• Thu. May 2nd, 2024

PLACE YOUR AD HERE AT LOWEST PRICE

ನನ್ನ ಪ್ರಿಯ ಕನ್ನಡ ಬಂಧುಗಳಿಗೆ ಹೃದಯ ತುಂಬಿದ ನಮಸ್ಕಾರಗಳು. ಕೇರಳ ರಾಜ್ಯದ ಉತ್ತರ ಭಾಗದಲ್ಲಿ ನೆಲೆಸಿರುವ ನನ್ನ ಜೀವನದ ಕೆಲವು ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಅಂತೆಯೇ ನನ್ನ ಬರಹಗಳಲ್ಲಿ ಕನ್ನಡೇತರ ಪದಗಳು ಇಣುಕಿದ್ದರೆ ಕ್ಷಮಿಸಿ. ನಾನ್ಯಾರೆಂದು ಕೇಳುವಿರಾ? ನೀವೆಣಿಸಿದಂತೆ ನಾನೇನೂ ಬರಹಗಾರಳಲ್ಲ. ಒಂದು ಖಾಸಗಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ, ಸಮಯ ದೊರಕಿದಾಗ ಸಮಾಜದೊಂದಿಗೆ ಬೆರೆಯುವ ಸಾಮಾಜಿಕ ಕಾಳಜಿಯುಳ್ಳವಳು.

ಈಗ ನಾನು ಹೇಳಲು ಬಯಸಿದ್ದು ಏನೆಂದರೆ, ನಾನು ತಿಳಿದ ಕೇರಳದ ಬಗ್ಗೆ ಒಂದೆರಡು ಮಾತುಗಳು. ನಾನು ಕನ್ನಡಿಗಳಾದರೂ ನನ್ನ ರಾಜ್ಯ ಕೇರಳ. ನನ್ನ ರಾಜ್ಯವೆಂಬ ಕಾರಣಕ್ಕಲ್ಲ ನಾನು ಕೇರಳವನ್ನು ಮೆಚ್ಚಿರುವುದು. ಜಾತೀಯತೆ ಎಂಬುದು ತಾಂಡವವಾಡುತ್ತಿರುವ ಈ ಕಾಲದಲ್ಲಿ ಕೇರಳದ ಜನತೆ ಅದನ್ನು ದಾಟಿ ಮುಂದುವರಿಯುತ್ತಿದ್ದಾರಲ್ಲಾ.. ಅದಕ್ಕೆ ನಾನು ಹೆಮ್ಮೆಪಡುತ್ತೇನೆ.

ಕೇರಳದ ಯುವ ಪೀಳಿಗೆ ಜಾತೀಯತೆ ಮರೆತು ಒಗ್ಗಟ್ಟಿನಿಂದ ಬೆರೆಯುತ್ತಿದ್ದಾರಲ್ಲಾ…. ಇದಕ್ಕಿಂತ ಹೆಮ್ಮೆ ಯಾವುದಿದೆ? ಇದೆಲ್ಲಿ? ಯಾವಾಗ? ಎಂದೆಲ್ಲಾ ಕೇಳಬೇಡಿ.

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕೇರಳ ಎದುರಿಸಿದ್ದು ಹಲವು ದುರಂತಗಳನ್ನು. ಚಂಡಮಾರುತ, ಪ್ರಳಯ, ಕೊರೋನಾ…. ಹೀಗೆ ಹಲವು ….

ಈ ದಿನಗಳಲ್ಲಿ ಕೇರಳದಲ್ಲಿ ಯಾವುದೇ ಕೋಮುವಾದಿಗಳೂ ತಲೆಯೆತ್ತಿ ನಡೆಯಲಿಲ್ಲ. ಕೈ ಬಿಟ್ಟ ಕೇಂದ್ರ ಸರಕಾರ !

ರಾಜ್ಯ ಸರಕಾರದೊಂದಿಗೆ ಕೈ ಜೋಡಿಸಿದ್ದು ಕೇರಳದ ಜನತೆ.

