• Fri. May 10th, 2024

PLACE YOUR AD HERE AT LOWEST PRICE

ತೆಲಂಗಾಣದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಹನ್ನೆರಡು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಅವಿಭಜಿತ ತೆಲಂಗಾಣದಲ್ಲಿ ‘ಸೀತಕ್ಕ’ ಎಂದೇ ಜನಪ್ರಿಯರಾಗಿರುವ, ಮಾಜಿ ನಕ್ಸಲ್ ದನ್ಸಾರಿ ಅನಸೂಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮಾದಿಗ ಸಮುದಾಯದ ಹಿರಿಯ ಶಾಸಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂಪುಟದ ನೂತನ ಸಚಿವರ ಹಿನ್ನೆಲೆ ಹಾಗೂ ಅವರಿಗೆ ಹಂಚಿಕೆಯಾಗಿರುವ ಖಾತೆಗಳ ಕುರಿತ ಕಿರು ಪರಿಚಯವನ್ನು ಈ ಲೇಖನದ ಮೂಲಕ ಮಾಡಿಕೊಡಲಾಗಿದೆ.

ರೇವಂತ್ ರೆಡ್ಡಿ–ಮುಖ್ಯಮಂತ್ರಿ, ಭಟ್ಟಿ ವಿಕ್ರಮಾರ್ಕ ಮಲ್ಲು-ಉಪ ಮುಖ್ಯಮಂತ್ರಿ, ಕಂದಾಯ. ಉತ್ತಮ್ ಕುಮಾರ್ ರೆಡ್ಡಿ–ವಸತಿ, ಕೋಮಟಿ ರೆಡ್ಡಿ–ನಗರಾಭಿವೃದ್ಧಿ, ಶ್ರೀಧರ್ ಬಾಬು–ಹಣಕಾಸು, ಪೊಂಗುಲೇಟಿ–ನೀರಾವರಿ, ಕೊಂಡ ಸುರೇಖಾ-ಮಹಿಳಾ ಕಲ್ಯಾಣ, ದಾಮೋದರ ರಾಜನರಸಿಂಹ-ವೈದ್ಯಕೀಯ ಮತ್ತು ಆರೋಗ್ಯ, ಜುಪಲ್ಲಿ-ಆಹಾರ ಮತ್ತು ನಾಗರಿಕ ಸರಬರಾಜು, ಸೀತಕ್ಕ-ಗಿರಿಜನ ಕಲ್ಯಾಣ, ತುಮ್ಮಲ-ಮೂಲಭೂತ ಸೌಕರ್ಯ.

. ರೇವಂತ ರೆಡ್ಡಿಮುಖ್ಯಮಂತ್ರಿ:

ಎಬಿವಿಪಿ ಸಂಘಟನೆ ಮೂಲಕ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಕಾಲಿಟ್ಟ ರೇವಂತ್ ರೆಡ್ಡಿ, ಅವಿಭಜಿತ ಆಂಧ್ರಪ್ರದೇಶದ ಬಹುತೇಕ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರು. ರೇವಂತ್ ರೆಡ್ಡಿ 2001 ರಿಂದ ಬಿಆರ್‌ಎಸ್‌ (ಈ ಹಿಂದಿನ ಟಿಆರ್‌ಎಸ್‌) ಪಕ್ಷದ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. 2006ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಪಕ್ಷ ತೊರೆದಿದ್ದರು. ಬಳಿಕ 2007ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ನಂತರ 2009-2014ರ ನಡುವೆ ಎರಡು ಬಾರಿ ಕೊಂಡಗಲ್ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷ (ಟಿಡಿಪಿ) ಶಾಸಕರಾಗಿದ್ದರು. 2017ರಲ್ಲಿ ಕಾಂಗ್ರೆಸ್‌ ಸೇರಿದ ಅವರು, ತೆಲಂಗಾಣ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಭಟ್ಟಿ ವಿಕ್ರಮಾರ್ಕ ಮಲ್ಲುಡಿಸಿಎಂ:

