ಬಂಗಾರಪೇಟೆ: ಸರ್ಕಾರ ಮಂಡಿಸಲಿರುವ 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದಲ್ಲಿನ ದಲಿತರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಂಡು ಮಾತನಾಡಿದ ಸೂಲಿಕುಂಟೆ ಆನಂದ್, ರಾಜ್ಯದಲ್ಲಿ ಶೇಕಡ ೧.೫ಕೋಟಿ ಜನತೆ ದಲಿತರು ವಾಸಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ದಲಿತರಿಗೆ ಸಮರ್ಪಕವಾಗಿ ಯಾವುದೇ ಸರ್ಕಾರಿ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ.
ದಲಿತರಿಗಾಗಿ ಮೀಸಲಿರುವ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಲ್ಲಿ ಸೌಲಭ್ಯಗಳು ಮರೀಚಿಕೆಯಾಗಿರುವುದು ತುಂಬಾ ನೋವಿನ ಸಂಗತಿ. ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಡೆಹಿಡಿದಿರುವುದು.
ಜೊತೆಗೆ ವಿಳಂಭ ಮಾಡುತ್ತಿರುವುದು ನಾಚಿಕೆಗೇಡಿತನವಾಗಿದ್ದು, ಸರ್ಕಾರ ಬಡ ವಿದ್ಯಾರ್ಥಿಗಳ ಬದುಕಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಿಂದ ದಲಿತರಿಗೆ ಯಾವುದೇ ರೀತಿಯಲ್ಲೂ ಅನುಕೂಲವಿಲ್ಲ. ಎಂದು ಆರೋಪಿಸಿದರು.
ಲೀಡ್ ಬ್ಯಾಂಕ್‌ನಲ್ಲಿ ಸಾಲ, ಹಾಗೂ ಸರ್ಕಾರದ ಸಹಾಯಧನ ನೀಡಲು ದಲಿತರನ್ನು ಕಛೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ದಲಿತ ಮಹಿಳೆಯರಿಗೆ ರಕ್ಷಣೆ ಇಲ್ಲದಂತ್ತಾಗಿದೆ.
ಆದ್ದರಿಂದ ೨೦೨೩-೨೪ನೇ ಬಜೆಟ್‌ನಲ್ಲಿ ರಾಜ್ಯದ ದಲಿತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ದೇವಗಾನಹಳ್ಳಿ ನಾಗೇಶ್, ಅಯ್ಯಪ್ಪ, ಕರ್ಣ, ಮಂಜುನಾಥ್, ಕೋದಂಡ, ಭೀಮ, ಮೂಗನಹಳ್ಳಿ ಸುಬ್ರಮಣಿ, ಪ್ರವೀಣ್ ಕುಮಾರ್, ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.