• Sun. May 5th, 2024

PLACE YOUR AD HERE AT LOWEST PRICE

ಕೆಜಿಎಫ್:ಕಳೆದ ಜೂನ್ ೨೦ರಂದು ಶಿಕ್ಷಣ ಇಲಾಖೆ ವತಿಯಿಂದ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಲ್ಲಿ ನಗರದ ತಮಿಳು ಶಿಕ್ಷಕಿಯೊಬ್ಬರನ್ನು ಶ್ರೀನಿವಾಸಪುರ ತಾಲೂಕಿಗೆ ವರ್ಗಾವಣೆಗೊಳಿಸಿದ ವಿಚಾರ ತಿಳಿಯುತ್ತಿದ್ದಂತೆ ತೀವ್ರ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಶಿಕ್ಷಕಿ ಅಸುನೀಗಿರುವ ದಾರುಣ ಘಟನೆ ನಡೆದಿದೆ.

ಮೃತ ಶಿಕ್ಷಕಿಯನ್ನು ನಿರ್ಮಲಕುಮಾರಿ(೫೪) ಎಂದು ಗುರ್ತಿಸಲಾಗಿದ್ದು, ನಗರದ ಎನ್.ಟಿ.ಬ್ಲಾಕ್‌ನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಎರಡು ವಾರಗಳ ಹಿಂದೆ ಬಿಇಒ ಕಚೇರಿಯಿಂದ ದೂರವಾಣಿ ಕರೆ ಮಾಡಿ ನಿಮಗೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಗೆ ವರ್ಗಾವಣೆಯಾಗಿದ್ದು, ಕೂಡಲೇ ಹೋಗಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ ಹಿನ್ನಲೆಯಲ್ಲಿ ತೀವ್ರ ಖಿನ್ನತೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಕೆಜಿಎಫ್‌ನ ಎಲ್ಲ ತಮಿಳು ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿದ್ದ ತಮಿಳು ಶಿಕ್ಷಕರನ್ನು ಕೌನ್ಸಿಲಿಂಗ್ ಮುಖಾಂತರ ಜಿಲ್ಲೆಯಲ್ಲಿ ಖಾಲಿ ಇರುವ ಇತರೆ ಸ್ಥಳಗಳಿಗೆ ವರ್ಗಾವಣೆಗೊಳಿಸಲಾಗಿತ್ತು. ಅದರಂತೆ ನಿರ್ಮಲಕುಮಾರಿರನ್ನು ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾವಣೆಗೊಳಿಸಿದ್ದರು.

ಶಿಕ್ಷಕಿ ನಿರ್ಮಲಕುಮಾರಿ ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ೩ ತಿಂಗಳ ಹಿಂದೆ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಕಳೆದ ಜೂನ್ ೨೦ರಂದು ವರ್ಗಾವಣೆ ಸಂದರ್ಭದಲ್ಲಿ ನಿರ್ಮಲಕುಮಾರಿ ಆರೋಗ್ಯದ ಸಮಸ್ಯೆ ಕುರಿತು ಆಸ್ಪತ್ರೆಯ ದಾಖಲೆಗಳನ್ನು ನೀಡಿ ವರ್ಗಾವಣೆ ಬೇಡವೆಂದು ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರೂ ಅಧಿಕಾರಿಗಳು ಯಾವುದೇ ಆರೋಗ್ಯ ಸಮಸ್ಯೆಯನ್ನು ಪರಿಗಣಿಸದೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯ ಕೆಪಿಎಸ್ ಶಾಲೆಗೆ ವರ್ಗಾವಣೆಗೊಳಿಸಿದ್ದರು.

ಮೊದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶಿಕ್ಷಕಿ ನಿರ್ಮಲ ಕುಮಾರಿಯವರಿಗೆ ವರ್ಗಾವಣೆ ವಿಚಾರ ತಿಳಿದಿರಲಿಲ್ಲ. ಆದರೆ ಎರಡು ವಾರಗಳ ಹಿಂದೆ ವಿಷಯ ತಿಳಿದಿದ್ದು, ಪ್ರತಿದಿನ ಕೆಜಿಎಫ್‌ನಿಂದ ಹೋಗಿಬರಲು ಸುಮಾರು ೧೪೦ ಕಿಲೋಮೀಟರ್ ದೂರ ಕ್ರಮಿಸಬೇಕು ಎಂಬ ಆಲೋಚನೆಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದು, ಶನಿವಾರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದರಿಂದ ಆಸ್ಪತ್ರೆಗೆ ಸೇರಿಸಲು ಮುಂದಾದಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಜೂನ್ ೨೦ ರಂದು ಪ್ರಾರಂಭವಾದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಕೆಲವು ಶಿಕ್ಷಕರಿಗೆ ಅವರು ಬೋಧಿಸುವ ವಿಷಯ ಲಭ್ಯವಿಲ್ಲದ ಕಾರಣ ಬೇರೆ ಭಾಷೆಯನ್ನು ಬೋಧಿಸುವಂತೆ ತಿಳಿಸಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಅಲ್ಪಸಂಖ್ಯಾತ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಪಿಟಿಆರ್(ಪ್ಯುಪಿಲ್ ಟೀಚರ್ ರೇಷಿಯೋ) ಅನ್ವಯವಾಗದೇ ಇದ್ದರೂ ಸಹ ವರ್ಗಾವಣೆಗೊಳಿಸಿದ್ದರು ಎನ್ನಲಾಗಿದೆ.

ಸರ್ಕಾರದ ಭಾಷಾ ನೀತಿಯ ಪ್ರಕಾರ ಅಲ್ಪಸಂಖ್ಯಾತ ಭಾಷೆಗಳನ್ನು ವ್ಯಾಸಂಗ ಮಾಡಲು ಕೇವಲ ಒಂದು ವಿದ್ಯಾರ್ಥಿ ಶಾಲೆಗೆ ಸೇರಿದರೂ ಅವರಿಗೆ ಅವರ ಮಾತೃಭಾಷೆಯಲ್ಲಿ ಬೋಧನಾ ಕಾರ್ಯವನ್ನು ಮಾಡಬೇಕಾಗಿದೆ. ಅಲ್ಲದೇ ಈ ರೀತಿ ಬೋಧಿಸುವ ಶಿಕ್ಷಕರು ಐಚ್ಚಿಕ ವಿಷಯವನ್ನಾಗಿ ಆ ಭಾಷೆಯನ್ನು ವ್ಯಾಸಂಗ ಮಾಡಿರಬೇಕಾದುದು ಕಡ್ಡಾಯವಾಗಿರುತ್ತದೆ.

ಇಡೀ ಜಿಲ್ಲೆಯಲ್ಲಿ ಕೆಜಿಎಫ್ ತಾಲ್ಲೂಕು ಕೇಂದ್ರಸ್ಥಾನವನ್ನು ಹೊರತುಪಡಿಸಿ ಇತರ ಯಾವುದೇ ತಾಲ್ಲೂಕು ಕೇಂದ್ರಸ್ಥಾನಗಳಲ್ಲಾಗಲೀ ಅಥವಾ ಆ ತಾಲ್ಲೂಕುಗಳ ಯಾವುದೇ ಶಾಲೆಯಲ್ಲಾಗಲೀ ತಮಿಳು ಭಾಷೆಯನ್ನು ಬೋಧಿಸುವುದಿಲ್ಲ. ಕೇವಲ ಕೆಜಿಎಫ್‌ನಲ್ಲಿ ಮಾತ್ರ ತಮಿಳು ಭಾಷೆಯನ್ನು ಬೋಧಿಸಲಾಗುತ್ತದೆ.

ಕೆಜಿಎಫ್ ಶಾಲೆಗಳಲ್ಲಿನ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿದಲ್ಲಿ ಇಲ್ಲಿ ತಮಿಳು ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಗತಿಯೇನು ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸುತ್ತಿದ್ದು, ತಮಿಳು ಶಿಕ್ಷಕರ ವರ್ಗಾವಣೆಯನ್ನು ಕೈಬಿಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!