• Fri. May 3rd, 2024

PLACE YOUR AD HERE AT LOWEST PRICE

ಕೋಲಾರ, ಜು. ೦೮ : ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇರುವೆಡೆಯಷ್ಟೇ ರಾಜಿ-ಸಂಧಾನ ಸಾಧ್ಯ. ಹಾಗೆಯೇ ರಾಜಿ-ಸಂಧಾನದಿoದ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆ ಇನ್ನೂ ಹೆಚ್ಚಳ ಸಾಧ್ಯ ಎಂದು ಗೌರವಾನ್ವಿತ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಪಿ.ಸಂದೇಶ್ ಕರೆ ನೀಡಿದರು.

ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಶನಿವಾರದಂದು ಏರ್ಪಡಿಸಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಹೀಗಾಗಿ ಸಾಮರಸ್ಯತೆ, ಭ್ರಾತೃತ್ವ, ಭಾವೈಕ್ಯತೆಯನ್ನು ಸಮಾಜದಲ್ಲಿ ಹೆಚ್ಚಿಸುವ ಸಲುವಾಗಿ ಹಾಗೂ ವ್ಯಾಜ್ಯನಿವಾರಣೆ ಸಲುವಾಗಿ ನಾವು, ಆರಕ್ಷಕ ಸಿಬ್ಬಂದಿ, ನ್ಯಾಯವಾದಿಗಳು ಹಾಗೂ ಮುಖ್ಯವಾಗಿ ಕಕ್ಷಿದಾರರು ರಾಜಿ-ಸಂಧಾನ ಪ್ರಕ್ರಿಯೆಯಲ್ಲಿ ಸೇವಾ ಮನೋಭಾವನೆಯಿಂದ ಪಾಲ್ಗೊಳ್ಳುವುದು ಒಳಿತು. ನಾವೆಲ್ಲರೂ ಒಮ್ಮತದಿಂದ ಸೇರಿದಲ್ಲಿ ರಾಜಿ-ಸಂಧಾನದಿoದ ನೆನೆಗುದಿಯಲ್ಲಿರುವ ಅದೆಷ್ಟೋ ವ್ಯಾಜ್ಯಗಳಿಗೆ ಖಂಡಿತಾ ತೆರೆ ಎಳೆಯಲು ಸಾಧ್ಯ ಎಂದರು.

ಯಾವುದೋ ಕ್ಷಲ್ಲಕ ಕಾರಣಕ್ಕೆ, ಯಾವುದೋ ದುರ್ಬಲ, ಸೂಕ್ಷ್ಮ ಘಳಿಗೆಯಲ್ಲಿ ಕ್ಷುಲ್ಲಕ  ಭಾವನೆಗಳಿಗೆ ಧಕ್ಕೆಯಾಗಿ ನಾನಾ ರೀತಿಯ ವ್ಯಾಜ್ಯಕಾರಣಗಳು ಉದ್ಭವಿಸಿರುತ್ತವೆ. ಎಷ್ಟೋ ಬಾರಿ ಇವು ಗಂಡ-ಹೆoಡತಿ ಮಧ್ಯೆ, ಅಣ್ಣ-ತಮ್ಮಂದಿರ ನಡುವೆ, ತಂದೆ-ತಾಯಿಯ ನಡುವೆಯೂ ಉದ್ಭವಿಸಿರುತ್ತವೆ. ಆದರೆ ನಾನು ಎಂಬ ಅಹಂ ಅನ್ನು ಪಕ್ಕಕ್ಕಿಟ್ಟು ಯೋಚಿಸಿದ್ದಲ್ಲಿ ಈ ವ್ಯಾಜ್ಯಕಾರಣಗಳು ನ್ಯಾಯಾಲಯದ ಮೆಟ್ಟಿಲು ಸಹಾ ಏರದೇ ಯಾವಾಗಲೋ ಪ್ರಾಥಮಿಕ ಹಂತಗಳಲ್ಲಿಯೇ ಇತ್ಯರ್ಥವಾಗಿಬಿಡುತ್ತಿದ್ದವು ಎಂದು ಹೇಳಿದರು.

ಆದರೆ ಎದುರು ಪಾರ್ಟಿ ಬಂದು ಸಾರಿ ಕೇಳಲಿ, ನಾನು ಕೇಸ್‌ನ್ನು ಬಿಟ್ಟೇ ಬಿಡುತ್ತೇನೆ ಎಂಬ ನಿರೀಕ್ಷೆಯಲ್ಲಿಯೇ ಹಲವಾರು ವರ್ಷ ಕಾಲ ಸಾಗಿ ಹೋಗಿರುತ್ತವೆ. ಎಷ್ಟೋ ಬಾರಿ ಕೇಸು ದಾಖಲಿಸುವಾಗ ಇದ್ದ ಹುಮ್ಮಸ್ಸು, ಆವೇಶ, ಕೋಪ-ತಾಪಗಳು ಆನಂತರದ ದಿನಗಳಲ್ಲಿಯೇ ಕಣ್ಮರೆಯಾಗಿರುತ್ತವೆ. ಕೇಸಿನ ಹಿಯರಿಂಗ್ ಡೇಟುಗಳು ಮುಂದಕ್ಕೆ ಹೋಗುತ್ತಲೇ ಇರುತ್ತವೆ ಆದರೆ ಪಾರ್ಟಿಯೇ ಪತ್ತೆ ಇರುವುದಿಲ್ಲ ಎಂದು ತಿಳಿಸಿದರು.

