• Fri. May 3rd, 2024

PLACE YOUR AD HERE AT LOWEST PRICE

‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು ಹೇಳಿಕೆ ನೀಡಿದ್ದ ನಟ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿಡಿಯೋ ಸಂದೇಶದಲ್ಲಿ ಮಾತನಾಡುತ್ತಿದ್ದ ವೇಳೆ ಉಪೇಂದ್ರ ಅವರು, ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು ಗಾದೆ ಮಾತನ್ನು ಬಳಸಿದ್ದರು. ಆ ಮೂಲಕ ದಲಿತ ಸಮುದಾಯದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚನೆ ಮಾಡಿದ್ದ ನಟ ಉಪೇಂದ್ರ, ‘ಬಾಯಿ ತಪ್ಪಿನಿಂದ ಗಾದೆ ಮಾತು ಬಂದಿದೆ. ಇದರಿಂದ ಹಲವರ ಭಾವನೆಗೆ ಧಕ್ಕೆಯಾಗಿರುವುದನ್ನು ಗಮನಿಸಿ ತಕ್ಷಣ ಲೈವ್ ವಿಡಿಯೋವನ್ನು ಡಿಲೀಟ್ ಮಾಡಿದ್ದೇನೆ. ಮಾತಿಗೆ ಕ್ಷಮೆ ಇರಲಿ’ ಎಂದು ಹೇಳಿದ್ದರು.

ಈ ಎಲ್ಲ ಬೆಳವಣಿಗೆಗಳ ನಡುವೆ ಎಫ್‌ಐಆರ್ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಮಧುಸೂಧನ್ ಎಂಬವರು ಈ ಸಂಬಂಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ತನ್ನ ವಿವಾದಾತ್ಮಕ ಹೇಳಿಕೆಯ ಬಳಿಕ ಕ್ಷಮೆ ಕೇಳಿದ್ದ ಉಪೇಂದ್ರ, ಆ ಬಳಿಕ ದಾಖಲಾದ ಎಫ್‌ಐಆರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ಯಾಕೆ ಇಷ್ಟೊಂದು ದ್ವೇಷ’ ಎಂದು ಕೇಳಿದ್ದಾರೆ.

‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು ಹೇಳಿಕೆ ನೀಡಿದ್ದ ನಟ ಉಪೇಂದ್ರ ವಿರುದ್ಧ ಜಾತಿನಿಂದನೆ ಆರೋಪದ ಮೇಲೆ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಆ ಬಳಿಕ ಟ್ವೀಟ್ ಮಾಡಿರುವ ಅವರು, ‘ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ…ಇದನ್ನು ಅನುಭವಿಸಿ ಬೆಳೆದ ನಾನು, ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ? ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು ? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ?’ ಎಂದು ಕೇಳಿದ್ದರು.

‘ಮೊದಲ ವಾಕ್ಯವೇ ನಿಮ್ಮ ಅಹಂಕಾರ ತೋರಿಸುತ್ತಾ ಇದೆ. ನಿಮ್ಮ ನಂತರ ಹುಟ್ಟಿದವರು ನಿಮ್ಮನ್ನು ಪ್ರಶ್ನಿಸುವ ಹಾಗೆ ಇಲ್ಲ ಎಂದಾಯ್ತು. ಹಾಗೆ ನಿಮ್ಮ ಸಿನೆಮಾ ಕೂಡ ನಿಮ್ಮ ನಂತರ ಹುಟ್ಟಿದವರು ನೋಡುವುದು ಬೇಡ ಎಂದು ಬರೆಯಿರಿ’ ಎಂದು ಉಪೇಂದ್ರ ಫೇಸ್‌ಬುಕ್‌ನಲ್ಲೂ ಹಾಕಿರುವ ಈ ಪೋಸ್ಟ್‌ಗೆ ಚರಣ್ ಐವರ್ನಾಡು ಎಂಬವರು ಪ್ರತಿಕ್ರಿಯಿಸಿದ್ದಾರೆ.