ಖಮ್ಮಂ ಜಿಲ್ಲೆಯ ವೈರಾ ಮಂಡಲದ ಸ್ನಾನಲ ಲಕ್ಷ್ಮೀಪುರಂ ಗ್ರಾಮದ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೆಲಂಗಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಜಾತಿಯ ಭಟ್ಟಿ ಅವರನ್ನು ಕಾಂಗ್ರೆಸ್ ಡಿಸಿಎಂ ಹುದ್ದೆಗೆ ಪರಿಗಣಿಸಿದ್ದು, ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಮಧಿರಾ ವಿಧಾನಸಭಾ ಕ್ಷೇತ್ರದಿಂದ 2009, 2014, 2018 ಮತ್ತು 2023ರ ಚುನಾವಣೆಗಳಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2007ರಲ್ಲಿ ಖಮ್ಮಂ ಜಿಲ್ಲೆಯಿಂದ ಎಂಎಲ್‌ಸಿಯಾಗಿ ಗೆದ್ದಿದ್ದರು. ಅವರು 2009 ಮತ್ತು 2011 ರ ನಡುವೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಸಚೇತಕರಾಗಿದ್ದರು. ಭಟ್ಟಿ ಅವರು 2011 ರಿಂದ 2014 ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಎನ್. ಉತ್ತಮ್ ಕುಮಾರ್ ರೆಡ್ಡಿ (ಸೂರ್ಯಪೇಟೆ ಜಿಲ್ಲೆ)

ಉತ್ತಮ್ ಕುಮಾರ್ ರೆಡ್ಡಿ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆರು ಬಾರಿ ಶಾಸಕರಾಗಿರುವ ಅವರು, 1999 ರಿಂದ 2009 ರವರೆಗೆ ಕೊಡಾಡ್‌ನಿಂದ. 2010ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕೆ. ರೋಸಯ್ಯ ರಾಜೀನಾಮೆ ನೀಡಿದ ನಂತರ ಹುಜೂರ್‌ ನಗರದಿಂದ ಸ್ಪರ್ಧಿಸಿದ್ದರು. ಎನ್ ಕಿರಣ್ ಕುಮಾರ್ ರೆಡ್ಡಿ ಮುಖ್ಯಮಂತ್ರಿಯಾದಾಗ, ಅವರ ಸಂಪುಟದಲ್ಲಿ ವಸತಿ ಸಚಿವರಾಗಿದ್ದರು. ಅವರು ಫೆಬ್ರವರಿ 2015 ರಿಂದ ಜೂನ್ 2021 ರವರೆಗೆ ಆರು ವರ್ಷಗಳ ಕಾಲ ತೆಲಂಗಾಣ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಡಿಸೆಂಬರ್ 2018ರ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಹುಜೂರ್ ನಗರದಿಂದ ಗೆದ್ದರು. ಆದರೆ, 2019ರ ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಲ್ಗೊಂಡದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ಕೇಳಿಕೊಂಡಿತು. ಅಲ್ಲಿ ಗೆದ್ದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಅವರ ಪತ್ನಿ ಪದ್ಮಾವತಿ ಕೂಡ ಕೊಡ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೋಮಟಿರೆಡ್ಡಿ ವೆಂಕಟ್ ರೆಡ್ಡಿ (ನಲ್ಗೊಂಡ ಜಿಲ್ಲೆ):

ನಲ್ಗೊಂಡದಿಂದ ಐದು ಬಾರಿ ಶಾಸಕರಾಗಿ ಮತ್ತು ಭುವನಗಿರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಅವರು, ದಿವಂಗತ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಸಂಪುಟದಲ್ಲಿ ಐಟಿ ಸಚಿವರಾಗಿದ್ದರು. 2018ರಲ್ಲಿ ಅವರು ನಲ್ಗೊಂಡದಿಂದ ಸ್ಪರ್ಧಿಸಿ ಬಿಆರ್‌ಎಸ್‌ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. ಆದರೆ, 2019ರಲ್ಲಿ ಭುವನಗಿರಿಯಿಂದ ಸಂಸದರಾಗಿ ಆಯ್ಕೆಯಾದರು.

ಪೊನ್ನಂ ಪ್ರಭಾಕರ್ (ಸಿದ್ದಿಪೇಟೆ ಜಿಲ್ಲೆ):

ತಮ್ಮ ಕಾಲೇಜು ದಿನಗಳಿಂದಲೂ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದ ಪ್ರಭಾಕರ್ 2009 ರಲ್ಲಿ ಕರೀಂನಗರದಿಂದ ಸಂಸದರಾಗಿ ಆಯ್ಕೆಯಾದರು. ಟಿಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಅವರು ಈ ಬಾರಿ ಹುಸ್ನಾಬಾದ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.

