PLACE YOUR AD HERE AT LOWEST PRICE
ಶ್ರೀನಿವಾಸಪುರ ತಾಲೂಕಿನ ಯಲ್ದೂರು ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘ, ವಿಜ್ಞಾನಸಂಘ, ಕ್ರೀಡಾಸಂಘಗಳ ಈ ಸಾಲಿನ ಸಮಾರೋಪ ಸಮಾರಂಭದಲ್ಲಿ ನೇತ್ರತಜ್ಞ ನಗರದ ವಿವೇಕ್ ನೇತ್ರಾಲಯದ ಡಾ.ಎಚ್.ಆರ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಯಲ್ದೂರು ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘ, ವಿಜ್ಞಾನಸಂಘ, ಕ್ರೀಡಾಸಂಘಗಳ ಈ ಸಾಲಿನ ಸಮಾರೋಪ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಯಾದ ತಮಗೆ ಶಾಲೆ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಾ, ನೇತ್ರದಾನದ ಮಹತ್ವ ಮಕ್ಕಳಿಗೆ ತಿಳಿಸಿಕೊಡಿ ಎಂದರು.
ಮಕ್ಕಳಲ್ಲಿ ಸಮಾಜಮುಖಿ ಭಾವನೆ ಬೆಳೆಸುವುದರಿಂದ ನೇತ್ರದಾನ, ರಕ್ತದಾನದಂತಹ ಮಹತ್ಕಾರ್ಯಗಳ ಅರಿವು ಮೂಡುತ್ತದೆ. ವಿಜ್ಞಾನ ಬೆಳದಂತೆ ಇಂದು ಓರ್ವ ವ್ಯಕ್ತಿ ನಾಲ್ವರಿಗೆ ನೇತ್ರದಾನ ಮಾಡಿ ಬೆಳಕು ನೀಡಬಹುದಾಗಿದೆ, ಇದನ್ನು ಅರಿತು ಪ್ರತಿ ಮಗುವಿನಲ್ಲೂ ನೇತ್ರದಾನದ ಮಹತ್ವ ತಿಳಿಸಿಕೊಡಿ ಎಂದು ಶಿಕ್ಷಕರಿಗೆ ಮನವಿ ಮಾಡಿದರು.
ಶ್ರೀನಿವಾಸಪುರ ಕ್ಷೇತ್ರಶಿಕ್ಷಣಾಧಿಕಾರಿ ವಿ.ಉಮಾದೇವಿ ಮಾತನಾಡಿ, ಗ್ರಾಮೀಣ ಶಾಲೆ ಎಂಬ ಕೀಳಿರಿಮೆ ತೊರೆದು ಸಾಧನೆಗಾಗಿ ಮುನ್ನುಗ್ಗಿ ಎಂದು ಸಲಹೆ ನೀಡಿ, ಅಬ್ದುಲ್ ಕಲಾಂ ಅವರ ಆಶಯದಂತೆ ಕನಸು ಕಾಣಿ, ಯೋಚಿಸಿ, ಕೆಲಸ ಮಾಡಿ ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಿ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಸ್ಮರಣೀಯ ಹೆಸರು ನ್ಯಾಷನಲ್ ಹೈಸ್ಕೂಲ್ ಎಂಬುದಾಗಿದೆ, ನ್ಯಾಷನಲ್ ವಿದ್ಯಾಸಂಸ್ಥೆಗಳಿಗೆ ತನ್ನದೇ ಆದ ಘನತೆ, ಗೌರವವಿದ್ದು, ಅದನ್ನು ಉಳಿಸಿಕೊಂಡು ಹೋಗುವಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಪ್ರಯತ್ನಿಸಿರುವುದು ಶ್ಲಾಘನೀಯ ಎಂದರು.
ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ, ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಿದೆ, ಶಿಕ್ಷಣವಿಲ್ಲದ ಬದುಕು ನರಕಕ್ಕೆ ಸಮಾನ, ಮಕ್ಕಳು ಕಲಿಕೆಗೆ ಒತ್ತು ನೀಡಿ, ವಿದ್ಯಾರ್ಥಿ ಜೀವನದಲ್ಲಿ ನೀವು ಪಡುವ ಕಷ್ಟ ಇಡೀ ನಿಮ್ಮ ಜೀವನವನ್ನು ಸುಖಮಯವಾಗಿಸುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ವಿಶೇಷ ಆಹ್ವಾನಿತರಾಗಿ ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಲೋಕನಾಥ್,ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಡಾ.ಜಿ.ರಾಜಾಕೃಷ್ಣಯ್ಯಶೆಟ್ಟಿ, ಎಂ.ಪಿ.ರಮೇಶ್‍ಬಾಬು, ಹೆಚ್.ಎಸ್.ಮಂಜುನಾಥ್ ಮತ್ತಿತರರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕ ಹೆಚ್.ಪಿ.ಮೋಕ್ಷಗುರುಲಿಂಗಾರಾಧ್ಯ ವಹಿಸಿದ್ದರು.
ಸುದ್ದಿ ಓದಿ, ಹಂಚಿ, ಪ್ರೋತ್ಸಾಹಿಸಿ