• Tue. Apr 30th, 2024

PLACE YOUR AD HERE AT LOWEST PRICE

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಕಳಪೆ ಪ್ರದರ್ಶನ ನೀಡಿ ಹೀನಾಯವಾಗಿ ಸೋತ ಕಾರಣ ಶ್ರೀಲಂಕಾದ ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರು ಸೋಮವಾರ(ನ.6) ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ್ದಾರೆ.

1996ರ ಶ್ರೀಲಂಕಾ ವಿಶ್ವಕಪ್‌ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಅವರನ್ನು ಮಂಡಳಿಯ ಹೊಸ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ರಣಸಿಂಗ್ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಇದಲ್ಲದೆ ಕ್ರೀಡಾ ಸಚಿವ ರೋಷನ್ ರಣಸಿಂಗ್ ಅವರು ಶ್ರೀಲಂಕಾ ಕ್ರಿಕೆಟ್‌ಗೆ ಮಧ್ಯಂತರ ಸಮಿತಿಯನ್ನು ರಚಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದ್ದ ದ್ವೀಪ ರಾಷ್ಟ್ರದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೆಲವು ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಜೊತೆಗೆ ವ್ಯಾಪಕ ಭ್ರಷ್ಟಾಚಾರ ಆರೋಪವು ಕೇಳಿ ಬರುತ್ತಿದೆ.

ಹೊಸ ಏಳು ಸದಸ್ಯರ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಮತ್ತು ಮಂಡಳಿಯ ಮಾಜಿ ಅಧ್ಯಕ್ಷರೂ ಇದ್ದಾರೆ.

ಮಂಡಳಿಯ ಎರಡನೇ ಅತ್ಯುನ್ನತ ಅಧಿಕಾರಿ, ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ನೀಡಿದ ಒಂದು ದಿನದ ನಂತರ ಹಳೆಯ ಮಂಡಳಿ ವಜಾಗೊಂಡು ಹೊಸ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.

ಕಳೆದ ವಾರ ಆತಿಥೇಯ ಭಾರತ ವಿರುದ್ಧ ಶ್ರೀಲಂಕಾವನ್ನು 302 ರನ್‌ಗಳ ವಿಶ್ವಕಪ್‌ನಲ್ಲಿ ಸೋಲಿಸಿದ ನಂತರ ರೋಷನ್ ರಣಸಿಂಘೆ ಅವರು ಇಡೀ ಮಂಡಳಿಯ ರಾಜೀನಾಮೆಗೆ ಸಾರ್ವಜನಿಕವಾಗಿ ಒತ್ತಾಯಿಸಿದರು.

ಗುರುವಾರ ಮುಂಬೈನಲ್ಲಿ ಭಾರತದ 358 ರನ್‌ಗಳನ್ನು ಬೆನ್ನಟ್ಟಿದ ಶ್ರೀಲಂಕಾ ಒಂದು ಹಂತದಲ್ಲಿ 14/6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ 55 ರನ್‌ಗಳಿಗೆ ಆಲೌಟ್ ಆಯಿತು. ಇದು ಏಕದಿನ ಮಾದರಿಯ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತಿ ಕಡಿಮೆ ಮೊತ್ತವಾಗಿದೆ.

ಈ ಸೋಲು ಶ್ರೀಲಂಕಾದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಶನಿವಾರದಂದು ಕೋಪಗೊಂಡ ಅಭಿಮಾನಿಗಳು ದೇಶೀಯ ಕ್ರಿಕೆಟ್ ಮಂಡಳಿ ಎದುರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿನ ಕ್ರಿಕೆಟ್ ಮಂಡಳಿ ಕಚೇರಿಯ ಹೊರಗೆ ಭದ್ರತಾ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿದೆ.

ಶ್ರೀಲಂಕಾ ಇಂದು (ಸೋಮವಾರ) ಬಾಂಗ್ಲಾದೇಶ ಎದುರು ಆಡಲಿದೆ. ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಲು ಉಳಿದ ಎರಡು ಪಂದ್ಯಗಳನ್ನು ಉತ್ತಮ ರನ್‌ ರೇಟ್‌ನೊಂದಿಗೆ ಗೆಲುವು ಸಾಧಿಸುವುದರ ಜೊತೆಗೆ ಟೂರ್ನಿಯ ಇತರ ಉಳಿದ ಪಂದ್ಯಗಳಲ್ಲಿ ಪವಾಡ ಕೂಡ ನಡೆಯಬೇಕಿದೆ. ಶ್ರೀಲಂಕಾ ತನ್ನ ಕೊನೆಯ ಪಂದ್ಯವನ್ನು ನ.9 ರಂದು ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

1996ರ ನಂತರ ಶ್ರೀಲಂಕಾದ ಕ್ರಿಕೆಟ್ ಮಂಡಳಿ ಆರ್ಥಿಕ ನೆರವಿಲ್ಲದೆ ತೆವಳುತ್ತ ಸಾಗುತ್ತಿತ್ತು. 1996ರಲ್ಲಿ ಅರ್ಜುನ್‌ ರಣತುಂಗ ನೇತೃತ್ವದ ತಂಡ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿದ ನಂತರ ಮಂಡಳಿಗೆ ಹಣದ ಹೊಳೆ ಹರಿದು ಶ್ರೀಮಂತ ಸಂಸ್ಥೆಯಾಗಿ ಮಾರ್ಪಟ್ಟಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!