• Sat. Sep 7th, 2024

PLACE YOUR AD HERE AT LOWEST PRICE

ಕೆಜಿಎಫ್:ನಗರದಿಂದ ಕಾಮಸಮುದ್ರ ಮಾರ್ಗವಾಗಿ ನೆರೆಯ ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಅಭಿವೃದ್ಧಿ ಕಂಡು ಸುಮಾರು 50 ವರ್ಷಗಳೇ ಕಳೆದಿದ್ದು, ಈ ರಸ್ತೆಯಯು ತುಂಬಾ ಹಾಳಾಗಿದ್ದು ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ನರಕಯಾತನೆಮಅನುಭವಿಸುವಂತಾಗಿದೆ.

ಕೆಜಿಎಫ್‍ನಿಂದ ಕಾಮಸಮುದ್ರಕ್ಕೆ 18 ಕಿಮೀ ದೂರವನ್ನು ಹೊಂದಿದ್ದು, ಬಂಗಾರಪೇಟೆ-ಕೆಜಿಎಫ್ ಎರಡೂ ತಾಲ್ಲೂಕುಗಳಿಗೆ ಸೇರುತ್ತದೆ. ನಗರದ ಮಾರಿಕುಪ್ಪಂವರೆಗೆ ರಸ್ತೆಯನ್ನು ಡಾಂಬರೀಕರಣ ಮಾಡಿದ್ದು, ಅಲ್ಲಿಂದ ಮುಂದಕ್ಕೆ ಬಂಗಾರಪೇಟೆ ಗಡಿಯವರೆಗೆ ಸುಮಾರು 4 ಕಿಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ನಡೆದಾಡುವುದಕ್ಕೂ ಕಷ್ಟಕರವಾಗಿದೆ.

ಮಾರಿಕುಪ್ಪಂನಿಂದ ಬಂಗಾರಪೇಟೆ ಗಡಿಯವರೆಗಿನ ರಸ್ತೆಯು ಕಾಡಿನ ಮಧ್ಯೆ ಇರುವುದರಿಂದ ರಾತ್ರಿಯಾಯಿತೆಂದರೆ ಸಂಪೂರ್ಣವಾಗಿ ಕತ್ತಲೆ ಆವರಿಸುವುದರಿಂದ ರಸ್ತೆಯಲ್ಲಿ ಯಾವುದೇ ರೀತಿಯ ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ. ಅಲ್ಲದೇ ಕಾಡು ಪ್ರದೇಶವಾಗಿರುವುದರಿಂದ ಮೂರ್ನಾಲ್ಕು ಕಿಲೋಮೀಟರ್ ಉದ್ದಕ್ಕೂ ಯಾವುದೇ ಮೊಬೈಲ್ ನೆಟ್‍ವರ್ಕ್ ಬರುವುದಿಲ್ಲಿ.

ಹೆರಿಗೆ, ಅಪಘಾತ, ಇಲ್ಲವೇ ಹಾವು ಕಚ್ಚಿರುವಂತಹ ತುರ್ತು ಪರಿಸ್ಥಿತಿಗಳಲ್ಲಿ ಈ ಮಾರ್ಗದಲ್ಲಿ ಆಂಬುಲೆನ್ಸ್ ಸಂಚರಿಸಲು 2-3 ಗಂಟೆಗಳ ಸಮಯವಾಗುವುದರಿಂದ ರೋಗಿಗಳು ಅಸುನೀಗಿರುವಂತಹ ಘಟನೆಗಳೂ ಸಹ ಸಂಭವಿಸಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಾಡು ಹಂದಿ, ಹಾವು, ಚಿರತೆ, ನರಿ, ತೋಳ ಮೊದಲಾದ ಕಾಡುಪ್ರಾಣಿಗಳ ಭೀತಿ ಒಂದೆಡೆ ಕಾಡುತ್ತಿದ್ದು, ಜೀವನೋಪಾಯಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ದಿನಗೂಲಿ ನೌಕರರು ಮತ್ತು ದ್ವಿಚಕ್ರ ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚರಿಸಬೇಕಾಗಿದೆ.

ಒಂದೊಮ್ಮೆ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳೇನಾದರೂ ಪಂಚರ್ ಆದರೆ ದೇವರೇ ಕಾಪಾಡಬೇಕು ಎನ್ನುವುದು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಅಳಲಾಗಿದೆ.

ಕೆಜಿಎಫ್ ಮತ್ತು ಬಂಗಾರಪೇಟೆ ಎರಡೂ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರೂ ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆಯನ್ನು ಅಭಿವೃದ್ಧಿ ಮಾಡುವ ಗೋಜಿಗೇ ಹೋಗದಿರುವುದರಿಂದ ಸುಮಾರು 50 ವರ್ಷಗಳಾದರೂ ರಸ್ತೆ ಅಭಿವೃದ್ಧಿಯನ್ನು ಕಂಡಿಲ್ಲ.

ಕೆಲವು ಕಡೆಗಳಲ್ಲಿ ರಸ್ತೆಯಂಚಿನಲ್ಲಿ ಚರಂಡಿಗಾಗಿ ಸಿಡಿಗಳನ್ನು ಮಾಡಿ ಹಾಗೆಯೇ ಬಿಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಮಳೆ ಬಂತೆಂದರೆ ಸಾಕು ಇಡೀ ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗುತ್ತದೆಂದು ನಿತ್ಯ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಳೆಂಟು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಸರ್ಕಾರದ ಕಡೆಯಿಂದ ಅನುಮೋದನೆಯಾಗಿ ಬಂದ ಕೂಡಲೇ ಟೆಂಡರ್ ಕರೆದು ಕಾಮಗಾರಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!