• Wed. May 1st, 2024

PLACE YOUR AD HERE AT LOWEST PRICE

ಸದನದ ಬಾವಿಯಲ್ಲಿ ಧರಣಿ ನಡೆಸಿ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಪೀಠಕ್ಕೆ ಎಸೆದ ಹಿನ್ನೆಲೆಯಲ್ಲಿ ಬಿಜೆಪಿಯ ೧೦ ಶಾಸಕರನ್ನು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಆದೇಶಿಸಿದ್ದಾರೆ.

ಸದನದಲ್ಲಿ ಅಗೌರವ ತೋರಿದ ಬಿಜೆಪಿ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ಭರತ್ ಶೆಟ್ಟಿ ಜುಲೈ ೨೧ರವರೆಗೆ ನಡೆಯಲಿರುವ ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.

ಘಟನೆಯ ಹಿನ್ನೆಲೆ:
ಇಂದು (ಜುಲೈ ೧೯ರಂದು) ನಡೆದ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಬಿಜೆಪಿ ಸದಸ್ಯರು, ಸಚಿವರು ಮಂಡಿಸಿದ ಐದು ವಿಧೇಯಕ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠಕ್ಕೆ ಎಸೆದ ಘಟನೆ ನಡೆಯಿತು.

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರಿಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ಬೆಳಿಗ್ಗೆಯಿಂದಲೇ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಗಲಾಟೆ ಮಾಡಲು ಆರಂಭಿಸಿದರು. ಆಗ ಸಭಾಧ್ಯಕ್ಷ ಯು.ಟಿ. ಖಾದರ್‌ರವರು ಸದನವನ್ನು ಕೆಲ ಕಾಲ ಮುಂದೂಡಿದ್ದರು. ಮತ್ತೆ ಆರಂಭವಾದ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆಯದೆ ಜೋರು ಧ್ವನಿಯಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರು. ಸಭಾಧ್ಯಕ್ಷರು ವಿನಂತಿಸಿಕೊAಡರೂ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನಗಳಿಗೆ ತೆರಳಲಿಲ್ಲ. ಈ ವೇಳೆ ಸದನ ನಡೆಯಲು ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಬಿಜೆಪಿ ಸದಸ್ಯರ ಗಲಾಟೆ ನಡುವೆಯೇ ಎಚ್ ಕೆ ಪಾಟೀಲ್, ಕೃಷ್ಣಭೈರೇಗೌಡ ಅವರು ಐದು ವಿಧೇಯಕಗಳನ್ನು ಮಂಡಿಸಿದರು. ಗಲಾಟೆ ನಡುವೆಯೇ ಐದು ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು.

ಸದನದ ಬಾವಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಧರಣಿ ಹಿನ್ನೆಲೆಯಲ್ಲಿ ಭೋಜನ ವಿರಾಮ ರದ್ದುಪಡಿಸಿ ಕಲಾಪ ಮುಂದುವರಿಸಿದ ಸ್ಪೀಕರ್ ಯು.ಟಿ. ಖಾದರ್, ಬಳಿಕ ಸದನ ನಡೆಸುವಂತೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಸೂಚಿಸಿದರು. ಪೀಠ ಸ್ವೀಕರಿಸಿದ ತರುವಾಯ ಬಜೆಟ್ ಮೇಲಿನ ಚರ್ಚೆಯನ್ನು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮುಂದುವರಿಸಿದರು.

ಈ ವೇಳೆ ಸದನದ ಬಾವಿಯಲ್ಲಿ ಧರಣಿ ಮುಂದುವರಿಸಿದ ಬಿಜೆಪಿ ಶಾಸಕರು, ಏಕಾಏಕಿ ಮಸೂದೆಯ ಪ್ರತಿಗಳನ್ನು ಹರಿದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ಎಸೆದರು. ಇದಕ್ಕೆ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಕಿಡಿಕಾರಿದರು. ಜನಪ್ರತಿನಿಧಿಗಳಾಗಿ ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ನಿಮಗೆ ಗೌರವ ತರುವಂಥದ್ದಲ್ಲ ಎಂದು ಆಕ್ರೋಶ ಹೊರಹಾಕಿ, ಕೂಡಲೇ ಬಿಜೆಪಿ ಶಾಸಕರನ್ನು ಕಲಾಪದಿಂದ ಹೊರಹಾಕುವಂತೆ ಮಾರ್ಷಲ್‌ಗಳಿಗೆ ಸೂಚಿಸಿದರು. ಇದೇ ವೇಳೆ ಉಪ ಸ್ಪೀಕರ್ ಗೆ ರಕ್ಷಣೆ ಕೊಡದ ಮಾರ್ಷಲ್‌ಗಳ ವಿರುದ್ಧ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.

ಗದ್ದಲದ ನಡುವೆಯೇ ಸಭೆಯನ್ನು ಮೂರು ಗಂಟೆಯವರೆಗೆ ಉಪ ಸಭಾಧ್ಯಕ್ಷರು ಮುಂದೂಡಿದರು. ಆ ಬಳಿಕವೂ ಕೆಲ ನಿಮಿಷಗಳವರೆಗೆ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು. ತದನಂತರ ಬಂದ ಸಭಾಧ್ಯಕ್ಷ ಯು.ಟಿ.ಖಾದರ್ ಪೀಠ ಸ್ವೀಕರಿಸಿದ ಮೇಲೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಹೆಚ್.ಕೆ.ಪಾಟೀಲ್ ಸದನಕ್ಕೆ ಅಗೌರವ ತೋರಿದ ಶಾಸಕರನ್ನು ಅದಿವೇಶನ ಮುಗಿಯುವ ತನಕ ಅಮಾನತ್ತು ಮಾಡುವ ಬಗ್ಗೆ ವಿಷಯ ಮಂಡಿಸಿದರು, ಸ್ಪೀಕರ್ ಇದನ್ನು ಮತಕ್ಕೆ ಹಾಕಿ ಬಹುಮತದೊಂದಿಗೆ ಅಂಗೀಕರಿಸಿ. ಅಮಾನತುಗೊಂಡ ಎಲ್ಲಾ ೧೦ ಜನ ಶಾಸಕರ ಹೆಸರುಗಳನ್ನು ಪ್ರಕಟಿಸಿದರು.

ಅಮಾನತು ಪ್ರಕಟಿಸಿದ ನಂತರ ಸದಸ್ಯರು ಸದನದಿಂದ ಹೊರ ಹೋಗದ ಕಾರಣ ಮಾರ್ಷಲ್‌ಗಳಿಂದ ಸದಸ್ಯರನ್ನು ಹೊತ್ತುಕೊಂಡು ಹೋಗಿ ಹೊರಹಾಕಲಾಯಿತು. ಇದೇ ವೇಳೆ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥಗೊಂಡ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!