• Thu. May 2nd, 2024

ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಕಾರ್ಯದ ಕುರಿತು ತರಬೇತಿ ದೇಶಸೇವೆ ಎಂದು ಬದ್ದತೆಯಿಂದ ಕಾರ್ಯನಿರ್ವಹಿಸಿ-ಹರ್ಷವರ್ಧನ್

PLACE YOUR AD HERE AT LOWEST PRICE

ನೀವು ಮಾಡುವ ಎರಡು ದಿನದ ಚುನಾವಣಾ ಕೆಲಸವನ್ನು ದೇಶ ಸೇವೆ ಎಂದು ಭಾವಿಸಿ ಬದ್ದತೆಯಿಂದ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಎಂದು ಮತದಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಪ್ರಿಸೈಡಿಂಗ್ ಅಧಿಕಾರಿಗಳಿಗೆ ತಹಸೀಲ್ದಾರ್ ಹೆಚ್.ಸಿ.ಹರ್ಷವರ್ಧನ್ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಅನುಮಾನಕ್ಕೆ ಅವಕಾಶವಿಲ್ಲದಂತೆ ‘ಮತದಾನ ಖಾತರಿ ಯಂತ್ರ’ವನ್ನು ಬಳಸಲಾಗುತ್ತಿದ್ದು, ಮತದಾನದ ಕುರಿತು ಇರುವ ಅನುಮಾನಗಳನ್ನು ತರಬೇತಿಯಲ್ಲಿ ಪರಿಹರಿಸಿಕೊಳ್ಳಿ, ಸುಗಮ,ಗೊಂದಲರಹಿತ ಮತದಾನ ನಡೆಯುವಂತೆ ಅರಿವು ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಶಾಂತಿಯುತ,ನಿಷ್ಪಕ್ಷಪಾತ ಮತದಾನ ಎಲ್ಲರ ಆಶಯವಾಗಿದೆ, ಈ ಆಶಯವನ್ನು ಈಡೇರಿಸುವಲ್ಲಿ ಮತದಾನ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿಗಳ ಹೊಣೆಗಾರಿಕೆ ಹೆಚ್ಚಿದೆ ಎಂದ ಅವರು, ಯಾವುದೇ ಪಕ್ಷ,ವ್ಯಕ್ತಿಯ ಪರ ಕೆಲಸ ಮಾಡದಿರಿ, ನಿಮಗೆ ಚುನಾವಣಾ ಆಯೋಗದ ಸೂಚನೆಯಂತೆ ನೀಡಿರುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದರು.

ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಪನ್ಯಾಸಕ ಗೋಪಿಕೃಷ್ಣನ್, ಮೇ.೯ ರಂದು ಮತಗಟ್ಟೆಗಳಿಗೆ ತೆರಳುವ ಮುನ್ನಾ ನೀವು ಮಷ್ಟ್ರಿಂಗ್ ಕೇಂದ್ರದಲ್ಲಿ ನಿಮ್ಮೊಂದಿಗೆ ಕಾರ್ಯ ನಿರ್ವಹಿಸಲು ನೇಮಕಗೊಂಡಿರುವ ಅಧಿಕಾರಿಗಳನ್ನು ಭೇಟಿ ಮಾಡಿ ಎಂದರು.

ನಂತರ ಎಲ್ಲರ ಸಹಕಾರ ಪಡೆದು ಮಷ್ಟ್ರಿಂಗ್ ಕೇಂದ್ರದಲ್ಲಿ ಮತದಾನ ಕೇಂದ್ರಕ್ಕೆ ಹೋಗಲು ಅಗತ್ಯವಾದ ವಸ್ತುಗಳನ್ನು ಪಡೆದುಕೊಂಡು ಖಾತರಿಪಡಿಸಿಕೊಳ್ಳಿ, ಈ ಬಾರಿ ಹೆಚ್ಚುವರಿಯಾಗಿ ಮತದಾನ ಖಾತರಿ ಯಂತ್ರ ನಿಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ ಎಂದರು.

ಮತಖಾತರಿ ಯಂತ್ರದ ಪಾತ್ರದ ಕುರಿತು ಅರಿವು ಮೂಡಿಸಿ, ನಂತರ ಅಣಕು ಮತದಾನದ ಸಂದರ್ಭದಲ್ಲಿ ವಿವಿಪ್ಯಾಡ್‌ನಿಂದ ಬಂದ ಖಾತರಿ ಪ್ರತಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸೀಲು ಮಾಡಿ ಭದ್ರಗೊಳಿಸಿ ಎಂದು ತಿಳಿಸಿದರು.

ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟರು ಹಾಗೂ ಇಬ್ಬರು ರಿಲೀವರ‍್ಸ್ ನೇಮಕಕ್ಕೆ ಅವಕಾಶವಿದ್ದು, ಆದೇಶ ಪತ್ರ ಹೊಂದಿದ್ದರೆ ಮಾತ್ರ ಪರಿಗಣಿಸಿ ಮತ್ತು ಮತಕೇಂದ್ರದಲ್ಲಿ ಒಬ್ಬರು ಮಾತ್ರವೇ ಇರಲು ಅವಕಾಶ ನೀಡಿ ಎಂದು ಸಲಹೆ ನೀಡಿದರು.

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಮೈಕ್ರೋ ವೀಕ್ಷಕರಿರುತ್ತಾರೆ, ಅವರು ಮತದಾನ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸುತ್ತಿರುತ್ತಾರೆ ಎಂದರು.
ಮತದಾನ ಖಾತರಿ ಯಂತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿದ್ದು, ಯಾವುದೇ ಸಮಸ್ಯೆ ಎದುರಾಗದು ಎಂದ ಅವರು ಸಮಸ್ಯೆ ಕಂಡು ಬಂದರೆ ಅದಕ್ಕೆ ಅಳವಡಿಸಿರುವ ವಿಎಸ್‌ಡಿಯು (ವಿವಿಪ್ಯಾಡ್ ಸ್ಟೇಟಸ್ ಡಿಸ್‌ಪ್ಲೆ ಯುನಿಟ್)ಯಂತ್ರ ಸಮಸ್ಯೆಯನ್ನು ತೋರಿಸುತ್ತದೆ ಎಂದರು.
ಇದೇ ರೀತಿ ಮತಗಟ್ಟೆಯಲ್ಲಿ ೪೯ಎಂ. ೪೯ ಎಂ.ಎ ಅಡಿ ಎದುರಾಗಬಹುದಾದ ಚಾಲೆಂಜ್ ಮೋಟ್, ಟೆಂಡರ್ಡ್ ವೋಟ್, ಸರ್ವಿಸ್ ವೋಟ್ ಪ್ರಕರಣಗಳನ್ನು ನಿಭಾಯಿಸುವ ಕುರಿತು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತರಬೇತಿಯನ್ನು ಪ್ರತ್ಯೇಕ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಿದ್ದು,ಸಂಪನ್ಮೂಲ ವ್ಯಕ್ತಿಗಳಾಗಿ ಗೋಪಿಕೃಷ್ಣನ್ ಅವರೊಂದಿಗೆ ವೆಂಕಟೇಶ್, ಶಂಕರ್, ನಾರಾಯಣಸ್ವಾಮಿ, ವಿ.ಚಂದ್ರಪ್ಪ, ಉದಯಕುಮಾರ್, ಆನಂದ ಕುಮಾರ್, ಸುರೇಶ್, ನಾರಾಯಣರೆಡ್ಡಿ,ಕೆಂಪೇಗೌಡ, ಬಿ.ಶ್ರೀನಿವಾಸ್, ಹೆಚ್.ಆರ್.ಶ್ರೀನಿವಾಸ್, ರಾಮಚಂದ್ರಪ್ಪ ಕಾರ್ಯನಿರ್ವಹಿಸಿದರು.
ತರಬೇತಿ ಕಾಯಾಗಾರ ನಡೆದ ಮಹಿಳಾ ಕಾಲೇಜಿಗೆ ಪ್ರೊಬೆಷನರಿ ಐಎಎಸ್ ಅಧಿಕಾರಿ ವಿನಾಯಕ್, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಬಿಇಒ ಕನ್ನಯ್ಯ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಾಗಿ ಪರಿಶೀಲನೆ ನಡೆಸಿದರು. ಆರ್‌ಐಗಳಾದ ರಮೇಶ್, ತಾಂತ್ರಿಕ ಅಧಿಕಾರಿ ವಿಜಯ್, ರವಿ ಮತ್ತಿತರರು ಕಾರ್ಯನಿರ್ವಹಿಸಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!