ದನ್ಸಾರಿ ಅನಸೂಯಾ (ಮುಲುಗು ಜಿಲ್ಲೆ)

ಜನಪ್ರಿಯವಾಗಿ ಸೀತಕ್ಕ ಎಂದು ಕರೆಯಲ್ಪಡುವ ದನ್ಸಾರಿ ಅನಸೂಯಾ ಅವರು ತಮ್ಮ 14ನೇ ವಯಸ್ಸಿನಲ್ಲಿ ನಕ್ಸಲ್ ಗುಂಪಿಗೆ ಸೇರಿದರು. 1997ರಲ್ಲಿ ನಕ್ಸಲ್ ಗುಂಪು ತೊರೆದು ಮುಖ್ಯವಾಹಿನಿಗೆ ಬಂದ ಅವರು ವಕೀಲರಾದರು. 2009 ರಲ್ಲಿ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯಾಗಿ ಮುಲುಗುನಿಂದ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದರು. ಆದರೆ, 2014ರಲ್ಲಿ ಅವರು ಬಿಆರ್‌ಎಸ್‌ನ ಅಜ್ಮೀರಾ ಚಂದುಲಾಲ್ ವಿರುದ್ಧ ಸೋತರು. ಮೂರು ವರ್ಷಗಳ ನಂತರ ಕಾಂಗ್ರೆಸ್ ಸೇರಿದ ಅವರು 2018ರ ಚುನಾವಣೆಯಲ್ಲಿ ಮತ್ತೆ ಶಾಸಕರಾದರು. ಮೂರನೇ ಬಾರಿಗೆ ಗೆದ್ದಿರುವ ಅವರು ಈಗ ಗಿರಿಜನ ಕಲ್ಯಾಣ ಸಚಿವರಾಗಿದ್ದಾರೆ.

ಸಿ. ದಾಮೋದರ ರಾಜ ನರಸಿಂಹ (ಸಂಗರೆಡ್ಡಿ ಜಿಲ್ಲೆ)

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಾಗಿರುವ ನರಸಿಂಹ ಅವರು 2011ರಿಂದ 2014 ರಲ್ಲಿ ರಾಜ್ಯ ವಿಭಜನೆಯ ತನಕ ಅವಿಭಜಿತ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದರು. ಆಂಧೋಲೆಯಿಂದ ಮೂರು ಬಾರಿ ಶಾಸಕರಾಗಿದ್ದ ಅವರು ಉನ್ನತ ಶಿಕ್ಷಣ ಮತ್ತು ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಡಿ. ಶ್ರೀಧರ್ ಬಾಬು (ಪೆದ್ದಪಲ್ಲಿ ಜಿಲ್ಲೆ)

ಮಂಥನಿಯಿಂದ ಐದು ಬಾರಿ ಶಾಸಕರಾಗಿದ್ದ ಶ್ರೀಧರ್ ಬಾಬು ಅವರು ನಾಗರಿಕ ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವಿಭಜಿತ ಆಂಧ್ರಪ್ರದೇಶ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು 1999, 2004, 2009, 2018 ಮತ್ತು 2023 ರಲ್ಲಿ ಮಂಥಣಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತೆಲಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ.

ತುಮ್ಮಲ ನಾಗೇಶ್ವರ ರಾವ್ (ಖಮ್ಮಂ ಜಿಲ್ಲೆ)

ಮೂಲತಃ ತೆಲುಗು ದೇಶಂ ಪಕ್ಷದ ನಾಯಕರಾಗಿದ್ದ ನಾಗೇಶ್ವರ ರಾವ್, 1985, 1994 ಮತ್ತು 1999 ರಲ್ಲಿ ಸಾತುಪಲ್ಲಿಯಿಂದ ಗೆದ್ದಿದ್ದರು. 2009 ರಲ್ಲಿ ಖಮ್ಮಂ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾದ ಅವರು, 2014 ರಲ್ಲಿ ಸೋತರು. ನಂತರ ಬಿಆರ್‌ಎಸ್‌ ಸೇರಿದ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ, ಕೆ. ಚಂದ್ರಶೇಖರ ರಾವ್ ಅವರ ಸಂಪುಟದಲ್ಲಿ ರಸ್ತೆ ಮತ್ತು ಕಟ್ಟಡ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಚುನಾವಣೆಗೂ ಮೊದಲು ಬಿಆರ್‌ಎಸ್‌ ತೊರೆದು ಕಾಂಗ್ರೆಸ್ ಸೇರಿದ್ದರು.

