• Fri. May 3rd, 2024

PLACE YOUR AD HERE AT LOWEST PRICE

ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟಾಂಡರ್ಡ್ ಮಾರ್ಗಸೂಚಿಯಂತೆ ೫೦೦ ಹಾಸಿಗೆಗಳುಳ್ಳ ಕೋಲಾರ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ
ಒಟ್ಟು ಇರಬೇಕಾದ ಸಿಬ್ಬಂದಿ ಸಂಖ್ಯೆ ೬೩೪ ಆದರೆ ಅಲ್ಲಿ ಕೇವಲ ೧೧೮ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಡ ರೋಗಿಗಳಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆರೋಪಿಸಿದರು.

ವಿಧಾನಪರಿಷತ್‌ನಲ್ಲಿ ಜಿಲ್ಲಾಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆಯುವ ಸೂಚನೆಯಡಿ ಮಾತನಾಡಿದ ಅವರು, ಪ್ರಸ್ತುತ ೨೬೫ ಹಾಸಿಗೆಗಳಿಗೆ ಮಾತ್ರ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ೨೮೩ ಇದರಲ್ಲಿ ಎಲ್ಲಾ ವರ್ಗದ ಸಿಬ್ಬಂದಿಗಳನ್ನು ಸೇರಿ ಕೇವಲ ೧೧೮ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ೭೫ ವರ್ಷ ಇತಿಹಾಸವುಳ್ಳ ಇಷ್ಟು ದೊಡ್ಡ ಜಿಲ್ಲಾ ಆಸ್ಪತ್ರೆಗೆ ಕೇವಲ ೧೧೮ ಸಿಬ್ಬಂದಿಗಳಿಂದ ನಿರ್ವಹಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿ ಶೀಘ್ರ ಹುದ್ದೆ ಮಂಜೂರು ಮಾಡಲು ಒತ್ತಾಯಿಸಿದರು.

ಕಡುಬಡವ ಹಾಗೂ ಕೂಲಿ ಕಾರ್ಮಿಕರು ತಮ್ಮ ಆರೋಗ್ಯ ತಪಾಸಣೆಗಾಗಿ ಇದೇ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ ಹಾಗೂ ಕೋಲಾರ ನಗರ, ಪಕ್ಕದ ಮೂರು ರಾಜ್ಯಗಳಿಗೆ ಗಡಿ ಜಿಲ್ಲೆಯಾಗಿದ್ದು. ಇಲ್ಲಿ ಪ್ರತಿ ನಿತ್ಯ ಸುಮಾರು ೧೩೦೦ ರಿಂದ ೧೫೦೦ ಹೊರ ರೋಗಿಗಳು ಮತ್ತು ೩೦೦ ರಿಂದ ೪೫೦ ಒಳರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಎಂದು ತಿಳಿಸಿದರು.

ಈ ಆಸ್ಪತ್ರೆಯು ೫೦೦ ಹಾಸಿಗೆಗೆ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ೨೬೫ ಹಾಸಿಗೆಗಳ ಸಾಮರ್ಥ್ಯಕ್ಕೆ ಮಾತ್ರ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕೋವಿಡ್ -೧೯ ಸಾಂಕ್ರಾಮಿಕ ರೋಗದ ನಿರ್ವಹಣೆಗೆ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಐ.ಸಿ.ಯು ಹಾಗೂ ಆಮ್ಲಜನಕ ಬೆಂಬಲಿತ ಹಾಸಿಗೆಗಳ ನಿರ್ವಹಣೆಗಾಗಿ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳಾದ ಶುಶ್ರೂಷಾಕಾಧಿರಿಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿಗಳು ಅವಶ್ಯಕತೆ ಇದ್ದು ಶೀಘ್ರ ನೇಮಕಾತಿಗೆ ಮನವಿ ಮಾಡಿದರು.

