ಕೆಜಿಎಫ್ ತಾಲೂಕಿನ ಮಾದಿಗರ ಅಭಿವೃದ್ಧಿಗೆ ನಮ್ಮ ಸಂಘವು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಬಡವರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸುವ ಜತೆಗೆ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆಂದು ಕರ್ನಾಟಕ ರಾಜ್ಯ ಮಾದಿಗ ಮಾದರ್ ಅಭಿವೃದ್ಧಿ ಸಂಘದ ಸಂಸ್ಥಾಪಕ ಹಾರೋಹಳ್ಳಿ ವಿ.ರಮೇಶ್ ಹೇಳಿದರು.
ಬೇತಮಂಗಲದ ಅಥಿತಿ ಗೃಹದಲ್ಲಿ ರಾಜ್ಯ ಮಾದಿಗ ಮಾದರ್ ಅಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ
ಪಾಲ್ಗೋಂಡು ಅವರು ಮಾತನಾಡಿ ಸಂಘವು 4 ವರ್ಷಗಳ ಹಿಂದೆ ಪ್ರಾರಂಭಗೊಂಡಿದ್ದು, ಕೊರೊನಾ ವೇಳೆಯಲ್ಲಿ ಬಡವರಿಗೆ ಆಹಾರ ಕಿಟ್ ಸೇರಿದಂತೆ ಹಲವು ಸೌಲಭ್ಯ ಒದಗಿಸಿದ್ದೇವೆ ಎಂದರು.
ಕೆಜಿಎಫ್ ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲಿ ಸಂಘವನ್ನು ಕಟ್ಟುತ್ತೇವೆ. ಜನಪರ, ದೀನ ದಲಿತರ ಪರ ಕಾಳಜಿ ಇರುವ ಅರ್ಹ ಬಡವರಿಗೆ ಸೌಲಭ್ಯ ಕಲ್ಪಿಸುವ ವ್ಯಕ್ತಿಗಳನ್ನು ಗುರುತಿಸಿ ಹೋಬಳಿ, ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತೇವೆ ಎಂದರು.
ಕೆಜಿಎಫ್ ತಾಲೂಕು ಅಧ್ಯಕ್ಷರಾಗಿ ಕಸಿರೆಡ್ಡಿಗಾಂಡ್ಲಹಳ್ಳಿ ವೆಂಕಟಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಎಲ್ಲಾ ಪದಾಧಿಕಾರಿಗಳನ್ನು ಅಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದರು.
ಸಾಲ ಪಡೆಯಬೇಕಾದರೆ 5 ಸಾವಿರ ಠೇವಣಿ ಕಟ್ಟಬೇಕಿದೆ. ತೀರ ಬಡವರಾದ ಮಾದಿಗರನ್ನು ಸೌಜನ್ಯಕ್ಕಾದರೂ ಡಿಸಿಸಿ
ಬ್ಯಾಂಕ್ ಅಧ್ಯಕ್ಷರು ಸಭೆ ಕರೆದು ಮಾತಾಡುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮಾದರ್ ಸಂಘದ ಮುಖಂಡರಾದ ನಾರಾಯಣಸ್ವಾಮಿ, ಸೀನಪ್ಪ, ರಾಮು, ಸುಭ್ರಮಣಿ, ಹಾಗೂ ಅನೇಕ ಯುವಕರು ಇತರರು ಉಪಸ್ಥಿತರಿದ್ದರು.