ಅವಿಭಜಿತ ಆಂಧ್ರಪ್ರದೇಶದ ಹಿರಿಯ ನಾಯಕರಾಗಿರುವ ಅವರು, ಮೂರು ಜನ ಮುಖ್ಯಮಂತ್ರಿಗಳಾದ ಎನ್ ಟಿ ರಾಮರಾವ್, ಎನ್ ಚಂದ್ರಬಾಬು ನಾಯ್ಡು ಮತ್ತು ಕೆಸಿಆರ್ ಅವರೊಂದಿಗೆ ಕೆಲಸ ಮಾಡಿದ ಖ್ಯಾತಿ ಹೊಂದಿದ್ದಾರೆ. ಕಾಂಗ್ರೆಸ್ ಸೇರಿದ ನಂತರ ಹಾಲಿ ಸಚಿವ ಪುವ್ವಾಡ ಅಜಯ್ ಕುಮಾರ್ ಅವರನ್ನು ಖಮ್ಮಂನಲ್ಲಿ ಸೋಲಿಸಿದ್ದಾರೆ.

ಪೊಂಗುಲೇಟಿ ಶ್ರೀನಿವಾಸ ರೆಡ್ಡಿ (ಖಮ್ಮಂ ಜಿಲ್ಲೆ)

2014ರ ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ಅವರು ವೈಎಸ್ಆರ್‌ಸಿಪಿ ಚಿನ್ಹೆಯಿಂದ ಖಮ್ಮಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು. ಆದರೆ, ನಂತರದ ದಿನಗಳಲ್ಲಿ ಬಿಆರ್‌ಎಸ್‌ ಸೇರಿದರು. ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲ. ಈ ವರ್ಷದ ಆರಂಭದಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಮಾನತುಗೊಳಿಸಲಾಗಿತ್ತು. ಜುಲೈನಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದ ಅವರು, ಖಮ್ಮಂ ಜಿಲ್ಲೆಯ ಪಲೈರ್ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದಾರೆ.

ಕೊಂಡ ಸುರೇಖಾ (ವಾರಂಗಲ್ ಜಿಲ್ಲೆ)

ನಾಲ್ಕು ಬಾರಿ ಶಾಸಕಿಯಾಗಿರುವ ಸುರೇಖಾ ಅವರು ಡಾ. ವೈ ಎಸ್ ರಾಜಶೇಖರ್ ರೆಡ್ಡಿ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 2009 ರಲ್ಲಿ ಅವರ ಮರಣದ ನಂತರ ಅವರು ರಾಜೀನಾಮೆ ನೀಡಿದರು. ನಂತರ, ಜಗನ್ ಮೋಹನ್ ರೆಡ್ಡಿ ನೇತೃತ್ವದ YSRCP ಸೇರಿದರು. ಆದರೆ, 2013 ರಲ್ಲಿ ರಾಜೀನಾಮೆ ನೀಡಿದರು. 2014 ರ ಚುನಾವಣೆಗೆ ಮುಂಚಿತವಾಗಿ ಸುರೇಖಾ ಬಿಆರ್‌ಎಸ್‌ ಸೇರಿದ್ದರು. ವಾರಂಗಲ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ಅವರಿಗೆ 2018 ರಲ್ಲಿ ಟಿಕೆಟ್ ನಿರಾಕರಿಸಲಾಯಿತು. ಬಿಆರ್‌ಎಸ್‌ಗೂ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಸೇರಿದರು. ಇದೀಗ ವಾರಂಗಲ್ ಪೂರ್ವ ಕ್ಷೇತ್ರದಿಂದ ಕಾಂಗ್ರೆಸ್ ಚಿನ್ಹೆಯಡಿ ಗೆದ್ದಿದ್ದಾರೆ. ಜೂಪಲ್ಲಿ ಕೃಷ್ಣರಾವ್ (ನಾಗರ ಕರ್ನೂಲ್ ಜಿಲ್ಲೆ)

ಕೊಲ್ಲಾಪುರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೃಷ್ಣರಾವ್, ವೈ ಎಸ್ ರಾಜಶೇಖರ್ ರೆಡ್ಡಿ ಮತ್ತು ಎನ್ ಕಿರಣ್ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 2011ರಲ್ಲಿ ಕಾಂಗ್ರೆಸ್ ತೊರೆದು ಟಿಆರ್‌ಎಸ್‌ ಸೇರಿದ್ದರು. 1999ರ ನಂತರ 2018 ರಲ್ಲಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ವಿರುದ್ಧ ಸೋತರು. 2023ರ ಚುನಾವಣೆಗೆ ಮುಂಚಿತವಾಗಿ, ಅವರು ಬಿಆರ್‌ಎಸ್‌ ತೊರೆದು ಕಾಂಗ್ರೆಸ್‌ ಸೇರಿದರು, ಆ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.

ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!