PLACE YOUR AD HERE AT LOWEST PRICE
ಲೂಸ್ ಮಾದ ಯೋಗಿ ನಟಿಸುತ್ತಿರುವ ಮುಂದಿನ ಸಿನಿಮಾ ‘ರೋಸಿ’. ‘ಹೆಡ್‌ಬುಷ್’ ನಿರ್ದೇಶಿಸಿದ್ದ ಶೂನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಇದೇ ಸಿನಿಮಾ ಫಸ್ಟ್ ಲುಕ್ ಲಾಂಚ್ ಮಾಡುವ ವೇಳೆ ತಮಿಳಿನಲ್ಲಿ ಮಾತಾಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಸಂಬಂಧ ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ.
ಲೂಸ್ ಮಾದ ಯೋಗಿಯ ‘ರೋಸಿ’ ಸಿನಿಮಾದಲ್ಲಿ ತಮಿಳಿನ ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಕೂಡ ನಟಿಸುತ್ತಿದ್ದಾರೆ. ಹೀಗಾಗಿ ಸ್ಯಾಂಡಿ ಫಸ್ಟ್ ಲುಕ್ ರಿವೀಲ್ ಮಾಡಲಾಗಿತ್ತು. ಈ ವೇಳೆ ಕನ್ನಡದಲ್ಲಿಯೇ ಮಾತು ಆರಂಭಿಸಿದ್ದ ಲೂಸ್ ಮಾದ ಯೋಗಿ ಮಧ್ಯದಲ್ಲಿ ತಮಿಳಿನಲ್ಲಿ ಮಾತಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಯೋಗಿ ಬೆಂಗಳೂರಿನಲ್ಲೇ ತಮಿಳು ಮಾತನಾಡಿದ್ದು, ಯೋಗಿ ಮೇಲೆ ಕನ್ನಡಿಗರು ಸಿಡಿಮಿಡಿಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ಬಗ್ಗೆ ಚರ್ಚೆ ಆರಂಭ ಆಗುತ್ತಿದ್ದಂತೆ ಲೂಸ್ ಮಾದ ಯೋಗಿ ಕ್ಷಮೆ ಹೇಳಿದ್ದಾರೆ. ವಿಡಿಯೋ ಮೂಲಕ ತಾನೇಕೆ ಅಲ್ಲಿ ತಮಿಳಿನಲ್ಲಿ ಮಾತಾಡಿದೆ ಅನ್ನೋದನ್ನು ವಿವರಿಸಿದ್ದಾರೆ.
“ನಿನ್ನ ರೋಸಿ ಸಿನಿಮಾದ ಒಂದು ಪೋಸ್ಟರ್ ಲಾಂಚ್ ಮಾಡಿದೆ. ಆ ಒಂದು ಜಾಗದಲ್ಲಿ ತಮಿಳು ಮಾತಾಡಿದ್ದೀನಿ ಅಂತ ಸಾಕಷ್ಟು ಜನರಿಗೆ ಬೇಜಾರಾಗಿದೆ. ನಿಜ ಏನು ಅಂದರೆ, ನಾನು ಕನ್ನಡದಲ್ಲಿ ಶುರು ಮಾಡಿ, ತಮಿಳಿನಲ್ಲಿ ಮಾತಾಡಿ ಕನ್ನಡದಲ್ಲಿಯೇ ಮುಗಿಸಿದ್ದೇನೆ.” ಎಂದು ಲೂಸ್ ಮಾದ ಯೋಗಿ ಆ ಸಂದರ್ಭವನ್ನು ವಿವರಿಸಿದ್ದಾರೆ.
ಹಾಗೇ ಯಾರಿಗೂ ಅವಮಾನ ಮಾಡಬೇಕು ಅಂತ ಮಾಡಿಲ್ಲ. ಅಲ್ಲಿ ತಮಿಳರು ಹೆಚ್ಚಿದ್ದರು. ಅದಕ್ಕೆ ತಮಿಳಿನಲ್ಲಿ ಮಾತಾಡಿದೆ ಎಂದಿದ್ದಾರೆ. “ಆದರೂ ಕೂಡ ತುಂಬಾ ಜನಕ್ಕೆ ನೋವಾಗಿದ್ದರೆ, ದಯವಿಟ್ಟು ಕ್ಷಮೆ ಇರಲಿ. ನಾನು ಯಾರಿಗೂ ಅವಮಾನ ಮಾಡಬೇಕು ಅಂತ ಆಗಲಿ. ಬೇಜಾರು ಮಾಡಬೇಕು ಅಂತಾಗಲಿ ಅಂತ ನಾನು ತಮಿಳನ್ನು ಉಪಯೋಗಿಸಲಿಲ್ಲ. ಅಲ್ಲಿ ಸಾಕಷ್ಟು ಜನ ತಮಿಳಿನವರು ಇದ್ದರು. ಹಾಗಾಗಿ ತಮಿಳು ಮಾತಾಡಿದೆ.” ಎಂದಿದ್ದಾರೆ.
‘ರೋಸಿ’ ಸಿನಿಮಾವನ್ನು ಮೂರು ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಹೀಗಾಗಿ ತಮಿಳಿನಲ್ಲಿ ಮಾತಾಡುವುದಕ್ಕೆ ಅದೂ ಒಂದು ಕಾರಣ ಎಂದಿದ್ದಾರೆ. “ಈ ಸಿನಿಮಾವನ್ನು ತೆಲುಗು, ತಮಿಳು, ಕನ್ನಡ ಮೂರು ಭಾಷೆಯಲ್ಲಿ ಮಾಡುತ್ತಿರೋದ್ರಿಂದ ಆ ಜಾಗದಲ್ಲಿ ಹಂಗೆ ಮಾತಾಡಿದ್ದೀನಿ. ಆದರೂ ಕೂಡ ತಪ್ಪು ಅಂತ ಅನಿಸಿದರೆ ಕ್ಷಮೆ ಇರಲಿ.” ಎಂದು ಹೇಳಿದ್ದಾರೆ.