• Thu. May 2nd, 2024

ಹಾಲು ಉತ್ಪಾದಕರ ಮತ್ತು ಸಂಘಗಳ ಸಿಬ್ಬಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೋಮುಲ್ ಅಧ್ಯಕ್ಷರಿಗೆ ಮನವಿ ಸಲ್ಲಿಕೆ

PLACE YOUR AD HERE AT LOWEST PRICE

ಹಾಲು ಉತ್ಪಾದಕರ ಮತ್ತು ಸಂಘಗಳ ಸಿಬ್ಬಂದಿಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ಮನವಿ ಸಲ್ಲಿಸಲಾಯಿತು. 

ಕೋಚಿಮುಲ್ ಆಡಳಿತ ಮಂಡಳಿ ಸಭೆಗೂ ಮುನ್ನ ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಡೇರಿಗಳ ಹಾವಳಿ ಹೆಚ್ಚಾಗಿದ್ದು, ಉತ್ಪಾದಕರಿಗೆ ಯಾವುದೇ ನಿರ್ಬಂಧ ಹೇರದೆ ಪ್ರತಿ ಲೀಟರಿಗೆ ೪೦ ರೂಗಳನ್ನು ನೀಡುತ್ತಿರುವುದರಿಂದ ನಮ್ಮ ಸಂಘಗಳಲ್ಲಿ ಬರುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹುತೇಕ ಎಲ್ಲಾ ಭಾಗಗಳಲ್ಲಿ ಬಿ.ಎಂ.ಸಿ ಕೇಂದ್ರಗಳನ್ನು ಅಳವಡಿಸಿರುವುದರಿಂದಾಗಿ ಸಂಘಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಾಲು ಉತ್ಪಾದಕರಿಗೆ ಜಿಡ್ಡಿನಾಂಶದ ಆಧಾರದ ಮೇಲೆ ಧರ ನೀಡಲಾಗುತ್ತಿದ್ದು, ಕನಿಷ್ಠ ೪.೦ ರಿಂದ ೪.೨ ರ ಜಿಡ್ಡಿನಾಂಶದವರೆಗೆ ಧರ ನೀಡಲಾಗುತ್ತಿದೆ. ಆದರೆ ಬಿ.ಎಂ.ಸಿ ಕೇಂದ್ರಗಳಲ್ಲಿ ತಿಂಗಳಲ್ಲಿ ಸುಮಾರು ೪೦ ಸರತಿಗಳಲ್ಲಿ ೧.೧ ಜಿಡ್ಡಿನಾಂಶ ಮತ್ತು ೮.೫ ಎಸ್.ಎನ್.ಎಫ್ ನೀಡಿ ಉಳಿದ ೨೦ ಸರತಿಗಳಲ್ಲಿ ೩.೮ ಜಿಡ್ಡು ಮತ್ತು ೮.೩ ಎಸ್.ಎನ್.ಎಫ್. ಮತ್ತು ೩.೬ ಜಿಡ್ಡಿನಾಂಶ ೮.೫ ಎಸ್.ಎನ್.ಎಫ್. ನೀಡುತ್ತಿರುವುದರಿಂದ ಸಂಘಗಳಲ್ಲಿ ತುಂಬಾ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.

ನಮ್ಮ ಒಕ್ಕೂಟ ವ್ಯಾಪ್ತಿಯ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಲ್ಲಿ ಸುಮಾರು ೫೫ ರಿಂದ ೬೦ ಸಿಬ್ಬಂದಿಯು ೬೨ ವರ್ಷ ವಯಸ್ಸನ್ನು ಮೀರಿದ್ದು, ಇವರಿಗೆ ಒಕ್ಕೂಟದಿಂದ ನೀಡುವ ನಿವೃತ್ತಿ ಮೊತ್ತವನ್ನು ಈ ಕೂಡಲೇ ನೀಡಬೇಕು. ೬೦ ವರ್ಷ ವಯಸ್ಸು ಮುಗಿದಿರುವ ಸಿಬ್ಬಂದಿಗೂ ಸಹ ನಿವೃತ್ತಿ ವೇತನವನ್ನು ನೀಡದೆ ವಿಳಂಬ ಮಾಡಲಾಗುತ್ತಿದ್ದು, ನಿವೃತ್ತಿ ಹೊಂದಿದ ಸಿಬ್ಬಂದಿಗೆ ಕನಿಷ್ಟ ೧ ತಿಂಗಳೊಳಗೆ ಸಿಬ್ಬಂದಿ ಖಾತೆಗೆ ವರ್ಗಾವಣೆ ಮಾಡಬೇಕು. ಇತರೆ ಒಕ್ಕೂಟಗಳಲ್ಲಿ ನೀಡುವಂತೆಯೇ ೫ ಲಕ್ಷ ರೂಗಳ ನಿವೃತ್ತಿ ಮೊತ್ತವನ್ನು ನಿಗಧಿಗೊಳಿಸಬೇಕು.

