• Sun. Apr 28th, 2024

PLACE YOUR AD HERE AT LOWEST PRICE

‘ಗುಳ್ಟು’ ಖ್ಯಾತಿಯ ನವೀನ್ ಶಂಕರ್ ನಟನೆಯ ‘ಕ್ಷೇತ್ರಪತಿ’ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮುಂದಿನ ವಾರ ಸಿನಿಮಾ ತೆರೆಗಪ್ಪಳಿಸಲಿದೆ. ಉತ್ತರ ಕರ್ನಾಟಕ ಹಿನ್ನೆಲೆಯ ಈ ಚಿತ್ರಕ್ಕೆ ರೈತನ ನೋವು ನಲಿವಿನ ಕಥೆ ಇದೆ. ದೇಶದ ಬೆನ್ನೆಲುಬು ಎನ್ನುವ ರೈತನ ಇಂದಿನ ಸ್ಥಿತಿಗತಿ ಹೇಗಿದೆ? ಎನ್ನುವುದನ್ನು ಚಿತ್ರದಲ್ಲಿ ಚರ್ಚಿಸುವ ಪ್ರಯತ್ನ ನಡೆದಿದೆ.

ಶ್ರೀಕಾಂತ್ ಕಟಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಮೊದಲ ನೋಟದಲ್ಲೇ ಟ್ರೈಲರ್ ಗಮನ ಸೆಳೆದಿದೆ. ಜನರ ಬದುಕಿಗೆ ಹತ್ತಿರವಾಗುವಂತಹ ಕಥೆ ಚಿತ್ರದಲ್ಲಿದೆ. ರವಿ ಬಸ್ರೂರ್ ಮ್ಯೂಸಿಕ್ & ಮೂವೀಸ್ ಅರ್ಪಿಸುತ್ತಿರುವ, ಆಶ್ರಗ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕ್ಷೇತ್ರಪತಿ’ ಚಿತ್ರ ಪೊಲಿಟಿಕಲ್ ಡ್ರಾಮ ಕಥಾಹಂದರ ಹೊಂದಿದೆ. ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್ ಸಹ ನಿರ್ಮಾಣವಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.

‘ಕ್ಷೇತ್ರಪತಿ’ ಚಿತ್ರದಲ್ಲಿ ಉತ್ತರ ಕರ್ನಾಟಕದ ಸೊಗಡಿದೆ. ಸಾಮಾನ್ಯನೊಬ್ಬನ ಹೋರಾಟದ ಕತೆಯಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡುವ ರೈತನ ಕಥೆ, ವ್ಯಥೆ ಚಿತ್ರದಲ್ಲಿದೆ. ಉತ್ತರ ಕರ್ನಾಟಕದ ಭಾಗದಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಶ್ರೀಕಾಂತ್ ಹಾಗೂ ನವೀನ್ ಇಬ್ಬರು ಉತ್ತರ ಕರ್ನಾಟಕ ಮೂಲದವರು. ಹಾಗಾಗಿ ಅಲ್ಲಿನ ಕಥೆಯನ್ನೇ ತೆರೆಗೆ ತಂದಿದ್ದಾರೆ.

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನವೀನ್ ಶಂಕರ್, ‘ಗುಲ್ಟು’ ಚಿತ್ರದ ನಂತರ ನಿರ್ದೇಶಕ ಶ್ರೀಕಾಂತ್ ಕಟಗಿ, ಈ ಚಿತ್ರದ ಕಥೆ ಹೇಳಿದರು. ನಾನು ಉತ್ತರ ಕರ್ನಾಟಕದವನೇ ಆಗಿರುವುದರಿಂದ ಅಲ್ಲಿನ ಪರಿಸರದ ಚಿತ್ರ ಮಾಡುವ ಆಸೆಯಿತ್ತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.

ಆದರೆ ಹಣ ಹೂಡಲು ನಿರ್ಮಾಪಕರು ಇರಲಿಲ್ಲ. ನಾವೇ ಒಂದೊಂದು ಲಕ್ಷ ಹಾಕಿ ಸಿನಿಮಾ ಆರಂಭ ಮಾಡಿದ್ದೆವು. ಆನಂತರ ಸಾಕಷ್ಟು ನಿರ್ಮಾಪಕರು ನಮ್ಮ ಜೊತೆಯಾದರು. ಆಗಷ್ಟೇ “ಕೆ ಜಿ ಎಫ್” ಬಿಡುಗಡೆಯಾಗಿತ್ತು. ರವಿ ಬಸ್ರೂರ್ ಅವರ ಬಳಿ ಸಂಗೀತ ಸಂಯೋಜನೆ ಮಾಡಿಸಬೇಕೆಂಬ ಇರಾದೆ ಇತ್ತು. ಅವರು ಒಪ್ಪಿಕೊಂಡರು. ಹೀಗೆ ಆರಂಭವಾದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ” ಎಂದರು.

ನಿರ್ದೇಶಕ ಶ್ರೀಕಾಂತ್ ಕಟಗಿ ಮಾತನಾಡಿ “ನಾನು ಉತ್ತರ ಕರ್ನಾಟಕದ ಮೂಲದವನು. ಅಲ್ಲಿನ ಹಾಗೂ ಇಡೀ ದೇಶದಲ್ಲೇ ಇರುವ ಸಾಮಾಜಿಕ ಸಮಸ್ಯೆಗಳನ್ನ ಆಧರಸಿ ಕಥೆ ಮಾಡಿಕೊಂಡೆ. ನವೀನ್ ಶಂಕರ್ ಅವರಿಗೆ ಕಥೆ ಹೇಳಿದೆ. ಒಪ್ಪಿಕೊಂಡರು. ಉತ್ತರ ಕರ್ನಾಟಕದ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ನಮ್ಮ ಚಿತ್ರ ಅಗಸ್ಟ್ 18 ತೆರೆಗೆ ಬರಲಿದೆ ಹರಸಿ” ಎಂದು ಮನವಿ ಮಾಡಿದ್ದಾರೆ.

KGF ಚಿತ್ರದಲ್ಲಿ ರಾಕಿಭಾಯ್ ತಾಯಿ ಪಾತ್ರದಲ್ಲಿ ನಟಿಸಿದ್ದ ಅರ್ಚಾನಾ ಜೋಯಿಸ್ ‘ಕ್ಷೇತ್ರಪತಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. “ಪತ್ರಕರ್ತೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಟರಾದ ರಾಹುಲ್ ಐನಾಪುರ, ಹರ್ಷ್ ಅರ್ಜುನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

KGF ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವೈ. ವಿ. ಬಿ ಶಿವಸಾಗರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ನರಸಿಂಹ ಸಾಹಸ ನಿರ್ದೇಶನ ಹಾಗೂ ಜೀವನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!