• Wed. May 8th, 2024

PLACE YOUR AD HERE AT LOWEST PRICE

ಕೆಜಿಎಫ್:ನೂರು ವರ್ಷಗಳ ಬಳಿಕ ಒಬ್ಬ ವ್ಯಕ್ತಿಯನ್ನು ನಾವು ಸ್ಮರಣೆ ಮಾಡಿಕೊಳ್ಳುತ್ತಿದ್ದೇವೆ ಎಂದರೆ ಆ ವ್ಯಕ್ತಿಯ ಪರಂಪರೆ ಮತ್ತು ಆ ವ್ಯಕ್ತಿ ಈ ನಾಡಿಗೆ ಸಲ್ಲಿಸಿದ ಸೇವೆ ಮತ್ತು ಹಿರಿತನವನ್ನು ಎತ್ತಿ ತೋರಿಸುತ್ತದೆ ಎಂದು ನಾಡೋಜ ಡಾ.ಜಿ.ನಾರಾಯಣ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಂ.ನರಸಿಂಹ ಹೇಳಿದರು.

ನಗರದ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಕನ್ನಡ ಸಂಘ, ಕನ್ನಡ ಶಕ್ತಿ ಕೇಂದ್ರ, ಸಿರಿಗನ್ನಡ ವೇದಿಕೆ ಹಾಗೂ ಜೈನ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಿರಿಯ ಗಾಂಧಿವಾದಿ ನಾಡೋಜ ಡಾ.ಜಿ.ನಾರಾಯಣ ರವರ ಜನ್ಮ ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಯೋಜನಾ ಬ್ರಹ್ಮ, ನಾಡೋಜ ಡಾ.ಜಿ.ನಾರಾಯಣ ರವರ ಸ್ಮರಣೆ ಮಾಡುತ್ತಿರುವುದು ನಮ್ಮ ಪುಣ್ಯ, ನಾಡೋಜ ಜಿ.ನಾರಾಯಣ ರವರಿಗೆ ಯುವಕರನ್ನು ಕಂಡರೆ ಬಹಳ ಇಷ್ಟವಾದ ವಿಷಯವಾಗಿತ್ತು. ಯುವಕರನ್ನು ಒಂದೆಡೆ ಸೇರಿಸಿ ಸಂಘಟನೆ ಮಾಡುವುದು ತಮ್ಮ ಆದ್ಯ ಕರ್ತವ್ಯವೆಂದು ಅವರು ಭಾವಿಸಿದ್ದರು.

ಕನ್ನಡದ ಕಾರ್ಯಕ್ರಮಗಳನ್ನು ನಡೆಸುವ ವೇಳೆ ವೇದಿಕೆ ಮೇಲೆ ಮತ್ತು ಮುಂಭಾಗದಲ್ಲಿ ಇರುತ್ತಿದ್ದಂತಹ ಹಿರಿಯರು ಮತ್ತು ಯುವಕರನ್ನು ಒಂದೆಡೆ ಕಲೆ ಹಾಕಿ ಕನ್ನಡದ ಕೈಂಕರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಂತಹ ಚಾಣಾಕ್ಷತನ ನಾರಾಯಣರವರದ್ದಾಗಿತ್ತು.

ಇಲ್ಲಿಯವರೆಗೆ ನಾಡೋಜ ಜಿ.ನಾರಾಯಣರವರ ಜನ್ಮ ಶತಮಾನೋತ್ಸವಕ್ಕೆ ಸಂಬಂಧಿಸಿದಂತೆ ಇಡೀ ಕರ್ನಾಟಕದಾದ್ಯಂತ ೧೩ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಮೊದಲ ಕಾರ್ಯಕ್ರಮವನ್ನು ನಾರಾಯಣರವರ ಹುಟ್ಟು ಜಿಲ್ಲೆಯಾದ ಮಂಡ್ಯದಲ್ಲಿ ಕಳೆದ ವರ್ಷ ಸೆಪ್ಟಂಬರ್ ತಿಂಗಳಲ್ಲಿ ನಡೆಸಲಾಯಿತು.

