• Wed. May 1st, 2024

ನ್ಯಾಯಮೂರ್ತಿ ಎ.ಜೆ.ಸದಾಶಿವಾ ಆಯೋಗ ವರದಿ ಹಾಗೂ ಕಾಂತರಾಜ್ ವರದಿ ಅನುಮೋದನೆಗೆ ಮುಖ್ಯಮಂತ್ರಿಯನ್ನು ಆಗ್ರಹಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ

PLACE YOUR AD HERE AT LOWEST PRICE

ಕೋಲಾರ, ನವೆಂಬರ್.೧೨: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ನ್ಯಾಯಮೂರ್ತಿ ಎ.ಜೆ.ಸದಾಶಿವಾ ಆಯೋಗ ವರದಿಯನ್ನು ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಹಾಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಕುರಿತ ಸಮೀಕ್ಷೆ ನಡೆಸಿರುವ ಕಾಂತರಾಜ್ ವರದಿಗೆ ಅನುಮೋದನೆ ಮಾಡಬೇಕು ಮತ್ತು ಇನ್ನಿತರೆ ಬೇಡಿಕೆಗಳಿಗೆ ಈಡೇರಿಕೆಗಾಗಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಡ್ಯಾಂ ಸಮೀಪ ಶನಿವಾರ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಕ.ದ.ಸಂ.ಸ ಪದಾಧಿಕಾರಿಗಳು, ಜಿಲ್ಲೆಯಲ್ಲಿ ಸ್ಥಾಪನೆಯಾಗಿರುವ ಕೈಗಾರಿಕಾ ವಲಯಗಳಲ್ಲಿ ಹಾಗೂ ಕೆ.ಜಿ.ಎಫ್.ನಲ್ಲಿ ಸ್ಥಾಪನೆ ಆಗಲಿರುವ ಕೈಗಾರಿಕಾ ವಲಯದಲ್ಲಿ ಭೂಮಿ ಮತ್ತು ಸಾಲ ನೀಡಿಕೆಯಲ್ಲಿ ಸರಳೀಕರಣಗೊಳಿಸಿ ಪರಿಶಿಷ್ಟ ಜಾತಿ ವರ್ಗದವರ ಉದ್ದಿಮೆಗಳನ್ನು ಮಾಡಲು ಸರ್ಕಾರವು ಶೇ.೨೪ ರಷ್ಟು ಮೀಸಲಾತಿ ಕಲ್ಪಿಸಿ ಉದ್ಯಮಿಗಳಿಗೆ ಶೇ.೧ರ ಬಡ್ಡಿದರದಲ್ಲಿ ಯೋಜನೆಗೆ ತಗಲುವ ಪೂರ್ತಿ ಹಣವನ್ನು ಸಾಲದ ರೂಪದಲ್ಲಿ ನೀಡಬೇಕು. ಈ ಸಾಲಕ್ಕೆ ಸರ್ಕಾರವೇ ಕೊಲೆಟರಲ್ ಶ್ಯೂರಿಟಿ ನೀಡಿ. ಪರಿಶಿಷ್ಟ ಜಾತಿ/ವರ್ಗ ಉದ್ದಿಮೆದಾರರು ಆರ್ಥಿಕವಾಗಿ ಸಬಲೀಕರಣರಾಗಲು ಪ್ರೋತ್ಸಾಹ ನೀಡಬೇಕು.

ಪರಿಶಿಷ್ಟ ಜಾತಿ/ವರ್ಗದ ಸಮುದಾಯಗಳು ಹೆಚ್ಚಾಗಿರುವ ಕೋಲಾರ ಜಿಲ್ಲೆಗೆ ಆಗಮಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಕೆಜಿಎಫ್ ಆಗಮಿಸಿದ್ದು, ಅವರು ಸಂಧಿಸಿದ ಕೆ.ಜಿ.ಎಫ್‌ನಲ್ಲಿ ಸುಮಾರು ೧೦ ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು. ಅದಕ್ಕಾಗಿ ೧೦ ಎಕರೆ ಭೂಮಿ ನೀಡಿ ಸ್ಥಳ ಗುರುತಿಸಿ ಅಲ್ಲಿ ಅದ್ಯಯನ ಕೇಂದ್ರ ಸ್ಥಾಪಿಸಬೇಕು. ಪರಿಶಿಷ್ಟ ಜಾತಿ/ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಪೌಷ್ಠಿಕ ಆಹಾರ ಮತ್ತು ಶುದ್ಧ ಕುಡಿಯುವ ನೀರು ಪೂರೈಸಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ಒದಗಿಸಬೇಕು. ವಿದ್ಯಾರ್ಥಿ ನಿಲಯಗಳಿಗೆ ಖಾಯಂ ಸಿ. ಮತ್ತು ಡಿ ಗ್ರೂಪ್ ನೌಕರರನ್ನು ನಿಯೋಜಿಸಿ ಖಾಲಿ ಹುದ್ದೆಗಳನ್ನು ತುಂಬಬೇಕು.