ಭವಿಷ್ಯತ್ತಿಗಾಗಿ ತೆಗೆದಿರಿಸಿದ ಧನ-ಕನಕಗಳನ್ನು ಶ್ರೀಮಂತ ಬಡವರೆನ್ನದೆ ಬಹುಜನರು ಮುಖ್ಯಮಂತ್ರಿಯ ಪರಿಹಾರ ನಿಧಿಗೆ ನೀಡಿದರು. ಕಾರ್ಮಿಕರು, ಸರಕಾರಿ ಉದ್ಯೋಗಸ್ಥರು ತಮ್ಮ ವೇತನದ ಪಾಲನ್ನು ಸರಕಾರಕ್ಕೆ ನೀಡಿದರು. ಯುವ ಜನತೆ ದುಡಿದು, ಗುಜರಿ ಸಂಗ್ರಹಿಸಿ, ಆಹಾರ ವಿತರಿಸಿ ಬಂದ ಲಾಭವನ್ನು ಸರಕಾರಕ್ಕೆ ಧಾರೆಯೆರೆದರು. ಫಲವಾಗಿ ರಾಜ್ಯ ಸರಕಾರ ತಲೆಯೆತ್ತಿ ನಿಂತಿತು. ಎರಡನೇ ಸಲ ಮತ್ತೆ ಅಧಿಕಾರ ಪಡೆಯಿತು.

ಧಾರ್ಮಿಕತೆಯ ಬಗ್ಗೆ ಮಾತಾಡೋಣ ಅಂದರೆ, ಅದಕ್ಕೂ ಇಲ್ಲಿ ಅವಕಾಶ ಇಲ್ಲ. ಯಾಕೆಂದರೆ, ಇಲ್ಲಿ ಹಬ್ಬಗಳು ಮನೆಗಳಿಗೆ ಸೀಮಿತವಲ್ಲ; ನಾಡ ಹಬ್ಬಗಳೆಂದೇ ಹೇಳಬೇಕು. ಓಣಂ – ವಿಷು ಹಿಂದುಗಳ ಹಬ್ಬವೆಂದು ತಿಳಿದರೆ ತಪ್ಪು. ಸಂಘ ಸಂಸ್ಥೆಗಳಲ್ಲೂ, ಶಾಲೆ – ಕಾಲೇಜುಗಳಲ್ಲೂ, ಕಛೇರಿಗಳಲ್ಲೂ ಜನತೆ ಒಗ್ಗಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಇನ್ನು ಕ್ರಿಸ್ಮಸ್ ಕ್ರಿಶ್ಚಿಯನ್ ಗಳಿಗೆ ಸೀಮಿತವಲ್ಲ;  ಸಾರ್ವಜನಿಕವಾಗಿ ಕೇಕ್ ಕತ್ತರಿಸಿ ಸಂಭ್ರಮ. ರಂಜಾನ್ ತಿಂಗಳಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವಾಗ ವೃತದಲ್ಲಿರುವ ಮುಸ್ಲಿಂ ಬಾಂಧವರಿಗೆ ಸಮಯ ಅನುಕೂಲವಾಗುವ ಹಾಗೆ ನೋಡಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚಿನ ಬಾಂಧವ್ಯ ಬೇಕೆ?

ಬಂಧುಗಳಿಗಿಂತ ನೆರೆಕರೆಯವರನ್ನು ಕುಟುಂಬದವರಂತೆ ಕಾಣುವ ಪ್ರದೇಶಗಳು ಹಲವು.

ರಕ್ತದಾನದಲ್ಲಿ ಯುವ ಜನತೆ ಒಂದು ಹೆಜ್ಜೆ ಮುಂದಿಟ್ಟಿದೆ ಎಂದರೆ ತಪ್ಪಾಗಲಾರದು. ಯಾವ ಜಾತಿಯವನೇ ಆಗಲಿ, ರಕ್ತ ಬೇಕೆಂದಾಗ ಯಾರೂ ಜಾತಿ ಕೇಳಲಾರರು. ಆಪತ್ಕಾಲದಲ್ಲಿ ಧಮ೯ ನೋಡದೆ ಸಹಾಯ ಹಸ್ತ ಚಾಚುವ ಯುವ ಜನ ಸಂಘಟನೆಗಳ ಸೇವೆ ಮೆಚ್ಚತಕ್ಕದ್ದು.

