• Thu. Sep 19th, 2024

ಭಾರತ ಸೇವಾದಳದಿಂದ ಕಾರಾಗೃಹದಲ್ಲಿ ಮನಃಪರಿವರ್ತನ ಕಾರ್ಯಾಗಾರ ಕಾರಾಗೃಹವಾಸ ಮನಃಪರಿವರ್ತನೆಗೆ ಸದ್ಬಳಕೆಯಾಗಲಿ – ಕೆ.ಎಸ್.ಗಣೇಶ್

PLACE YOUR AD HERE AT LOWEST PRICE

ಕೋಲಾರ ಕಾರಾಗೃಹ ವಾಸವನ್ನು ಮನಃಪರಿವರ್ತನೆಗೆ ಸದ್ಬಳಕೆ ಮಾಡಿಕೊಂಡು ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳು ಮರುಕಳಿಸದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.

ಕೋಲಾರ ನಗರದ ಉಪಕಾರಾಗೃಹದಲ್ಲಿ ಭಾರತ ಸೇವಾದಳವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮನಃಪರಿವರ್ತನ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.

ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳಿಂದಾಗಿ ಕಾರಾಗೃಹವಾಸ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಆದರೆ, ಕಾರಾಗೃಹವಾಸವನ್ನು ಶಿಕ್ಷೆ ಎಂದು ಭಾವಿಸದೆ ತಮ್ಮದೇ ಮನಸ್ಸಿನೊಂದಿಗೆ ಗೆಳೆತನ ಬಯಲು ಸಿಕ್ಕ ಅಪೂರ್ವ ಅವಕಾಶ ಎಂದು ಭಾವಿಸಿ ಧ್ಯಾನ, ಯೋಗ, ಉತ್ತಮ ಪುಸ್ತಕಗಳ ಓದಿಗೆ ಅದನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದು ಸಲಹೆ ನೀಡಿದರು.

ಕಾರಾಗೃಹ ವಾಸದಲ್ಲಿ ಮನಃಪರಿವರ್ತನೆಯಾಗಿ ಹೊರ ಬರುವವರಿಗೆ ಮಹಾತ್ಮಗಾಂಽಜಿ ಆಶಯಗಳಡಿ ಸ್ಥಾಪಿತವಾಗಿರುವ ಭಾರತ ಸೇವಾದಳ ಸಂಸ್ಥೆಯಲ್ಲಿ ಸದಸ್ಯರಾಗಲು ಅವಕಾಶ ಕಲ್ಪಿಸಿ ಮುಖ್ಯವಾಹಿನಿಯಲ್ಲಿ ಸೇವಾ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡುವುದಾಗಿ ಅವರು ಘೋಷಿಸಿದರು.

ಭಾರತ ಸೇವಾದಳ ಹಿರಿಯ ಸದಸ್ಯ ಬಹಾದ್ದೂರ್ ಸಾಬ್ ಮಾತನಾಡಿ, ಶಾಂತಿ, ತಾಳ್ಮೆ ಮತ್ತು ಪ್ರೀತಿ ಮನುಷ್ಯನ ಮನಃಪರಿವರ್ತನೆಗೆ ಹೆಚ್ಚು ಸಹಕಾರಿಯಾಗಿರುವುದನ್ನು ಕಾರಾಗೃಹ ವಾಸಿಗಳು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಸೇವಾದಳ ಹಿರಿಯ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ, ಜೀವನವನ್ನು ಉತ್ತಮಪಡಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ ಎಂಟು ಅಂಶಗಳನ್ನು ಕಾರಾಗೃಹವಾಸಿಗಳಿಗೆ ಮನದಟ್ಟು ಮಾಡಿಸಿ ಉತ್ತಮ ಪುಸ್ತಕಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ಕೊಡುಗೆ ನೀಡುವುದಾಗಿ ಪ್ರಕಟಿಸಿದರು.

ಭಾರತ ಸೇವಾದಳ ಕೋಲಾರ ತಾಲೂಕು ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಹತ್ತು ವರ್ಷ ಕಾರಾಗೃಹ ಶಿಕ್ಷಕರಾಗಿ ಕೆಲಸಮಾಡಿರುವ ತಮಗೆ ಇಲ್ಲಿನ ವಾಸಿಗಳ ಮನಃಸ್ಥಿತಿ ಚೆನ್ನಾಗಿ ಅರ್ಥವಾಗುತ್ತದೆ, ಸಣ್ಣ ಪುಟ್ಟ ಕಾರಣಗಳಿಗೆ ಕೋಪಗೊಳ್ಳದೆ ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ತಪ್ಪುಗಳಾಗುವುದಿಲ್ಲ ಎಂದರು.

ಕಾರಾಗೃಹದಲ್ಲಿ ಐದು ಸಾವಿರ ರೂಗಳಿಗಿಂತಲೂ ಕಡಿಮೆ ಮೊತ್ತ ಪಾವತಿಸಲಾಗದೆ ಕಾರಾಗೃಹವಾಸ ಅನುಭವಿಸುತ್ತಿರುವವರಿಗೆ ಸೇವಾದಳ ಕಡೆಯಿಂದ ಮೊತ್ತ ಪಾವತಿಸಿ ಬಿಡುಗಡೆ ಭಾಗ್ಯ ಕಲ್ಪಿಸಲಾಗುವುದು, ಈ ಕುರಿತು ಜೈಲರ್ ಮೂಲಕ ಮಾಹಿತಿ ನೀಡುವಂತೆ ಕೋರಿದರು.

ಸೇವಾದಳ ತಾಲೂಕು ಸಮಿತಿ ಸಹ ಕಾರ್ಯದರ್ಶಿ ಕೆ.ಬಿ.ರೆಡ್ಡೆಪ್ಪ್ಪ ಕಾರಾಗೃಹ ವಾಸಿಗಳು ಮತ್ತು ಅಧಿಕಾರಿಗಳಿಗೆ ಸೇವಾದಳವತಿಯಿಂದ ಸಿಹಿ ವಿತರಿಸಲು ವ್ಯವಸ್ಥೆ ಮಾಡಿದ್ದರು.

ಉಪ ಕಾರಾಗೃಹ ಜೈಲರ್ ಪರಮೇಶ್ವರ ನಾಯ್ಕ್, ಉಪ ಜೈಲರ್ ಎನ್.ಡಿ.ದಾಸರ್, ಮುಖ್ಯ ವೀಕ್ಷಕ ಮಹಾದೇವ್, ಸೇವಾದಳ ಬಂಧುಗಳಾದ ಶ್ರೀನಿವಾಸಮೂರ್ತಿ, ರಾಜೇಶ್‌ಸಿಂಗ್ ಉಪಸ್ಥಿತರಿದ್ದರು.

ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:

Leave a Reply

Your email address will not be published. Required fields are marked *

You missed

error: Content is protected !!