ಪರಿಶಿಷ್ಟ ಜಾತಿ/ವರ್ಗದ ಸಮುದಾಯವರಿಗೆ ಸರ್ಕರಿ ಗೋಮಾಳಗಳಲ್ಲಿ ಶೇ.೫೦ ರಷ್ಟು ಮೀಸಲಿಟ್ಟು ಅರ್ಜಿ ನಮೂನೆ ೫೦,೫೩,೫೭ರಲ್ಲಿ ಹಾಗೂ ೯೪.ಸಿ ಮತ್ತು ೯೪ ಸಿ.ಸಿ. ಅರ್ಜಿಗಳನ್ನು ಸಲ್ಲಿಸಿ ಭೂ ಮಾಲಿಕತ್ವಕ್ಕಾಗಿ ಕಾಯುತ್ತಿರುವ ದಲಿತರಿಗೆ ಜೇಷ್ಟತಾ ಆಧಾರದ ಮೇಲೆ ಸಾಗುವಳಿ ಚೀಟಿ ನೀಡಬೇಕು. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿ ಮಜರಾ ರಾಜಕೃಷ್ಠಾಪುರ ಗ್ರಾಮದಲ್ಲಿ ೧೫೦೦ ಜನ ಸಂಖ್ಯೆ ಇದ್ದು ಕೂಡಲೇ ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದೇ ವೇಳೆ ಬಂಗಾರಪೇಟೆ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ, ಜಿಲ್ಲೆಯಲ್ಲಿ ೬ ವಿಧಾನಸಭೆ ಕ್ಷೇತ್ರಗಳಲ್ಲೂ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಸಾಮಾಜಿಕ ಭದ್ರತೆ ಮತ್ತು ರಕ್ಷಣೆ ಇಲ್ಲವಾಗಿದೆ. ಜೊತೆಗೆ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ಮತ್ತು ದ್ವೇಷ ಭಾವನೆಯಿಂದ ನಡೆದುಕೊಳ್ಳುತ್ತಿದ್ದು, ಈ ಅಸಮಾನತೆ ಮತ್ತು ತಾರತಮ್ಯವನ್ನು ತಡೆಯಲು ಜಿಲ್ಲಾಡಳಿತಕ್ಕೆ ಸೂಚಿಸಲು ಕೋರಿ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಸೌಲಭ್ಯಗಳನ್ನು ಶಾಸಕರುಗಳು ತಮ್ಮ ಕೆಲವೇ ಹಿಂಬಾಲಕರಿಗೆ ನೀಡುವ ಮೂಲಕ ತೀರಾ ದುರ್ಬಲವಾಗಿರುವ ಅವಿದ್ಯಾವಂತ ಸಮುದಾಯದ ಜನರು ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರಿಗೆ ಆರ್ಥಿಕ ಸ್ವಾವಲಂಭನೆ ಎಂಬುದು ಮರೀಚಿಕೆಯಾಗಿದೆ ಎಂದು ದೂರಿದರು.

ಬಂಗಾರಪೇಟೆಯ ಹುಣಸನಹಳ್ಳಿ ಮಜರಾ ಹನುಮಂತಪುರ ಗುಡಿಸಲು ವಾಸಿಗಳನ್ನು ವಕ್ಕಲೆಬ್ಬಿಸದೆ ಅವರಿಗೆ ರಕ್ಷಣೆ ನಿಡಿ ಕೂಡಲೇ ಹಕ್ಕುಪತ್ರಗಳು ನೀಡಬೇಕು. ತ್ರೈಮಾಸಿಕ ಕುಂದುಕೊರತೆ ಸಭೆಗಳನ್ನು ನಡೆಸದ ತಾಲ್ಲೂಕು ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ದಲಿತ ಜಾಗೃತಿ ಸಮಿತಿಯಲ್ಲಿ ಪ್ರಾದೇಶಿಕ ಮತ್ತು ತಾಲ್ಲೂಕುವಾರು ಪ್ರಾತಿನಿಧ್ಯ ನೀಡುವ ಮೂಲಕ ಸಮಿತಿ ರಚನೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್, ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ, ದೇಶಹಳ್ಳಿ ಶ್ರೀನಿವಾಸ್, ಸಂಪತ್ ಕುಮಾರ್, ಟಿಲ್ಲಿ, ಮುನಿಸ್ವಾಮಿ, ಶಿವಕುಮಾರ್, ಟೇಕಲ್ ಮುನಿರಾಜು, ವಿದ್ಯಾರ್ಥಿ ಒಕ್ಕೂಟ ಮುರಳಿ, ಎಸ್.ಎಂ.ವೆ0ಕಟೇಶ್, ದಲಿತ ಸಂಘಟನೆಗಳ ಒಕ್ಕೂಟದ ಹುಣಸನಹಳ್ಳಿ ವೆಂಕಟೇಶ್, ಮದಿವಣ್ಣನ್, ರಘು, ನವೀನ್ ಕುಮಾರ್, ಮಂಜುನಾಥ್ ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!