ಆರೋಗ್ಯ ಸಚಿವರ ಅನುಪಸ್ಥಿತಿಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಶ್ರೀನಿವಾಸ ಪೂಜಾರಿರವರು ಉತ್ತರ ನೀಡಿರುವಂತೆ ೪೦೦ ಹಾಸಿಗೆಗಳ ಆಸ್ಪತ್ರೆ ಮತ್ತು ೧೦೦ ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಎಲ್ಲಾ ವರ್ಗದ ಸಿಬ್ಬಂದಿಗಳನ್ನು ಒಳಗೊಂಡಂತೆ ಮಂಜೂರಾತಿಯಾಗಿರುವ ಹುದ್ದೆಗಳ ಸಂಖ್ಯೆ ೨೮೬ ಇದರಲ್ಲಿ ಕಾರ್ಯನಿರತರಾಗಿರುವ ಸಿಬ್ಬಂದಿಗಳ ಸಂಖ್ಯೆ ೩೨೦ ಹಾಗೂ ಪ್ರಸ್ತುತ ೧೬೭ ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿ, ಒಂದು ವರ್ಷ ಕಡ್ಡಾಯ ಸರ್ಕಾರಿ ಸೇವೆಯಡಿ ೦೧ ಎಂಬಿಬಿಎಸ್ ವೈದ್ಯರು ಮತ್ತು ೦೨ ಟೆಲಿಮೆಡಿಸನ್ ವೈದ್ಯರು, ಇ.ಎನ್.ಟಿ.೦೧, ಕೀಲು ಮತ್ತು ಮೂಳೆ ತಜ್ಞರು ೦೧, ಮಕ್ಕಳ ತಜ್ಞರು -೦೧, ಪೆಥಾಲಜಿ ತಜ್ಞರು-೦೧, ಒಟ್ಟು ೦೭ ವೈದರು ಮತ್ತು ತಜ್ಚರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ೧೦೦ ಹಾಸಿಗೆಗಳ ಸಾಮರ್ಥ್ಯಕ್ಕೆ ಸರ್ಕಾರದಲ್ಲಿ ಹುದ್ದೆಗಳು ಮಂಜೂರಾಗಿಲ್ಲದ ಕಾರಣ ನಿರ್ದೇಶನಾಲಯದ ಆದೇಶದಂತೆ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು -೦೪, ಕ್ಷ-ಕಿರಣ ತಂತ್ರಜ್ಞರು-೦೧ ಶಸ್ತ್ರ ಚಿಕಿತ್ಸೆ ಕೋಣೆ ತಂತ್ರಜ್ಞರು-೦೧, ಗಣಕ ಯಂತ್ರ ಸಹಾಯಕರು-೦೨ , ಗ್ರೂಪ್ ಡಿ ೨೫ ಒಟ್ಟು ೩೩ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಟೆಂಡರ್ ಕರೆದು ಸಿಬ್ಬಂದಿ ಪ್ರಯೋಜಿ ಕೊಳ್ಳಲಾಗಿರುವುದಾಗಿ ಸಚಿವರು ಉತ್ತರ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು, ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಿಮ್ಮ ಅಧಿಕಾರಿಗಳ ವೈಫಲ್ಯ ಎತ್ತು ಕಾಣುತ್ತದೆ. ಇದು ೯೫ ವರ್ಷದ ಹಳೆಯ ಆಸ್ಪತ್ರೆ ಸರ್ಕಾರದ ನಿರ್ಲಕ್ಷ್ಯದಿಂದ ಸಮಸ್ಯೆಯಾಗಿದೆ ಎಂದು ಕಿಡಿಕಾರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ವತಿಯಿಂದ ಆಸ್ಪತ್ರೆಗೆ ಭೇಟಿ ನೀಡಿದಂತ ಸಮಯದಲ್ಲಿ ಅಲ್ಲಿನ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ತೊಡಿಕೊಂಡಿದ್ದಾರೆ, ಹೆರಿಗೆ ಆದ ಮರು ದಿನವೇ ಮನೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ನಾನು ಈಗಾಗಲೇ ನನ್ನ ಅನುದಾನದಲ್ಲಿ ರೂ. ೯೫ ಲಕ್ಷವನ್ನು ನೀಡಿದ್ದೇನೆ, ಆದರೆ ಇದುವರೆಗೂ ಯಾವುದೇ ಕಾಮಗಾರಿಯು ಆಸ್ಪತ್ರೆಯಲ್ಲಿ ಇದುವರೆಗೂ ಪ್ರಾರಂಭವಾಗಿಲ್ಲ ಎಂಬುದಾಗಿ ತಿಳಿಸಿ, ಇದು ದೋಷಪೊರಿತ ಉತ್ತರವನ್ನು ಸದನಕ್ಕೆ ನೀಡಿದ್ದೀರಿ ಎಂದು ಆರೋಪಿಸಿದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!