ಬಿ.ಎಂ.ಸಿ. ಕೇಂದ್ರಗಳ ನಿರ್ವಹಣೆಗೆ ಲೀಟರ್‌ಗೆ ೩೨ ಪೈಸೆಗಳನ್ನು ನೀಡುತ್ತಿದ್ದು, ಬಿ.ಎಂ.ಸಿ ನಿರ್ವಹಣೆಗೆ ಸಂಘದ ಹಣದಲ್ಲಿ ವೆಚ್ಚ ಭರಿಸುವಂತಾಗಿದೆ. ಅಗತ್ಯ ಕ್ರಮಕೈಗೊಂಡು ಬಿ.ಎಂ.ಸಿ ನಿರ್ವಹಣಾ ವೆಚ್ಚವನ್ನು ಕನಿಷ್ಠ ೫೦ ಪೈಸೆಗಳಿಗೆ ಏರಿಕೆ ಮಾಡಬೇಕೆಂದು ಆಗ್ರಹಿಸಿದರು. ಪಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಖ್ಯ ಕಾರ್ಯ ನಿರ್ವಾಹಕರಿಗೆ ಪಶು ಆಹಾರ ಮಾರಾಟ ಮಾಡುವ ಪರವಾನಗಿಯನ್ನು ಪಡೆಯಲು ಒಕ್ಕೂಟದ ಅಧಿಕಾರಿಗಳು ಒತ್ತಡ ಏರುತ್ತಿದ್ದು, ಈ ಆದೇಶವನ್ನು ಈ ಕೂಡಲೇ ವಜಾಗೊಳಿಸಬೇಕು. ಎಂಪಿಸಿಎಸ್‌ಗಳಲ್ಲಿ ಸ್ಥಳೀಯ ಹಾಲು ಮಾರಾಟ ಲೇವಿ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಹಲವಾರು ಬಾರಿ ಮನವಿ ನೀಡಿದ್ದರೂ ಬಹುತೇಕ ಬೇಡಿಕೆಗಳ ಈಡೇರಿಕೆಗೆ ಮುಂದಾಗದಿರುವುದು ಖಂಡನೀಯವಾಗಿದ್ದು, ಹೀಗೆಯೇ ನಿರ್ಲಕ್ಷ್ಯ ಮಾಡಿಕೊಂಡು ಹೋಗುತ್ತಿದ್ದರೆ ಕೋಚಿಮುಲ್‌ಗೆ ಮುತ್ತಿಗೆ ಹಾಕಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ನಿಯೋಗದಲ್ಲಿ ಸಂಘದ ಪದಾಧಿಕಾರಿಗಳಾದ ಚಿನ್ನಹಳ್ಳಿ ಗೋಪಾಲ್, ಮಿಂಡಹಳ್ಳಿ ಮುನಿರಾಜು, ಬಗಲಹಳ್ಳಿ ನಾಗೇಶಗೌಡ, ವಕ್ಕಲೇರಿ ನಾಗರಾಜ್, ಎಸ್.ಎಂ.ಗೋಪಾಲ್, ಮದನಹಳ್ಳಿ ರಮೇಶ್, ತೊಂಡಾಲ ಮಂಜುನಾಥ್, ತಿಮ್ಮೇಗೌಡ, ಗಂಗಾಪುರ ಬಾಬು, ಶ್ರೀರಂಗಪುರ ರವಿ ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!