿಡಿದು ಮೌನಕ್ಕೆ ಜಾರಿದ ಪೌರಾಯುಕ್ತೆ ಸುಮಾ, ಯಾವುದಕ್ಕೂ ಪ್ರತಿಕ್ರಿಯೆ ನೀಡಲೇ ಇಲ್ಲ. ಪಕ್ಕದಲ್ಲೇ ಕುಳಿತಿದ್ದ ಅಧ್ಯಕ್ಷೆ ಶ್ವೇತಾ ಶಬರೀಶ್ ಮಾತನಾಡಿ, ತಪ್ಪಾಯಿತು. ಎಂದು ಹೇಳಿ ಸಭೆ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಪೌರಾಯುಕ್ತರದ್ದು, ಹೀಗೆ ಸೈಲೆಂಟ್ ಆಗಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಆ ವೇಳೆಗಾಗಲೇ ನಿಂತಿದ್ದ ಸದಸ್ಯೆ ಅಪೂರ್ವ, ಫೋನ್ ಮಾಡಿ ಸಭೆಯ ವಿಚಾರ ಮುಟ್ಟಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ ? ನಾನು ಸೇರಿದಂತೆ ಹಲವು ಸದಸ್ಯರು ಎಷ್ಟು ಹೊತ್ತಿನಿಂದ ನಿಂತಿದ್ದೀವಿ. ನಮಗೆ ಗೌರವವಿಲ್ಲವಾ ಎಂದು ಕಿಡಿಕಾರಿದರು.

ಸದಸ್ಯೆ ಲಿಖತ್ ಶಾಮಿರ್ ಮಾತನಾಡಿ, ಸಭೆಗೆ ಯಾವಾಗ ಬಂದರೂ ಕ್ಯಾನ್ಸಲ್, ಮುಂದೂಡಿಕೆ ಸಾಮಾನ್ಯವಾಗಿದೆ. ನಾವು ಕೆಲಸ ಕಾರ್ಯ ಬಿಟ್ಟು ತಮಾಷೆಗೆ ಬರುತ್ತೀವಾ? 3-4 ತಿಂಗಳಿಗೊಮ್ಮೆ ಸಭೆಯಾಗುವುದು. ಆಗಲೂ ಹೀಗೆ ಮಾಡಿದರೆ ಹೇಗೆ. ಇಷ್ಟು ಸದಸ್ಯರು ಮಾತನಾಡುತ್ತಿದ್ದರೂ ಸೈಲೆಂಟ್ ಆಗಿರುವ ಪೌರಾಯುಕ್ತರು ಮನೆಯಲ್ಲೇ ಇರಬೇಕಿತ್ತು. ಪೌರಾಯುಕ್ತರ ಕೆಲಸ ಯಾಕೆ ಬೇಕಿತ್ತು, ರಾಜೀನಾಮೆ ನೀಡಿ ಹೋಗಲಿ, ಅವರು ಬಂದಾಗಿನಿಂದಲೂ ಇದೇ ಕಥೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಸಾಮಾನ್ಯ ಸಭೆಯಲ್ಲಿ ರಾದ್ಧಾಂತಗಳಾಗುತ್ತಿದ್ದ ವೇಳೆ ಪೌರಾಯುಕ್ತರೊಂದಿಗೆ ಮಾತನಾಡಲು ನಾಮಿನಿ ಸದಸ್ಯರಾದ ಶ್ರೀಗಂಧ, ಸುರೇಶ್ ಮತ್ತಿತರರು ಮುಂದಾದರು. ಈ ವೇಳೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನಿಮಗೆ ಇಲ್ಲಿ ಮಾತನಾಡಲು ಹಕ್ಕಿಲ್ಲ. ಸಲಹೆ ನೀಡಬಹುದಷ್ಟೇ ಎಂದು ಹೇಳುತ್ತಿದ್ದಂತೆಯೇ ಮಾತಿನ ಚಕಮಕಿ ಆರಂಭಗೊಂಡು, ಕೈಕೈ ಮಿಲಾಯಿಸಿಕೊಳ್ಳುತ್ತಿದ್ದಂತೆಯೇ ಅಲ್ಲಿಯೇ ಇದ್ದ ಪೊಲೀಸರು ಇಬ್ಬರೂ ಕಡೆಯವರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಪೌರಾಯುಕ್ತೆ ಮೌನಕ್ಕೆ ಶರಣಾಗಿದ್ದ ಹಿನ್ನೆಲೆಯಲ್ಲಿ ಸಭೆಯಿಂದ ಎದ್ದ ಅಧ್ಯಕ್ಷೆ ಶ್ವೇತಾ, ನಾನೇ ಮುಂದಿನ ದಿನಗಳಲ್ಲಿ ಸಭೆ ಕರೆಯುತ್ತೇನೆ. ಈಗ ನಡೆಸಲು ಸಾಧ್ಯವಿಲ್ಲ ಎಂದು ತಮ್ಮ ಕೊಠಡಿಗೆ ನಿರ್ಗಮಿಸಿದರು.

ಕಪ್ಪು ಪಟ್ಟಿ ಧರಿಸಿ
ಸದಸ್ಯರ ಪ್ರತಿಭಟನೆ
ಇಷ್ಟಾದರೂ ಸಭೆಯ ಕುರಿತು ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಕೆಲವು ಸದಸ್ಯರು ಕಪ್ಪು ಪಟ್ಟಿ ಧರಿಸಿ ಕೆಲಕಾಲ ಪ್ರತಿಭಟನೆ ಕುಳಿತರು. ಆ ವೇಳೆಗಾಗಲೇ ಅಧ್ಯಕ್ಷರ ಕೊಠಡಿಗೆ ತೆರಳಿದ್ದ ಪೌರಾಯುಕ್ತರು ಮಾತುಕತೆ ನಡೆಸಿ ಹೊರಬಂದು, ಜ.4ಕ್ಕೆ ಸಭೆ ಮುಂದೂಡಿಕೆಯಾಗಿರುವ ಬಗ್ಗೆ ಅಧಿಕಾರಿಗಳ ಮೂಲಕ ಸಭೆಗೆ ತಿಳಿಸಿದರು. ಆಗಲೂ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

 

ಇದನ್ನೂ ಓದಿ : ಕೊರೊನಾ ಹೊಸತಳಿ ನಿಯಂತ್ರಣಕ್ಕೆ ಮೂಲ ಸೌಕರ್ಯ ಕಲ್ಪಿಸಿ – ರೈತಸಂಘ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!