• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ನಿವೇಶನ ರಹಿತರು ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ರಾಜಕೀಯ ದುರುದ್ದೇಶದಿಂದ ಹುಲಿಬೆಲೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಪತಿ ಹಾಗೂ ಅವರ ಕೆಲವು ಬೆಂಬಲಿಗರು ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ತಾತ್ಕಾಲಿಕವಾಗಿ ನಿರ್ಮಿಸಿರುವ ಗುಡಿಸಲುಗಳನ್ನು ಜೆಸಿಬಿ ಮೂಲಕ ದ್ವಂಸ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ರೈತ ಸೇನೆಯ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಹೇಳಿದರು.

ಬಂಗಾರಪೇಟೆ ತಾಲ್ಲೂಕಿನ ಹನುಮಂತಪುರ ಬಳಿ ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿಕೊಂಡು ಹೋರಾಟ ಮಾಡುತ್ತಿರುವ ಸ್ಥಳದಲ್ಲಿ ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಮಾತನಾಡಿ, ಹುಣಸನಹಳ್ಳಿ ಗ್ರಾಮದ ಸುಮಾರು ೨೫ ಪರಿಶಿಷ್ಟ ಜಾತಿಯ ಕುಟುಂಬಗಳು ನಿವೇಶನವಿಲ್ಲದೆ ನಿವೇಶನಕ್ಕಾಗಿ ಒತ್ತಾಯಿಸಿ ಹನುಮಂತಪುರ ಗ್ರಾಮದ ಸರ್ವೆನಂ.೨೨ ಪಿ೧ರಲ್ಲಿ ೧ ಎಕರೆ ಸರ್ಕಾರಿ ಜಮೀನಿನಲ್ಲಿ ೨೦೨೧ರ ಜೂನ್ ತಿಂಗಳಿನಲ್ಲಿ ಅಹೋರಾತ್ರಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಸ್ಪಂದಿಸಿ ಅಂದು ತಾಲ್ಲೂಕು ಆಡಳಿತ ನಿವೇಶನವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ ಕಾರಣ ಗುಡಿಸಲುಗಳನ್ನು ತೆರವುಗೊಳಿಸಲಾಯಿತು. ಎರಡು ವರ್ಷ ಕಳೆದರೂ ನಿವೇಶನ ರಹಿತರಿಗೆ ಹಕ್ಕುಪತ್ರವನ್ನು ನೀಡಲು ತಾಲ್ಲೂಕು ಆಡಳಿತ ಮುಂದಾಗಲಿಲ್ಲ. ಆದರೆ ಕರ್ನಾಟಕ ದಲಿತ ರೈತ ಸೇನೆಯ ಹೋರಾಟದ ಫಲವಾಗಿ ಸರ್ಕಾರಿ ಭೂಮಿಯನ್ನು ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳ ಹೆಸರಿಗೆ ಮಂಜೂರಾಗಿ ೧೦ ತಿಂಗಳಾದರೂ ನಿವೇಶನ ಹಂಚಿಕೆ ಮಾಡುವಲ್ಲಿ ಮಲತಾಯಿ ಧೋರಣೆಯನ್ನು ಎಸಗುತ್ತಿದ್ದಾರೆ.

ಈಗ ಮತ್ತೆ ನಿವೇಶನ ರಹಿತರು ಕಳೆದ ನಾಲ್ಕು ತಿಂಗಳಿನಿಂದ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ಹೋರಾಟದ ಸ್ಥಳಕ್ಕೆ ಬೇಟಿ ನೀಡಿದ ಕೆಲವು ಅಧಿಕಾರಿಗಳು ನಾಮಕಾವಸ್ತೆಗೆ ಈ ಜಮೀನು ಕುರಿತಾಗಿ ನ್ಯಾಯಾಲಯದಲ್ಲಿ ದಾವೆ ಇದ್ದು, ಇದನ್ನು ಏನೂ ಮಾಡಲು ಸಾಧ್ಯವಾಗದ ಕಾರಣ ನಾವು ಅಸಹಾಯಕರಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಆದರೆ ಈ ಭೂಮಿಗೆ ಸಂಬಂಧಿಸಿ ಯಾವುದೇ ರೀತಿಯ ದಾವೆ ಇರುವುದಿಲ್ಲ ಈ ಜಮೀನಿನ ಪಕ್ಕದಲ್ಲಿರುವ ಸರೋಜಮ್ಮ ಮತ್ತು ಹುಣಸನಹಳ್ಳಿ ಗ್ರಾಮದ ಅಮರಪ್ಪ ಎಂಬುವವರಿಗೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದೆ ಅಷ್ಟೆ. ಈಗ ಈ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾದರೆ ಮೊದಲು ನಮ್ಮ ಪ್ರಾಣಗಳನ್ನು ತೆಗೆದು ತದ ನಂತರ ಗುಡಿಸಲುಗಳನ್ನು ನೆಲೆ ಸಮ ಮಾಡಿ ಎಂದು ಕಿಡಿ ಕಾರಿದರು.

ನಿವೇಶನ ರಹಿತೆ ಸರಸ್ವತಮ್ಮ ಮಾತನಾಡಿ, ನಾವು ಬಡವರು ಹಾಗೂ ನಿವೇಶನ ರಹಿತರು ಎಂದು  ಸ್ಥಳೀಯ ನಾಯಕರಿಗೆ ಗೊತ್ತಿದ್ದರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಲು ಮುಂದಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಿವೇಶನ ಕೊಡುತೇವೆ ಎಂಬ ಆಶ್ವಾಸನೆಯನ್ನು ನೀಡಿ ನಮ್ಮಿಂದ ಮತ ಪಡೆದು ಅಧಿಕಾರವನ್ನು ಪಡೆದಿರುವ ನಾಯಕರು ನಮಗೆ ದ್ರೋಹ ಮಾಡುತ್ತಿದ್ದಾರೆ.

ಜೆಸಿಬಿಯನ್ನು ಬಳಸಿ ಗುಡಿಸಲುಗಳನ್ನು ಕೆಡವಲು ಸಂಚು ರೂಪಿಸಿರುವವರು ಮೊದಲು ನಮ್ಮ ಹೆಣಗಳ ಮೇಲೆ ಜೆಸಿಬಿಯನ್ನು ಹರಿಸಿ ನಂತರ ಗುಡಿಸಲುಗಳನ್ನು ಧ್ವಂಸ ಮಾಡಿ. ಇಲ್ಲ ನಮಗೆ ನಿವೇಶನಕ್ಕಾಗಿ ಹಕ್ಕುಪತ್ರವನ್ನು ನೀಡಿ ಎಂದು  ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರೈತ ಸೇನೆಯ ತಾಲ್ಲೂಕು ಅಧ್ಯಕ್ಷ ಹೀರೆಕರಪನಹಳ್ಳಿ ಮುನಿರಾಜು, ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್ ಮುಖಂಡರಾದ ಸತೀಶ್ ಕುಮಾರ್, ಜಯ, ಲೋಕೇಶ್ವರಿ, ಮಲ್ಲಿಗ, ಗೀತಾ, ಧನಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು.

(ನಮ್ಮಸುದ್ದಿ.ನೆಟ್) nammasuddi.net ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!