• Sat. Apr 27th, 2024

PLACE YOUR AD HERE AT LOWEST PRICE

ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ವಾಕ್ ಅಂಡ್ ರನ್ ಎಂಬ ಘೋಷವಾಕ್ಯದೊಂದಿಗೆ ಬೃಹತ್ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರದಂದು ಕೆಜಿಎಫ್ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೆ.ಜಿ.ಎಫ್ ನಗರಸಭೆ ಮೈದಾನದಿಂದ ಪ್ರಾರಂಭಗೊಂಡ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೆಜಿಎಫ್ ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಅವರು ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವುದರಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ಮಾದಕ ದ್ರವ್ಯ, ಮಾದಕ ವಸ್ತುಗಳಿಂದ ದೂರ ಉಳಿಯಬೇಕು. ಮಾದಕ ವ್ಯಸನಿಗಳಾಗಬಾರದು.

ಭವಿಷ್ಯತ್ತಿನ ಉತ್ತಮ ಪ್ರಜೆಗಳಾಗಲು ಹಾಗೂ ಉತ್ತಮ ಸಮಾಜ ನಿರ್ಮಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಬೇಕು. ಯಾವುದೇ ಕಾರಣಕ್ಕೂ ಮಾದಕ ವಸ್ತುಗಳನ್ನು ಬಳಸಬಾರದೆಂದರು. ಮಾದಕ ದ್ರವ್ಯ ಹಾಗೂ ಮಾದಕ ವಸ್ತುಗಳ ಮಾರಾಟ, ಬಳಸುವಿಕೆಯನ್ನು ತಡೆಯುವಲ್ಲಿ ಯುವಜನತೆಯು ಪ್ರಮುಖ ಪಾತ್ರವಹಿಸಿ, ಮಾದಕ ವಸ್ತುಗಳ ಮುಕ್ತ ಸಮಾಜವನ್ನು ನಿರ್ಮಿಸಲು ಕರೆ ನೀಡಿದರು.

ತಹಶೀಲ್ದಾರ್ ನಾಗವೇಣಿ ಅವರು ಮಾತನಾಡಿ, ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರ ಬರುವುದು ಕಷ್ಟ, ಇದು ಮಾನವನ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಲಿದೆ, ಇವುಗಳ ಸೇವನೆಯಿಂದ ಮೆದುಳಿನಲ್ಲಿ, ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಮಾದಕ ವಸ್ತುಗಳ ವಿರುದ್ದದ ಕಾರ್ಯಕ್ರಮದ ಅಂಗವಾಗಿ, ನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಕುರಿತು ಪೊಲೀಸ್ ಇಲಾಖೆಯು ಸಮುದಾಯದ ಸಹಭಾಗಿತ್ವದಲ್ಲಿ ಹಲವು ಜನಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಸಮಾಜದಲ್ಲಿ ಮಾದಕ ವಸ್ತುಗಳನ್ನು ತಡೆಗಟ್ಟಲು ಸಾರ್ವಜನಿಕರ ಹಾಗೂ ಯುವಕರ ಸಹಕಾರವು ಅತ್ಯವಶ್ಯಕವಾಗಿದೆಯೆಂದರು. ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಚಿತ್ರನಟಿ ರಾಧಿಕ ಅವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವಜನತೆಯು ಮಾದಕ ವಸ್ತುಗಳಿಂದ ದೂರ ಉಳಿಯಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಜಿಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಮಂಜುನಾಥ, ಮುಜಾಫರ್ ಎ ಮಂಜೂರಿ, ಮಂಜು ಎಂ ಮತ್ತಿತರರು ಭಾಗವಹಿಸಿದ್ದರು.

 ಡಿವೈಎಸ್ಪಿ ಪಾಂಡುರಂಗ ಸೇರಿದಂತೆ, ಜಿಲ್ಲೆಯ ಎಲ್ಲಾ ವೃತ್ತ ನಿರೀಕ್ಷಕರು, ಪಿಎಸ್‌ಐಗಳು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮೆರವಣಿಗೆಯಲ್ಲಿ ಭಾಗವಹಿಸಿ, ಮಾದಕ ವಸ್ತುಗಳ ಉಪಯೋಗದಿಂದ ಉಂಟಾಗುವ ದುಷ್ಟರಿಣಾಮಗಳ ಕುರಿತು ಜನಜಾಗೃತಿ ಮೂಡಿಸಿದರು.

ಮೆರವಣಿಗೆಯು ಬಿ.ಎಂ.ರಸ್ತೆ, ಸೂರಜ್‌ಮುಲ್ ವೃತ್ತ, ಗಾಂಧಿವೃತ್ತ, ಪ್ರಿಚರ್ಡ್ರಸ್ತೆ, ಸ್ವರ್ಣಕುಪ್ಪಂ ವೃತ್ತ, ಗೀತಾರಸ್ತೆಯ ಮೂಲಕ ಹಾದುಬಂದು ರಾಬರ್ಟ್ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಸಮಾರೋಪ ಗೊಂಡಿತು. ಕೆಜಿಎಫ್ ಶಾಲಾ ಕಾಲೇಜುಗಳಿಂದ ಸುಮಾರು ೨೦೦೦ ಮಂದಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!