• Sun. Sep 8th, 2024

ಬಿಕೆಎಸ್ ಸ್ಮಾರಕ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ಪರೀಕ್ಷಾ ಗೊಂದಲ ಪರಿಹರಿಸಿಕೊಳ್ಳಿ-ಪ್ರಶ್ನೆ ಪ್ರಜ್ಞೆಯಾಗಲಿ-ಬಿಇಒ ಕನ್ನಯ್ಯ ಕರೆ

PLACE YOUR AD HERE AT LOWEST PRICE

ಪರೀಕ್ಷಾ ಜ್ವರ ಆರಂಭವಾಗಿದೆ, ಆತಂಕ ಬಿಡಿ, ನಿಮ್ಮನ್ನು ಕಾಡುತ್ತಿರುವ ಗೊಂದಲಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಪರಿಹಾರ ಕಂಡುಕೊಳ್ಳಿ, ಪ್ರಶ್ನೆ ಪ್ರಜ್ಞೆಯಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಕರೆ ನೀಡಿದರು.

ಕೋಲಾರ ತಾಲೂಕಿನ ಬೆಳ್ಳೂರು ರಮಾಮಣಿ ಸುಂದರರಾಜ ಅಯ್ಯಂಗಾರ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಬಿಕೆಎಸ್ ಯೋಗ ಮಂದಿರದಲ್ಲಿ ನರಸಾಪುರ ಪರೀಕ್ಷಾಕೇಂದ್ರವ್ಯಾಪ್ತಿಯ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಎಲ್ಲಾ ಆರು ಪಠ್ಯ ವಿಷಯಗಳ ಸಂಪನ್ಮೂಲ ವ್ಯಕ್ತಿಗಳೂ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ, ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಲಿದ್ದಾರೆ, ಇಲ್ಲಿಂದ ಹೋಗುವಾಗ ಪರೀಕ್ಷಾ ಭಯ ಮರೆತು ಸಂತೋಷದಿಂದ ಹೋಗಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಸುಖನಿದ್ದೆ ಕಡಿಮೆ ಮಾಡಿ, ಬೆಳಗ್ಗೆ ೫ ಗಂಟೆಗೆ ಏಳುವ ಅಭ್ಯಾಸ ಬೆಳೆಸಿಕೊಳ್ಳಿ, ಕಷ್ಟವಾದ ವಿಷಯಗಳನ್ನು ಆಗ ಓದಿ, ಗುರಿ ಮುಟ್ಟುವ ಛಲದೊಂದಿಗೆ ಶ್ರದ್ಧೆಯಿಂದ ಓದಿ ಎಂದರು.
ಅಂಕಗಳ ಜತೆಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದ ಅವರು, ಜೀವನದ ಪರೀಕ್ಷೆ ಪಾಸಾಗುವ ಮೌಲ್ಯಗಳನ್ನು ಕಲಿಯುವ ಅಗತ್ಯವಿದೆ, ಇರುವ ೪೫ ದಿನ ಸದ್ಬಳಕೆ ಮಾಡಿಕೊಳ್ಳಿ, ೨೫ ವರ್ಷ ನೀವು ಪಡುವ ಕಲಿಕಾ ಪರಿಶ್ರಮ ನಿಮ್ಮನ್ನು ೭೫ ವರ್ಷ ಸುಖವಾಗಿರಿಸುತ್ತದೆ ಎಂದರು.

ಹಿಂದೆ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳಾಗಿದ್ದ ನಾಗೇಂದ್ರಪ್ರಸಾದ್ ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ, ಕಲಿಕಾ ಹಾಳೆಗಳನ್ನು ಮೊದಲೇ ಸಿದ್ದಪಡಿಸಿ ಕೊಟ್ಟು ಹೋಗಿದ್ದಾರೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ, ದಿನಕ್ಕೆ ಒಂದು ವಿಷಯದಲ್ಲಿ೨ ಅಂಕಗಳಂತೆ ಓದಿದರೂ ನೀವು ಶೇ.೯೦ರ ಸಾಧನೆ ಮಾಡಬಹುದು, ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತನ್ನಿ ಎಂದರು.

ಸಂವಾದದಲ್ಲಿ ಬೆಳ್ಳೂರು ರಮಾಮಣಿ ಸುಂದರರಾಜ ಅಯ್ಯಂಗಾರ್ ಪ್ರೌಢಶಾಲೆ, ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ, ಕೆಂದಟ್ಟಿಯ ಬಸವೇಶ್ವರ ಶಾಲೆ, ನರಸಾಪುರದ ಕೆಪಿಎಸ್ ಶಾಲೆ, ವ್ಯಾಲಿ ಪಬ್ಲಿಕ್ ಶಾಲೆ, ತ್ಯಾವನಹಳ್ಳಿ, ಬೆಳಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಗಳು, ಸೂರ್ಯ ಇಂಟರ್‌ನ್ಯಾಷನಲ್ ಶಾಲೆ ಮಕ್ಕಳು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಬಿಕೆಎಸ್ ಟ್ರಸ್ಟ್‌ನ ಅಕಾಡೆಮಿಕ್ ಅಡ್ವೈಸರ್ ಅನಂತ ಕೃಷ್ಣನ್, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯದರ್ಶಿ ಬಸವೇಶ್ವರ ಶಾಲೆಯ ಜಗದೀಶ್, ಸಂಸ್ಥೆಯ ಪ್ರಾಂಶುಪಾಲೆ ಛಾಯಾದೇವಿ, ಮುಖ್ಯಶಿಕ್ಷಕಿ ಗಿರಿಜಾ, ಪ್ರಭಾರ ಕ್ಷೇತ್ರ ಸಮನ್ವಯಾಕಾರಿ ಪ್ರವೀಣ್, ಎಸ್ಸೆಸ್ಸೆಲ್ಸಿ ತಾಲ್ಲೂಕು ನೋಡಲ್ ಅಕಾರಿ ಮುನಿರತ್ನಯ್ಯಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಬಿ.ಎ.ಕವಿತಾ, ಪ್ರವೀಣ್, ಮುಖ್ಯಶಿಕ್ಷಕ ಗೋಪಿನಾಥ್, ಶಿಕ್ಷಕರಾದ ಲಕ್ಷ್ಮೀಕಾಂತ್, ರವಿಕುಮಾರ್, ಮಂಜುಳಾ, ರಾಜಣ್ಣ, ನಂದೀಶ್,ಶಿಕ್ಷಕರಾದ ಸುಗುಣಾ, ಭವಾನಿ, ಫರೀದಾ, ಶಿವಪ್ರಸಾದ್ ಮತ್ತಿತರರಿದ್ದರು.

ಸುದ್ದಿ ಓದಿ ಹಂಚಿ:

 

Leave a Reply

Your email address will not be published. Required fields are marked *

You missed

error: Content is protected !!