ಹೀಗೆ ಇಚ್ಛಾರಹಿತವಾಗಿ ವಿಚಾರಣಾ ದಿನಗಳನ್ನು ಮುಂದುವರೆಸಿಕೊoಡು ಹೋಗುತ್ತಿರುವ ಕೇಸುಗಳಲ್ಲಿ, ಇಚ್ಛೆ, ಆಸಕ್ತಿಯನ್ನು ಕಳೆದುಕೊಂಡ ಕೇಸುಗಳಲ್ಲಿ, ರಾಜಿಯಾಗಬಲ್ಲ ಕೇಸುಗಳಲ್ಲಿ ನಾವೆಲ್ಲರೂ ಆಸಕ್ತಿ ವಹಿಸಿ ಪ್ರಯತ್ನಿಸಿದಲ್ಲಿ ಅರ್ಧಕ್ಕೂ ಹೆಚ್ಚು ಖಂಡಿತಾ ರಾಜಿಯಾಗುವವು. ಇದಕ್ಕಾಗಿ ನಾವು ರಾಜಿ-ಸಂಧಾನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಬೇಕು.

ಕಕ್ಷಿದಾರರನ್ನು ಮಾತನಾಡಲು ಬಿಡಬೇಕು. ರಾಜಿಯಾಗುವಂತೆ ಅವರ ಮೇಲೆ ಯಾವುದೇ ಒತ್ತಡ, ಆಮಿಷ ಹೇರಬಾರದು. ಅವರು ಮಾತನಾಡುವಾಗಿ ಕಾನೂನು ಸಲಹೆಯ ಅವಶ್ಯಕತೆ ಬಿದ್ದಾಗ ಅವರಿಗೆ ಕಾನೂನಿನ ಇತಿ-ಮಿತಿಗಳನ್ನು ವಿವರಿಸಬೇಕು. ರಾಜಿಯಾಗುವುದಿದ್ದಲ್ಲಿ ಆಗಿ ಎಂದು ಅವರ ನಿರ್ಧಾರವನ್ನು ಕೇಳಬೇಕು ಎಂದರು.

ಈವರೆವಿಗೂ ಸಾಕಷ್ಟು ಚೆಕ್‌ಬೌನ್ಸ್ ಕೇಸುಗಳು ರಾಜಿ-ಸಂಧಾನದಲ್ಲಿ ಇತ್ಯರ್ಥವಾಗಿವೆ. ಆಸ್ತಿ ವಿಭಜನೆ ದಾವೆಗಳೂ ಇತ್ಯರ್ಥವಾಗಿವೆ. ಕೌಟುಂಭಿಕ ಪ್ರಕರಣಗಳೂ ಆಶಾದಾಯಕವಾಗಿ ಕೊನೆಗೊಂಡಿವೆ. ರಾಜಿಯಾಗಬಲ್ಲಂಥ ಎಷ್ಟೋ ಕೇಸುಗಳು ಎರಡೂ ಪಕ್ಷದ ಕಕ್ಷಿದಾರರ ಮಾತುಕತೆಯಲ್ಲಿಯೇ ರಾಜಿಯಾಗಿಬಿಟ್ಟಿವೆ. ಇಂಥಾ ರಾಜಿಯಾದ ಪ್ರಕರಣಗಳೆಲ್ಲದರ ಯಶಸ್ವಿಗೆ ಎರಡೂ ಕಡೆಯ ವಕೀಲರ ಪಾತ್ರ ಖಂಡಿತಾ ಹಿರಿದಿದೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ಮಾತನಾಡಿ ಇಡೀ ಕೋಲಾರ ಜಿಲ್ಲೆಯ ಎಲ್ಲಾ ವಕೀಲರು ರಾಜಿ-ಸಂಧಾನದ ಮೂಲಕ ಪ್ರಕರಣಗಳ ಇತ್ಯರ್ಥವಾಗುವುದಕ್ಕೆ ಸಂಪೂರ್ಣ ಸಹಮತವನ್ನು ನೀಡಿದ್ದಾರೆ. ಹೀಗಾಗಿಯೇ ಈವರೆವಿಗೂ ಕೋಲಾರ ಜಿಲ್ಲೆಯಲ್ಲಿಯೇ ರಾಜಿ-ಸಂಧಾನವಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಕಕ್ಷಿದಾರರ ಹೃದಯ ವೈಶಾಲ್ಯತೆ, ದೂರಗಾಮಿತ್ವ, ಹೋಂದಾಣಿಕೆ ಮನೋಭಾವನೆ, ನಿಷ್ಕಲ್ಮಶತೆಯು ರಾಜಿ-ಸಂಧಾನವಾಗುವುದಕ್ಕೆ ಮೊದಲ ಕಾರಣವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಭಾಸ್ಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ಎಂ, ಪ್ರಧಾನ ಕಾರ್ಯದರ್ಶಿ ಎನ್. ಬೈರಾರೆಡ್ಡಿ ವಕೀಲ ಕೆ.ನರೇಂದ್ರಬಾಬು ಹಾಜರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!