ಬಳಿಕ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಟಿಯಲ್ಲಿ ಅವರ ನೆನಪನ್ನು ಮಾಡಿಕೊಳ್ಳಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕ್ಯಾಥೋಲಿಕ್ ಕ್ರೆಸ್ಟ್ ಸಂಘದ ಆಶ್ರಯದಲ್ಲಿ ಹೀಗೆ ಸರಣಿ ಕಾರ್ಯಕ್ರಮಗಳು ನಡೆದು ಇಂದು ೧೪ನೇ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಮುಂದಿನ ಸೆಪ್ಟಂಬರ್ ೨೪ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಿನವಿಡೀ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿ.ನಾರಾಯಣ ರವರು ಸಾಹಿತ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಒಂದು ದಿಟ್ಟ ನಿಲುವನ್ನು ಕೊಟ್ಟಂತಹವರಾಗಿದ್ದು, ಯೋಜನಾಬದ್ಧವಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಸಾಬೀತುಪಡಿಸಲು ದ್ವೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಡೀ ಕರ್ನಾಟಕ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡದ ರಥವನ್ನು ಎಳೆದಂತಹ ಮೇರು ವ್ಯಕ್ತಿಯಾಗಿದ್ದಾರೆ.

ವಿ.ಕೃ.ಗೋಕಾಕ್, ರಂ.ಶ್ರೀ.ಮುರಳಿ, ಜಿ.ಪಿ.ರಾಜರತ್ನಂ, ಜಿ.ವೆಂಕಟಸುಬ್ಬಯ್ಯ, ಪ್ರೊ.ಎಲ್.ಶೇಷಗಿರಿರಾವ್ ಇಂತಹವರನ್ನೆಲ್ಲ ಕಲೆಹಾಕಿ ಇಡೀ ಕರ್ನಾಟಕದಾದ್ಯಂತ ಸುತ್ತಾಡಿ, ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳನ್ನು ರಚಿಸಿ, ಕನ್ನಡದ ತೇರನ್ನು ಎಳೆಯುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ನೆಲೆಯನ್ನು ಒದಗಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಲಾಂಛನವನ್ನು ಒದಗಿಸಿಕೊಟ್ಟವರು, ನಾವಿಂದು ಹಾಡುತ್ತಿರುವ ನಾಡಗೀತೆಯನ್ನು ಬರೆದಂತಹವರು ಕುವೆಂಪು ರವರಾಗಿದ್ದು, ಅವರ ಮನೆಗೆ ಹೋಗಿ ನಾಡಗೀತೆಯ ವೈಶಿಷ್ಟ್ಯತೆಯವನ್ನು ತಿಳಿದುಕೊಂಡು, ಅವರು ಬರೆದಿರುವುದಕ್ಕೂ, ತಾವು ಅಚ್ಚುಹಾಕಿರುವುದಕ್ಕೂ ಏನಾದರೂ ವ್ಯತ್ಯಾಸಗಳಿವೆಯೆ ತಿಳಿಸಿ ಎಂದು ಹೇಳಿ, ನಾಡಗೀತೆಗೆ ಅಧಿಕೃತ ಮುದ್ರೆಯನ್ನು ಹಾಕಿದಂತಹವರು ನಾರಾಯಣರವರಾಗಿದ್ದಾರೆ ಎಂದರು.

ಸುಮಾರು ಒಂಭತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅತಿ ಹೆಚ್ಚು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ, ಹೊರ ನಾಡಿನಲ್ಲಿ ಮತ್ತು ಮಹಿಳಾ ಲೇಖಕಿಯರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ನಾಡೋಜ ಪ್ರತಿಷ್ಟಾನದ ಅಧ್ಯಕ್ಷ ಗೋಪಾಲಕೃಷ್ಣ, ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ, ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜು, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ, ಉಪಾಧ್ಯಕ್ಷ ತ್ಯಾಗರಾಜು, ಕನ್ನಡ ಶಕ್ತಿ ಕೇಂದ್ರದ ಶೇಖರಪ್ಪ, ಸಿರಿಗನ್ನಡ ವೇದಿಕೆಯ ರಾಮಚಂದ್ರಪ್ಪ, ಜೈನ್ ಕಾಲೇಜಿನ ಪ್ರಾಂಶುಪಾಲೆ ರೇಖಾ ಸೇಥಿ ಮೊದಲಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!