ಇತ್ತೀಚೆಗೆ ಮಾಧ್ಯಮಗಳಲ್ಲಿ ”ಪೊದಿಚೋರು ” ಬಗ್ಗೆ ಕೇಳಿರಬಹುದಲ್ಲವೆ? ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ, ಆಶ್ರಿತರಿಗೆ, ಕೆಲಸಗಾರರಿಗೆ ಮನೆ – ಮನೆಗಳಿಂದ ಆಹಾರದ ಪೊಟ್ಟಣ ಸಂಗ್ರಹಿಸಿ ನೀಡುವ ಈ ಯೋಜನೆ ಜನಮೆಚ್ಚುಗೆಗೆ ಪಾತ್ರವಾಗಿರುವುದು. ಅದನ್ನು ಪಡೆಯುವ ಯಾರೂ ಇದು ಯಾವ ಮನೆಯಿಂದ ಬಂದಿದೆ ಎಂದು ಕೇಳುವುದಿಲ್ಲ. ಎಲ್ಲಾ ಧರ್ಮಗಳ ಜನರು ಸಂತೋಷದಿಂದ ಸ್ವೀಕರಿಸುತ್ತಾರೆ. ಈ ರೀತಿಯ ಸಹಕಾರದ ನಾಡನ್ನು ಇನ್ನೆಲ್ಲಿ ಕಾಣಲು ಸಾಧ್ಯ?

ದೇವಾಲಯ ಪ್ರವೇಶಿಸಿದುದಕ್ಕೆ ಬಡಿಯುವ, ನೀರು ಕುಡಿದುದಕ್ಕೆ ಹೊಡಿಯುವ, ಪ್ರೇಮಿಸಿದುದಕ್ಕೆ ಕೊಲ್ಲುವ ವಾರ್ತೆಗಳನ್ನು ದೇಶದ ಮೂಲೆಗಳಿಂದ ಕೇಳುವಾಗ, ಜಾತಿ – ಧರ್ಮ  ಕೇಳದೆ ವಿವಾಹಿತರಾಗುವ ಯುವ ಜೋಡಿಗಳನ್ನು ಕೇರಳದಲ್ಲಿ ಕಾಣಬಹುದು. ಅನ್ಯಧರ್ಮಗಳ ಒಳಗಿನ ಸಂಬಂಧ ಇತ್ತೀಚೆಗೆ ಸರ್ವೇ ಸಾಮಾನ್ಯವಾಗುತ್ತಿದೆ.

ಜನರಲ್ಲಿ ಕೋಮು ಭಾವನೆ ಬೆಳೆಸುವ ಕೆಲವು ದುಷ್ಠ ಶಕ್ತಿಗಳು ಅಲ್ಲಲ್ಲಿ ತಾಂಡವವಾಡುತ್ತಿದ್ದರೂ, ರಾಜ್ಯದ ಜನತೆ ಅದನ್ನು ಮೀರಿ ಮುಂದುವರಿಯುತ್ತಿದ್ದಾರೆ.

ನನಗೆ ಹೆಮ್ಮೆ ಪಡಲು ಇಷ್ಟು ಸಾಕಲ್ಲವೇ? ಮುಂದಿನ ದಿನಗಳಲ್ಲಿ ನನ್ನ ಅನುಭವಗಳನ್ನು ಲಘು ಬರಹಗಳಾಗಿ ತಮ್ಮೊಂದಿಗೆ ಹಂಚಿಕೊಳ್ಳುವೆ. ಓದುವಿರಾ? ತಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ.

ಶೋಭಲತಾ.ಸಿ.

ಕಾಸರಗೋಡು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!