• Fri. May 3rd, 2024

PLACE YOUR AD HERE AT LOWEST PRICE

‘‘ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ’’ ಎಂಬ ಪ್ರಧಾನಿ ನರೇಂದ್ರ ಮೋದಿ ಕರೆ ಅತ್ಯಂತ ಪ್ರಚೋದನಕಾರಿಯಾದುದು ಮಾತ್ರವಲ್ಲ ಸಂವಿಧಾನ ವಿರೋಧಿಯಾದುದು. ಈ ಪ್ರಚೋದನಕಾರಿ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಟ್ವೀಟ್‌ ಮಾಡಿ, “ವಿಷಯ-ವಿದ್ಯಮಾನಗಳೇನೇ ಇರಲಿ, ಯಾರಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ. ಇದರ ಬದಲಿಗೆ ತಕ್ಕ ಪ್ರತ್ಯುತ್ತರ ನೀಡಿ ಎಂದು ಜನರನ್ನು ಪ್ರಚೋದಿಸುವುದು, ಕಾನೂನನ್ನು ಕೈಗೆತ್ತಿಕೊಳ್ಳಲು ನೀಡುವ ಕರೆಯಾಗುತ್ತದೆ. ಇದನ್ನು ಪ್ರಧಾನಿಯವರು ಮಾಡಿದರೂ ಅಪರಾಧವೇ” ಎಂದಿದ್ದಾರೆ.

“ನರೇಂದ್ರ ಮೋದಿ ಅವರು ಕೇವಲ ಬಿಜೆಪಿಯ ನಾಯಕರಲ್ಲ, ಅವರು ಸಾಂವಿಧಾನಿಕ ಹುದ್ದೆಯಾದ ಪ್ರಧಾನಮಂತ್ರಿಯ ಕುರ್ಚಿಯಲ್ಲಿ ಕುಳಿತಿರುವವರು. ಹೀಗಿರುವಾಗ ಅವರ ನಡೆ-ನುಡಿ ಮತ್ತು ಕ್ರಿಯೆ-ಪ್ರತಿಕ್ರಿಯೆ ಆ ಸ್ಥಾನದ ಘನತೆ-ಗೌರವ ಮತ್ತು ಜವಾಬ್ದಾರಿಗಳಿಗೆ ತಕ್ಕಂತೆ ಇರಬೇಕಾಗಿರುವುದು ರಾಜಧರ್ಮವಾಗಿದೆ” ಎಂದು ಹೇಳಿದ್ದಾರೆ.

“ನರೇಂದ್ರ ಮೋದಿ ಅವರು ಇನ್ನೂ ಆರ್.ಎಸ್.ಎಸ್ ನ ತನ್ನ ಪೂರ್ವಾಶ್ರಮದ ಗುಂಗಿನಲ್ಲಿದ್ದಂತೆ ಕಾಣುತ್ತಿದೆ. ತಾನು ಈ ದೇಶದ 140 ಕೋಟಿ ಜನರಿಗೂ ಪ್ರಧಾನಿ ಎನ್ನುವುದನ್ನು ಮರೆತಂತಿದೆ. ಪ್ರಧಾನಿಯವರ ಇಂತಹ ಹೇಳಿಕೆಗಳಿಂದ ಪ್ರಚೋದಿತರಾಗಿ ಅವರದ್ದೇ ಪಕ್ಷ ಮತ್ತು ಸಂಘಟನೆಯ ಅನೇಕ ನಾಯಕರು ಹಿಂಸಾಚಾರಕ್ಕೆ ಕರೆ ನೀಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ” ಎಂದಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ನಡವಳಿಕೆಗಳನ್ನು ಗಮನಿಸಿದರೆ ಅವರ ಈಗಿನ ಹೇಳಿಕೆಗಳು ಅಚ್ಚರಿ ಹುಟ್ಟಿಸುವುದಿಲ್ಲ. ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ನಡೆದುಕೊಂಡ ರೀತಿಯ ಬಗ್ಗೆ ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಅವರೇ ಅಸಮಾಧಾನ ವ್ಯಕ್ತಪಡಿಸಿ, ರಾಜಧರ್ಮ ಪಾಲಿಸಲು ಕರೆ ಕೊಟ್ಟಿದ್ದರು. ದಿವಂಗತ ವಾಜಪೇಯಿ ಅವರ ಆ ಬುದ್ದಿಮಾತನ್ನೇ ಈ ಸಂದರ್ಭದಲ್ಲಿ ಮೋದಿಯವರಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!