• Sun. May 5th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲೂಕಿನ ಪ್ರತಿಷ್ಠಿತ ದೊಡ್ಡೂರು ಕರಪನಹಳ್ಳಿ ಗ್ರಾಪಂ ಈ ಬಾರಿ ಕೈವಶ ಆಗುವುದರ ಮೂಲಕ ತಾಲೂಕಿನಲ್ಲಿ ಬುಧವಾರ ನಡೆದ ಆರು ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪೈಕಿ ೪ರಲ್ಲಿ ಕಾಂಗ್ರೆಸ್ ಹಾಗೂ ೨ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ತಾಲೂಕಿನ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯು ಕಳೆದ ಅವಧಿಯಂತೆ ಈ ಬಾರಿಯೂ ಸಹ ಕಾಂಗ್ರೆಸ್ ಬೆಂಬಲಿತರೇ ಹೆಚ್ಚಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ತಾಲೂಕಿನ ಸೂಲಿಕುಂಟೆ, ಹುಲಿಬೆಲೆ ಹಾಗೂ ಮಾಗೊಂದಿ ಗ್ರಾಪಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ-ಜೆಡಿಎಸ್ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ.

ಈ ಹಿನ್ನಲೆಯಲ್ಲಿ ಈ ಮೂರು ಗ್ರಾಪಂಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನುಳಿದ ದೊಡ್ಡೂರು ಕರಪನಹಳ್ಳಿ, ದೊಡ್ಡವಲಗಮಾದಿ ಹಾಗೂ ಹುನ್ಕುಂದ ಗ್ರಾಪಂಗಳಲ್ಲಿ ಚುನಾವಣೆ ನಡೆದಿದ್ದು, ಇವುಗಳಲ್ಲಿ ಒಂದರಲ್ಲಿ ಕಾಂಗ್ರೆಸ್ ಹಾಗೂ ಎರಡಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಚುನಾವಣೆಯನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ.

ಇಡೀ ಜಿಲ್ಲೆಯ ೧೫೬ ಗ್ರಾಪಂಗಳ ಪೈಕಿ ದೊಡ್ಡೂರು ಕರಪನಹಳ್ಳಿ ಗ್ರಾಪಂ ೩೦ ಸದಸ್ಯರನ್ನು ಹೊಂದಿ ದೊಡ್ಡ ಗ್ರಾಪಂ ಆಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಸದಸ್ಯರು ಗೆದ್ದಿದ್ದರೂ ಅಂತಿಮವಾಗಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯು ರೋಚಕ ಗೆಲುವು ಸಾಧಿಸಿತ್ತು.

ಇದರಿಂದ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಸದಸ್ಯ ಜಿ.ಆರ್.ಗೋಪಾಲರೆಡ್ಡಿ ದೊಡ್ಡ ಸವಾಲನ್ನೇ ಎದುರಿಸಿದ್ದರಿಂದ ಹಾಗೂ ತಮ್ಮ ಚಾಣಾಕ್ಷದಿಂದ ದೊಡ್ಡೂರು ಕರಪನಹಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್ ಪಕ್ಷವು ಈ ಬಾರಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ೨೦ ಮತಗಳಿಂದ ಜಯಶೀಲರಾಗಿದ್ದಾರೆ. ಬಿಜೆಪಿ ಬೆಂಬಲಿತ ಕೆ.ಹೆಚ್.ಮುನಿಯಪ್ಪ ೧೦ ಮತಗಳನ್ನು ಪಡೆದು ಸೋತಿದ್ದಾರೆ.

ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುಲೋಚನಾ ೧೯ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ. ಬಿಜೆಪಿ ಬೆಂಬಲಿತ ಶೈಲಾವತಿ ೧೧ಮತಗಳನ್ನು ಪಡೆದು ಸೋತಿದ್ದಾರೆ. ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಕಾರ‍್ಯನಿರ್ವಹಿಸಿದರು. ಪಿಡಿಒ ಭಾಸ್ಕರ್ ಹಾಜರಿದ್ದರು.

 ಕಾಂಗ್ರೆಸ್ ಭದ್ರಕೋಟೆಯಾಗಿರುವ ತಾಲೂಕಿನ ಕಸಬಾ ಹೋಬಳಿಯ ಸೂಲಿಕುಂಟೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಗುಣ ಆರ್.ವಿ.ಮಂಜುನಾಥ್ ಹಾಗೂ ಉಪಾಧ್ಯಕ್ಷೆಯಾಗಿ ನಾಗಮ್ಮ ಮಂಜುನಾಥ್ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪಂಚಾಯತ್ ರಾಜ್ ಇಲಾಖೆಯ ಎಇಇ ಹೆಚ್.ಡಿ.ಶೇಷಾದ್ರಿ ಕಾರ‍್ಯನಿರ್ವಹಿಸಿದರು. ಪಿಡಿಒ ಸಿ.ಶಂಕರ್ ಹಾಜರಿದ್ದರು.

ತಾಲೂಕಿನ ಹುಲಿಬೆಲೆ ಗ್ರಾಪಂನ ನೂತನ ಅಧ್ಯಕ್ಷರಾಗಿ ಆಶಾರಾಣಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಮುಖಂಡ ಹಾಗೂ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಚಿಕ್ಕಹೊಸಹಳ್ಳಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಗ್ರಾಪಂನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಒಂದು ಸದಸ್ಯದ ವ್ಯತ್ಯಾಸದಲ್ಲಿ ಬಲವಿದ್ದರೂ ಸಹ ಗ್ರಾಪಂ ಅಧ್ಯಕ್ಷ ಸ್ಥಾನವು ಎಸ್ಸಿ ಮಹಿಳೆಗೆ ಮೀಸಲಿರಿಸಿದ್ದರಿಂದ ಹುಲಿಬೆಲೆ ಗ್ರಾಪಂ ವ್ಯಾಪ್ತಿಯಲ್ಲಿ ಗೆದ್ದಿರುವ ಆರು ಎಸ್ಸಿ ಮಹಿಳೆಯರು ಕಾಂಗ್ರೆಸ್ ಬೆಂಬಲಿತರಾಗಿದ್ದರು. ಬಿಜೆಪಿ ಬೆಂಬಲಿತರು ಯಾರೂ ಇಲ್ಲದ ಕಾರಣ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್‌ಗೆ ಒಲದಿದೆ. ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆ ಎಇಇ ರವಿ ಕಾರ‍್ಯನಿರ್ವಹಿಸಿದರು. ಪಿಡಿಒ ವಿ.ಚಿತ್ರಾ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!