‘ನಾವು ಈಗಲೂ ನೋವು ಅನುಭವಿಸುತ್ತಿದ್ದೇವೆ ಸರ್. ಹೊಟ್ಟೆ ತುಂಬ ಉಂಡರು ಕೈ ತುಂಬಾ ಸಂಪಾದಿಸಿದರೂ ಅಸ್ಪೃಶ್ಯತೆಯ ನೋವು ನಮ್ಮನ್ನು ಬಿಡುತ್ತಿಲ್ಲ. ಯಾರು ಯಾವ ರೂಪದಲ್ಲಿ, ಯಾಕೆ ಹೀಗೆ ನಮ್ಮ ವಿರುದ್ಧ ದ್ವೇಷ? ನಮ್ಮ ವಿರುದ್ಧ ತಾರತಮ್ಯ? ನಮ್ಮ ಜಾತಿ ಮಾಡಿರುವ ತಪ್ಪಾದರೂ ಏನು, ನಾವು ದಲಿತ ಜಾತಿಗಳಲ್ಲಿ ಹುಟ್ಟಿದ್ದೇ ತಪ್ಪಾ? ಹೀಗೆ ನಮಗೆ ನಾವೇ ನಿತ್ಯ ಕೇಳಿಕೊಳ್ಳುತ್ತ ಬದುಕುತ್ತಿದ್ದೇವೆ.

ನಿಮ್ಮಂಥ ಸೆಲೆಬ್ರಿಟಿಗಳು ಹೀಗೆ… ಇನ್ನೂ ಸಾಮಾನ್ಯ ಜನ ನಮ್ಮ ವಿರುದ್ಧ ಯಾವ್ಯಾವ ರೀತಿಯಲ್ಲಿ ನೋವು ಕೊಡುತ್ತಿರಬೇಡ? ಬಹುಶಃ ಆಕ್ರೋಶದ ಬಂಡೆ ಒಮ್ಮೆ ಸಿಡಿದರೆ ಇಡೀ ಭೂಮಂಡಲವೇ ನಾಶವಾದೀತು! ಅಷ್ಟು ನೋವು ನಿತ್ಯ ನಮಗೆ ಆಗುತ್ತಿದೆ. ಹಿಂದೂಗಳು ಇದನ್ನು ಅರ್ಥಮಾಡಿಕೊಳ್ಳಬೇಕು.’ ಎಂದು ರಘೋತ್ತಮ ಹೊ.ಬ. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಆಡಿರುವ ಮಾತು ಅದೆಷ್ಟೇ ತೀಕ್ಷ್ಣವಾಗಿ ಆಡಿದ ಮಾತುಗಳೇ ಆಗಿರಲಿ, ಆದರೆ ತಪ್ಪು ಅರಿತು ಕ್ಷಮೆ ಕೇಳಬೇಕಾದದ್ದು ಮನುಷ್ಯ ಗುಣ ಅದನ್ನು ನೀವು ಕೇಳಿ ಇನ್ನೂ ಎತ್ತರಕ್ಕೇರಿದ್ದೀರಿ,ತಪ್ಪನ್ನು ಮನ್ನಿಸಬೇಕಾದದ್ದು ದೈವ ಗುಣ ಅಂತಹ ದೈವ ಗುಣವನ್ನು ತೋರಿಸಿ ದೊಡ್ಡವರಾಗಲು ಅವಕಾಶ ಸಿಕ್ಕರೂ ಸಹ ಮನ್ನಿಸಲು ಮನಸ್ಸು ಮಾಡದೇ ಇರುವುದೇ ವಿಪರ್ಯಾಸ’ ಎಂದು ಇನ್ನು ಕೆಲವರು ಉಪೇಂದ್ರ ಪರವಾಗಿ ಮಾತನಾಡಿದ್ದಾರೆ.

ಒಟ್ಟಿನಲ್ಲಿ ತಮ್ಮ ಪ್ರಜಾಕೀಯ ಸಂಸ್ಥಾಪನೆಯ ದಿನದ ಅಂಗವಾಗಿ ಶುಭಾಶಯ ತಿಳಿಸಲು ಮಾಡಿದ್ದ ಫೇಸ್‌ಬುಕ್ ಲೈವ್ ವಿಡಿಯೋ ವೇಳೆ ಆಡಿದ್ದ ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂಬ ಹೇಳಿಕೆಯೇ ಈಗ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರಿಗೆ ಮುಳುವಾಗಿದೆ. ಪಕ್ಷದ ಕಾರ್ಯವೈಖರಿಗಳ ಬಗ್ಗೆ ದೂರುವವರನ್ನು ಉಲ್ಲೇಖಿಸುವ ವೇಳೆ ಉಪೇಂದ್ರ ಈ ಮಾತು ಆಡಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!